More

    ಶಾಲೆಗಳಲ್ಲಿ ಕನ್ನಡದ ತಾತ್ಸಾರ ಸಲ್ಲದು  – ವಾಗ್ಮಿ ಜಿ.ಎಸ್. ನಟೇಶ್ ಅಭಿಮತ -ಭಾಷಾ ಬೋಧನಾ ಪುನಶ್ಚೇತನಾ ಕಾರ್ಯಕ್ರಮ

    ದಾವಣಗೆರೆ: ಶಾಲೆಗಳಲ್ಲಿ ಕನ್ನಡ ವಿಷಯದ ಕುರಿತಾಗಿ ತಾತ್ಸಾರ ಹೆಚ್ಚಿದೆ. ಇದು ನಿಲ್ಲದ ಹೊರತಾಗಿ ಭಾಷಾ ಕಲಿಕೆಗೆ ಹೊಡೆತ ತಪ್ಪಿದ್ದಲ್ಲ ಎಂದು ಶಿವಮೊಗ್ಗದ ವಾಗ್ಮಿ ಜಿ.ಎಸ್. ನಟೇಶ್ ಹೇಳಿದರು.
    ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಭಾಷಾ ಬೋಧನಾ ಪುನಶ್ಚೇತನಾ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಇತರೆ ವಿಷಯಗಳಿಗೆ ಸಿಗುವ ಮನ್ನಣೆ ಕನ್ನಡ ಬೋಧನೆಗೆ ಸಿಗುತ್ತಿಲ್ಲ. ಇದರಿಂದ ಮಕ್ಕಳಲ್ಲೂ ಕನ್ನಡದ ಅನಾದರ ಹೆಚ್ಚಬಹುದು ಎಂದು ಆತಂಕ ವ್ಯಕ್ತಪಡಿಸಿದರು.
    ಕನ್ನಡದ ಟೆಕ್ಸ್ಟ್ ಬುಕ್‌ಗಿಂತಲೂ ಬ್ಯಾಂಕ್ ಪಾಸ್‌ಬುಕ್ ಓದುವ ಶಿಕ್ಷಕರೇ ಹೆಚ್ಚಿದ್ದಾರೆ. ಶಿಕ್ಷಕರು ಕನ್ನಡದ ಕೃತಿಗಳನ್ನು ಓದುವಂತಾದರೆ ಮಕ್ಕಳಲ್ಲೂ ಪದ ಸಂಪತ್ತನ್ನು ವೃದ್ಧಿಸಬಹುದು ಎಂದರು.
    ಕನ್ನಡ ಸಾಹಿತ್ಯ ಅಧ್ಯಯನದಿಂದ ನಮ್ಮಲ್ಲಿ ಚೈತನ್ಯ ಬರಲಿದೆ. ಕನ್ನಡಕ್ಕೆ ನಾವು ಶರಣಾದರೆ ಅದು ನಮ್ಮನ್ನು ರಕ್ಷಿಸುತ್ತದೆ. ಬದಲಾಗಿ ಕನ್ನಡವನ್ನು ನಾನು ರಕ್ಷಿಸುವೆ ಎಂದಾದರೆ ನಾನಾಗಲೀ, ಕನ್ನಡವಾಗಲೀ ಉಳಿಯೋದಿಲ್ಲ ಎಂದರು.
    ಶಿಕ್ಷಕರಲ್ಲಿ ಅಂತರಂಗ ಹಾಗೂ ಬಹಿರಂಗ ಶುದ್ಧತೆ ಮುಖ್ಯ. ಗಾಂಭೀರ್ಯತೆ ಜತೆಗೆ ಉತ್ತಮ ಚಾರಿತ್ರೃವೂ ಬೇಕು. ವೈಯಕ್ತಿಕ ಭರತವಸೆ ಜತೆಗೆ ವಿದ್ಯಾರ್ಥಿಗಳ ಬಗ್ಗೆ ಪ್ರೇಮವೂ ಅತ್ಯಗತ್ಯ. ಮಕ್ಕಳು ದಿನವೂ ನಿಯಮಿತವಾಗಿ ಕವಿತೆಯ ಸಾಲುಗಳನ್ನು ಮಕ್ಕಳು ಕಲಿಯುವಂತಹ ಅಭಿರುಚಿ ಬೆಳೆಸಬೇಕು ಎಂದು ಹೇಳಿದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿಡಿಪಿಐ ಜಿ. ಕೊಟ್ರೇಶ್, ಕನ್ನಡ ಮಾಧ್ಯಮ ಎಂದರೆ ಕೀಳಿರಿಮೆ, ಇಂಗ್ಲಿಷ್ ಮಾಧ್ಯಮ ಎಂದರೆ ಪ್ರತಿಷ್ಠೆ ಎಂಬ ಮನೋಭಾವ ಕೈಬಿಡಬೇಕು. ಕನ್ನಡದಲ್ಲಿ ಮಾತನಾಡಿದರೆ ಶಿಕ್ಷೆ ನೀಡುವ ಶಾಲೆಗಳ ಮನಸ್ಥಿತಿ ಸರಿಯಲ್ಲ ಎಂದರು.
    ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದ ಮಕ್ಕಳಲ್ಲಿರುವ ಕನ್ನಡದ ಉಚ್ಚಾರಣೆ ದೋಷ, ಅಲ್ಪಪ್ರಾಣ- ಮಹಾಪ್ರಾಣದ ವ್ಯತ್ಯಾಸ ಸರಿಪಡಿಸುವ ಕೆಲಸವನ್ನು ಶಿಕ್ಷಕರು ನಿರ್ವಹಿಸಬೇಕಿದೆ. ಸಂಪರ್ಕಕ್ಕಾಗಿ ಇತರೆ ಭಾಷೆಗಳನ್ನು ಕಲಿಯುವುದು ತಪ್ಪಲ್ಲ. ಸಾವಿರಾರು ವರ್ಷದ ಇತಿಹಾಸವುಳ್ಳ ಕನ್ನಡ ಭಾಷೆಯ ಪ್ರೌಢಿಮೆಯನ್ನೂ ಉಳಿಸಬೇಕು. ಇಲ್ಲವಾದಲ್ಲಿ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ತಿಳಿಸಿದರು.
    ದಕ್ಷಿಣ ವಲಯ ಬಿಇಒ ಡಾ. ಪುಷ್ಪಲತಾ ಮಾತನಾಡಿ ಶಿಕ್ಷಕರು ಕನ್ನಡದ ಬೋಧನೆ ಜತೆಗೆ ನಮ್ಮ ಸಂಸ್ಕಾರ-ಸಂಸ್ಕೃತಿಯನ್ನೂ ಉಳಿಸಬೇಕಿದೆ. ಪಠ್ಯವಲ್ಲದೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಿದಲ್ಲಿ ಮಗುವಿನ ಕಲಿಕೆ ಗಟ್ಟಿಗೊಳ್ಳಲಿದೆ ಎಂದರು.
    ಉತ್ತರ ವಲಯ ಬಿಇಒ ಶೇರ್ ಅಲಿ ಮಾತನಾಡಿ ರಾಜ್ಯೋತ್ಸವ ಆಚರಣೆ ಸಾಂಕೇತಿಕವಾಗಿ ಆದರೆ ಸಾಲದು. ಪ್ರತಿ ಮನೆ, ಶಾಲೆ-ಕಾಲೇಜುಗಳಲ್ಲೂ ಕರ್ನಾಟಕ ನಮ್ಮದು ಎಂಬ ಮನೋಭಾವ ಬರಬೇಕಿದೆ ಎಂದು ಆಶಿಸಿದರು.
    ಸಾಹಿತಿ ಬಾ..ಬಸವರಾಜಯ್ಯ ಮಾತನಾಡಿ ಕನ್ನಡ ಭಾಷಾ ಶುದ್ಧತೆ ಕ್ಷೀಣಿಸಲು ಪಾಲಕರು, ಶಾಲೆಗಳಲ್ಲದೆ ಮಾಧ್ಯಮಗಳೂ ಕಾರಣವಾಗಿವೆ. ಕನಿಷ್ಠ ಪ್ರೌಢಶಾಲೆ ಹಂತದವರೆಗಾದರೂ ಪ್ರಾಂತೀಯ ಭಾಷೆಯಲ್ಲಿ ಶಿಕ್ಷಣ ಜಾರಿಯಾಗಬೇಕಿದೆ ಎಂದು ಹೇಳಿದರು.
    ಸುವರ್ಣ ಕರ್ನಾಟಕ ಸಂಭ್ರಮದ ಅಂಗವಾಗಿ ದಾವಣಗೆರೆ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾಹಿತಿ ಹಕ್ಕು ಅಧಿನಿಯಮ ಕುರಿತ ಪುಸ್ತಕ ಬಿಡುಗಡೆ ಮಾಡಲಾಯಿತು.
    ಒಕ್ಕೂಟದ ಅಧ್ಯಕ್ಷ ಟಿ.ಎಂ. ಉಮಾಪತಯ್ಯ, ಪ್ರಧಾನ ಕಾರ್ಯದರ್ಶಿ ಸಿ. ಶ್ರೀರಾಮಮೂರ್ತಿ, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಲೋಕೇಶ್ ತಾಳಿಕಟ್ಟೆ, ವಾಗೀಶ ಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts