More

    ಶಾಲಾ ಆವರಣ ಸಂಪೂರ್ಣ ಕೆಸರುಮಯ

    ಲಕ್ಷೆ್ಮೕಶ್ವರ: ಭಾರಿ ಮಳೆಯಿಂದಾಗಿ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣ ಸಂಪೂರ್ಣ ಜಲಾವೃತಗೊಂಡಿದ್ದು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.
    ಶಾಲೆಯ ಆವರಣದಲ್ಲಿ ನೀರು ಇಂಗುತ್ತಿರುವುದರಿಂದ ಮಕ್ಕಳು ಇಲ್ಲಿನ ಜವುಳಿನಲ್ಲಿ ಸಿಲುಕಿ ತೊಂದರೆ ಪಡುತ್ತಿದ್ದಾರೆ. ಶಾಲೆಗೆ ಬಿಸಿಯೂಟದ ರೇಷನ್ ವಿತರಣೆಗೆ ಆಗಮಿಸಿದ್ದ ಲಾರಿ ಕೆಸರಲ್ಲಿ ಸಿಲುಕಿದ್ದರಿಂದ ಅದನ್ನು ತೆಗೆಯಲು ಬಂದ ಜೆಸಿಬಿ ಯಂತ್ರವೂ ನೆಲದೊಳಗೆ ಕುಸಿದು ಕೆಲ ಗಂಟೆಗಳ ನಂತರ ಕಾರ್ಯ ನಿರ್ವಹಿಸಿದೆ. ಬಳಿಕ ಈ ಲಾರಿಯಲ್ಲಿದ್ದ ರೇಶನ್ ಅನ್ನು ಮತ್ತೊಂದು ಲಾರಿಗೆ ವರ್ಗಾಯಿಸಲಾಯಿತು. ಈ ಲಾರಿಯು ಶಾಲೆ ಆವರಣದಿಂದ ಹೊರಗೆ ಕಳುಹಿಸಲು ಕೆಲಸಗಾರರು ಗಂಟೆಗಟ್ಟಲೆ ಪರದಾಡಿದರು. ಎರಡು ದಿನಗಳ ಕಾಲ ಲಾರಿ, ಜೆಸಿಬಿ ಯಂತ್ರಗಳು ಯರ್ರಾಬಿರ್ರಿ ಕಾರ್ಯಾಚರಣೆ ನಡೆಸಿದ್ದರಿಂದ ಇಡೀ ಶಾಲಾವರಣ ಸಂಪೂರ್ಣ ಹದಗೆಟ್ಟಿದೆ. ಮಕ್ಕಳು ಕ್ರೀಡಾ ಚಟುವಟಿಕೆಯಿಂದ ವಂಚಿತರಾಗಿದ್ದಾರೆ. ಈ ಶಾಲೆಯ ಆವರಣದಲ್ಲಿಯೇ ತಾಲೂಕು ಮಟ್ಟದ ಕ್ರೀಡೆಗಳನ್ನು ಆಯೋಜಿಸಲಾಗಿದ್ದು ಈ ಬಗ್ಗೆ ಶಿಕ್ಷಕರು ಚಿಂತಿತರಾಗಿದ್ದಾರೆ.
    ಸ್ಮಶಾನ ನಿವೇಶನದಲ್ಲಿರುವ ಈ ಶಾಲೆಯಲ್ಲಿ ನೂರಾರು ಮಕ್ಕಳು ಓದುತ್ತಿದ್ದಾರೆ. ಶಾಲೆ ನಡೆಯುವ ವೇಳೆಯೇ ಅಗ್ನಿ ಸ್ಪರ್ಶದ ಮೂಲಕ ಶವ ಸಂಸ್ಕಾರ ಮಾಡುವುದರಿಂದ ಇದರ ಹೊಗೆಯಲ್ಲಿಯೇ ಮಕ್ಕಳು ಪಾಠ ಕೇಳುವ ಪರಿಸ್ಥಿತಿ ಇದೆ. ಶಾಲಾ ಆವರಣಕ್ಕೆ ಅಪಾರ ಪ್ರಮಾಣ ನೀರು ಸೇರುತ್ತದೆ. ಕಾಂಪೌಂಡ್ ಇಲ್ಲದ್ದರಿಂದ ಶಾಲಾ ದಿನಗಳಲ್ಲೇ ದನಕರುಗಳು ನುಗ್ಗುತ್ತವೆ. ಈ ವ್ಯವಸ್ಥೆಯಿಂದಾಗಿ ಶೈಕ್ಷಣಿಕ ಚಟುವಟಿಕೆಗೆ ಸಾಕಷ್ಟು ಕಿರಿಕಿರಿ, ತೊಂದರೆಯಾಗುತ್ತಿದೆ. ಆದ್ದರಿಂದ ಸ್ಥಳೀಯ ಪುರಸಭೆ ಈ ಬಗ್ಗೆ ಗಮನ ಹರಿಸಬೇಕು ಮತ್ತು ಶಾಲಾ ಕಾಂಪೌಂಡ್ ನಿರ್ವಣಕ್ಕೆ ಈ ಭಾಗದ ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆ ಗಮನ ಹರಿಸಬೇಕು ಎಂದು ಎಸ್​ಡಿಎಂಸಿ ಅಧ್ಯಕ್ಷ ಮಂಜುನಾಥ ಸಂಶಿ, ಚಂದ್ರಶೇಖರ ಮಾಗಡಿ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts