More

    ಶಾಂತಾರಾಮಗೆ ಒಲಿದ ಪರಿಷತ್ ಸ್ಥಾನ

    ವಿಜಯವಾಣಿ ಸುದ್ದಿಜಾಲ ಕಾರವಾರ/ಯಲ್ಲಾಪುರ

    ಸಂಘ ಪರಿವಾರದ ವನವಾಸಿ ಕಲ್ಯಾಣ ಸಂಸ್ಥೆಯ ಮೂಲಕ ರಾಜ್ಯದ ಆರು ಜಿಲ್ಲೆಗಳಲ್ಲಿ ಬುಡಕಟ್ಟು ಜನರಿಗಾಗಿ 8 ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಶಾಂತಾರಾಮ ಅವರು ಬೆಳೆದು ಬಂದ ರೀತಿಯೇ ರೋಚಕ.

    1965ರಲ್ಲಿ ಹಿತ್ಲಳ್ಳಿಯಲ್ಲಿ ಬುಡ್ನಾ ಹಾಗೂ ನಾಗಿ ಅವರ ಮಗನಾಗಿ ಶಾಂತಾರಾಮ ಜನಿಸಿದರು. 1971ರಲ್ಲಿ ಶಾಲೆಯ ಮೆಟ್ಟಿಲೇರುವ ಹೊತ್ತಿಗೆ ಅವರ ತಂದೆ ತೀರಿಕೊಂಡಿದ್ದರು. ಹಿತ್ಲಳ್ಳಿಯಲ್ಲೇ ಪ್ರಾಥಮಿಕ ಶಾಲೆಗೆ ತೆರಳಿದರು. ಆದರೆ, ಬಡತನದ ಕಾರಣಕ್ಕೆ ಏಳನೇ ತರಗತಿಗೆಲ್ಲ ಶಾಲೆ ಬಿಡಿಸಲು ಅವರ ಕುಟುಂಬ ಮುಂದಾಗಿತ್ತು. ಶಾಲೆಗೆ ಮೊದಲಿಗರಾಗಿದ್ದ ಅವರ ಶಿಕ್ಷಣ ಮುಂದುವರಿಸಲು ಶಿಕ್ಷಕರು ಹಾಗೂ ಊರವರು 150 ರೂ. ಕೂಡಿಸಿ ಸಮೀಪದ ಅಂಕೋಲಾ ಪಟ್ಟಣಕ್ಕೆ ಕಳಿಸಿದ್ದರು. ಅಂಕೋಲಾದ ಕೆನರಾ ವೆಲ್​ಫೇರ್ ಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಪಿಯುಸಿ ಓದಿದರು. ಕಾರವಾರದಲ್ಲಿ ಕೂಲಿ ಮಾಡುತ್ತ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜ್​ನಲ್ಲಿ ಬಿಎ ವ್ಯಾಸಂಗ ಮಾಡಿ ಸಿದ್ದಿ ಸಮುದಾಯದ ಪ್ರಥಮ ಪದವೀಧರ ಎನಿಸಿಕೊಂಡರು.

    ಸಮಾಜ ಸೇವೆ: ಆರ್​ಎಸ್​ಎಸ್​ದಿಂದ ಸೇವೆಯ ಪರಿಚಯವಾಗಿತ್ತು. ಹಿಂದು ಸೇವಾ ಪ್ರತಿಷ್ಠಾನದ ಮೂಲಕ ಸಂಘಟನೆಯ ಸ್ವರೂಪ ಗೊತ್ತಾಯಿತು. ವನವಾಸಿ ಕಲ್ಯಾಣ ಸಂಘ ಸೇರಿ ಚಿಪಗೇರಿಯಲ್ಲಿ 10 ವಿದ್ಯಾರ್ಥಿಗಳ ಮೊದಲ ವಸತಿ ನಿಲಯ ಪ್ರಾರಂಭಿಸಿದೆ. ಇಂದು ವನವಾಸಿ ಕಲ್ಯಾಣ ಸಂಘ ರಾಜ್ಯದ 10 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನುತ್ತಾರೆ ಅವರು. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದ ಸಿದ್ದಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ, ವಿಶಿಷ್ಟವಾಗಿರುವ ಬುಡಕಟ್ಟು ಸಂಸ್ಕೃತಿಯನ್ನು ಉಳಿಸಲು ಶ್ರಮಿಸುವ ಅವರ ಆಸೆಯನ್ನು ಸಾಕಾರಗೊಳಿಸುವಲ್ಲಿ ವನವಾಸಿ ಕಲ್ಯಾಣ ಸಹಕಾರಿಯಾಯಿತು. ಸಿದ್ದಿ ಸಮುದಾಯದವರನ್ನು ಮತಾಂತರಗೊಳಿಸುವುದನ್ನು ತಡೆಯಲು ಜಾಗೃತಿ ಕಾರ್ಯಕ್ರಮ, ಶೈಕ್ಷಣಿಕ ಅರಿವು ಮೂಡಿಸುವುದು, ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಜನತೆಗೆ ತಿಳಿ ಹೇಳಿ, ಅದನ್ನು ತಲುಪಿಸುವ ಮೂಲಕ ಸಾಮಾಜಿಕ ಜಾಗೃತಿಯಲ್ಲಿ ತೊಡಗಿಕೊಂಡಿದ್ದೇವೆ ಎನ್ನುತ್ತಾರೆ ಅವರು.

    ಯಲ್ಲಾಪುರ ಗ್ರಾಮೀಣ ಭಾಗದ ಬುಡಕಟ್ಟು ಸಿದ್ದಿ ಸಮುದಾಯದ ಅಭ್ಯುದಯಕ್ಕಾಗಿ ಕಳೆದ ನಾಲ್ಕು ದಶಕಗಳಿಂದ ತೊಡಗಿಸಿಕೊಂಡಿರುವ ಶಾಂತಾರಾಮ ಸಿದ್ದಿ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿರುವುದು ಸಂತಸದ ವಿಷಯ. ಪಕ್ಷದ ಸಂಘಟನೆಗಾಗಿ ಶ್ರಮಿಸಿದ ವ್ಯಕ್ತಿಗೆ ಬಿಜೆಪಿ ಗೌರವ ನೀಡುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. | ಶಿವರಾಮ ಹೆಬ್ಬಾರ ಉಸ್ತುವಾರಿ ಸಚಿವ

    ಹೋರಾಟದ ಹಾದಿ: ಶಾಂತಾರಾಮ ಸಿದ್ದಿ ಅವರು ಸಮುದಾಯದ ಅಭಿವೃದ್ಧಿಯ ಜತೆ ಪರಿಸರ ಹೋರಾಟದಲ್ಲೂ ತೊಡಗಿಕೊಂಡಿದ್ದಾರೆ. ಅಪ್ಪಿಕೊ ಚಳವಳಿ, ಬೇಡ್ತಿ ಹೋರಾಟದಲ್ಲಿ ಭಾಗವಹಿಸಿದ್ದರು. ವೃಕ್ಷ ಲಕ್ಷ ಆಂದೋಲನದ ಸಕ್ರಿಯ ಸದಸ್ಯರಾಗಿದ್ದಾರೆ. ಪಶ್ಚಿಮ ಘಟ್ಟ ಕಾರ್ಯಪಡೆಯ ಸದಸ್ಯರಾಗಿದ್ದರು. ಬುಡಕಟ್ಟು ಉತ್ಪನ್ನಗಳ ಮಾರಾಟಕ್ಕಾಗಿ ಇರುವ ಲ್ಯಾಂಪ್ಸ್ ಸೊಸೈಟಿಯ ನಿರ್ದೇಶಕರಾಗಿ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಆಕಾಶವಾಣಿ ಸಲಹಾ ಸಮಿತಿ ಸದಸ್ಯರಾಗಿ, ರಾಜ್ಯೋತ್ಸವ ಆಯ್ಕೆ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಔಷಧ ಸಸ್ಯಗಳು ಮತ್ತು ಅವುಗಳ ಬಳಕೆಯ ಕುರಿತು ನಿವೃತ್ತ ಅರಣ್ಯಾಧಿಕಾರಿ ಡಾ. ಯಲ್ಲಪ್ಪ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಿದ್ದಾರೆ. ಇತ್ತೀಚೆಗಷ್ಟೇ ರಾಜ್ಯ ಜೀವ ವೈವಿಧ್ಯ ಮಂಡಳಿಯಿಂದ ರಾಜ್ಯಮಟ್ಟದ ಜೀವ ವೈವಿಧ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಳೆದ 31 ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿರುವ ಶಾಂತಾರಾಮ ಸಿದ್ದಿ ಅವರಿಗೆ ಈಗ 62 ವರ್ಷ. ಪ್ರಸ್ತುತ ವನವಾಸಿ ಕಲ್ಯಾಣದ ರಾಜ್ಯ ಜಂಟಿ ಕಾರ್ಯದರ್ಶಿ ಹಾಗೂ ಹಿತರಕ್ಷಾ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತಮ ಸಂಘಟಕರಾಗಿ, ವಾಗ್ಮಿಯಾಗಿ ಗುರುತಿಸಿಕೊಂಡಿದ್ದಾರೆ. ಪತ್ನಿ ಸುಶೀಲಾ ಶಾಂತಾರಾಮ ಅವರ ಸಾಮಾಜಿಕ ಕಾರ್ಯಗಳಲ್ಲಿ ಸಹಕರಿಸುತ್ತಾರೆ. ಮಕ್ಕಳಾದ ಸಂಗೀತಾ ಹಾಗೂ ಮಂಜುನಾಥ ವ್ಯಾಸಂಗ ಮಾಡುತ್ತಿದ್ದಾರೆ.

    ಸಿದ್ದಿ ಸಮುದಾಯಕ್ಕೆ ಸಾಂವಿಧಾನಿಕ ಗೌರವ: ಹಳಿಯಾಳ: ದೇಶದ ಇತಿಹಾಸದಲ್ಲಿಯೇ ಇಂತಹ ದೊಡ್ಡ ಮಟ್ಟದ ಸಂವಿಧಾನಿಕ ಗೌರವವು ಬುಡಕಟ್ಟು ಸಿದ್ದಿ ಸಮುದಾಯದವರಿಗೆ ದೊರಕಿದೆ. ಅದಕ್ಕಾಗಿ ಮೊದಲಿಗೆ ಆರ್​ಎಸ್​ಎಸ್, ಬಿಜೆಪಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆ ಸಿದ್ದಿ ಸಮುದಾಯದ ರಾಜ್ಯ ಮುಖಂಡ ದಿಯೇಗ ಸಿದ್ದಿ ಹರ್ಷ ವ್ಯಕ್ತಪಡಿಸಿದ್ದಾರೆ. ವಿಧಾನ ಪರಿಷತ್ ಸದಸ್ಯರನ್ನಾಗಿ ಶಾಂತಾರಾಮ ಸಿದ್ದಿ ಅವರನ್ನು ಆಯ್ಕೆ ಮಾಡಿದ ಸುದ್ದಿ ತಿಳಿಯುತ್ತಿದ್ದಂತೆ ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ದಿಯೇಗ ಸಿದ್ದಿ ಅವರು, ಬುಡಕಟ್ಟು ಸಿದ್ದಿ ಸಮುದಾಯದ ನೋವಿಗೆ ಕಷ್ಟಗಳಿಗೆ ಬಿಜೆಪಿ ಹಾಗೂ ಆರ್​ಎಸ್​ಎಸ್ ಧ್ವನಿ ನೀಡಿದೆ. ಶಾಂತಾರಾಮ ಅವರು ವಿ.ಪ. ಸದಸ್ಯರಾಗಿ ಆಯ್ಕೆಯಾಗುವ ವಿಚಾರ ನಿರೀಕ್ಷಿತವಾಗಿತ್ತು. ಸರಳ ಸಜ್ಜನ ನಮ್ಮ ಹುಡುಗ ಶಾಂತಾರಾಮ ಬಾಲ್ಯದಿಂದಲೇ ಆರ್​ಎಸ್​ಎಸ್​ನಲ್ಲಿ ಬೆಳೆದವರು, ಮೂವತ್ತು ವರ್ಷಕ್ಕಿಂತ ಅಧಿಕ ಸಮಯ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ಅವರು, ಗೃಹಸ್ಥ ಪೂರ್ಣಾವಧಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮಗೆ ಸಿಕ್ಕ ಸ್ಥಾನಮಾನವನ್ನು ಅವರು ನ್ಯಾಯಯತವಾಗಿ ನಿಭಾಯಿಸಲಿದ್ದಾರೆ. ಬುಡಕಟ್ಟು ಸಿದ್ದಿ ಸಮುದಾಯವನ್ನು ಮುಖ್ಯವಾಹಿನಿಗೆ ತರುವಂತಹ ಅವರ ಪ್ರತಿಯೊಂದು ಪ್ರಯತ್ನಗಳಿಗೆ ನಾವು ಬೆಂಗಾವಲಾಗಿ ಇರಲಿದ್ದೇವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts