More

    ಶಾಂತಳ್ಳಿಯಲ್ಲಿ ಕುಮಾರಲಿಂಗೇಶ್ವರಸ್ವಾಮಿ ರಥೋತ್ಸವ

    ಸೋಮವಾರಪೇಟೆ : ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ 64ನೇ ವರ್ಷದ ಮಹಾರಥೋತ್ಸವ ಶ್ರದ್ಧಾಭಕ್ತಿಯಿಂದ ಸೋಮವಾರ ನೆರವೇರಿತು.

    ಬೆಳಗ್ಗೆ 12.05ಕ್ಕೆ ದೇವಾಲಯದ ಆವರಣದಲ್ಲಿ ಪೂಜಾ ವಿಧಿವಿಧಾನ ನೆರವೇರಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವತಕ್ಕರು, ಗ್ರಾಮಸ್ಥರು, ಭಕ್ತರು ಜೈಕಾರ ಹಾಕುತ್ತ ಸಿಂಗಾರಗೊಂಡಿದ್ದ ರಥವನ್ನು ಎಳೆಯಲಾರಂಭಿಸಿದರು. ದಾರಿಯುದ್ದಕ್ಕೂ ಭಕ್ತರು ರಥಕ್ಕೆ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದರು.

    ಜ.13ರಂದು ಪ್ರಾರ್ಥನಾ ಪೂಜೆಯೊಂದಿಗೆ ಜಾತ್ರೆಗೆ ವಿಧ್ಯುಕ್ತ ಚಾಲನೆ ನೀಡಲಾಗಿತ್ತು. ಜಾತ್ರೆ ಪ್ರಯುಕ್ತ ದೇವಾಲಯದಲ್ಲಿ ಕರುವಿನ ಹಬ್ಬ, ಗರುಡಗಂಬದಲ್ಲಿ ತುಪ್ಪದ ನಂದಾದೀಪ ಬೆಳಗುವುದು, ಪುಷ್ಪಗಿರಿ ಬೆಟ್ಟದಲ್ಲಿರುವ ಪುರಾತನ ದೇವಾಲಯದಲ್ಲಿ ದೀಪೋತ್ಸವ, ಅರಸುಬಲ ಸೇವೆ, ಪಲ್ಲಕ್ಕಿ ಉತ್ಸವ ಸೇರಿದಂತೆ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು.

    ವೇದಮೂರ್ತಿ ಶಿಬರೂರು ಗೋಪಾಲಕೃಷ್ಣ ತಂತ್ರಿ ನೇತೃತ್ವದ ತಂಡದವರಿಂದ ಬೆಳಗ್ಗಿನಿಂದಲೇ ಪೂಜಾ ವಿಧಿವಿಧಾನಗಳು ನಡೆದವು. ಕೂತಿ ನಾಡು, ತೋಳುನಾಡು, ಕೊತ್ನಳ್ಳಿ, ಬೀದಳ್ಳಿ, ಪುಷ್ಪಗಿರಿ, ಯಡೂರು, ತಲ್ತರೆಶೆಟ್ಟಳ್ಳಿ ಗ್ರಾಮಸ್ಥರು ಸೇರಿದಂತೆ ನೂರಾರು ಮಂದಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

    ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ.ಲೋಕೇಶ್, ಶಾಂತಳ್ಳಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎನ್.ಮುತ್ತಣ್ಣ, ಧರ್ಮದರ್ಶಿ ಮಂಡಳಿ ಉಪಾಧ್ಯಕ್ಷ ಜಿ.ಡಿ.ಬಸವರಾಜು, ಪ್ರಧಾನ ಕಾರ್ಯದರ್ಶಿ ಕೆ.ಕೆ. ಮುತ್ತಣ್ಣ, ಸಹ ಕಾರ್ಯದರ್ಶಿ ಎಸ್.ಎಚ್. ಗಿರೀಶ್, ಖಜಾಂಚಿ ಎಸ್.ಆರ್. ಉತ್ತಯ್ಯ, ಎಸ್.ಜಿ.ಮೇದಪ್ಪ ಹಲವರು ಇದ್ದರು.

    ಜಾತ್ರೋತ್ಸವದ ಅಂಗವಾಗಿ ತಾಲೂಕಿನ ತೋಟಗಾರಿಕೆ ಇಲಾಖೆ ವತಿಯಿಂದ ರೈತರು ಬೆಳೆದ ಬೆಳೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಮಹಿಳೆಯರ ಅಂತರ ಜಿಲ್ಲಾ ಮಟ್ಟದ ಥ್ರೋಬಾಲ್, ಹಗ್ಗಜಗ್ಗಾಟ ಹಾಗೂ ಪುರುಷರ ಮ್ಯಾಟ್ ಕಬಡ್ಡಿ ನಡೆದವು.

    ಗ್ರಾಮದಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳು ಪುರಾತನ ಸಂಸ್ಕೃತಿಯನ್ನು ಬಿಂಬಿಸುತ್ತವೆ. 900 ವರ್ಷಗಳ ಇತಿಹಾಸ ದೇವಾಲಯಕ್ಕೆ ಇದೆ. ಪ್ರತಿ ವರ್ಷ ಜಾತ್ರೋತ್ಸವಕ್ಕೆ ಸಾವಿರಾರು ಮಂದಿ ಬಂದು ದೇವರ ದರ್ಶನ ಪಡೆಯುತ್ತಾರೆ, ಹರಕೆ ತೀರಿಸುತ್ತಾರೆ. ಜ.17ರಂದು ಮಧ್ಯಾಹ್ನ 3ಕ್ಕೆ ದೇವಾಲಯದ ಆವರಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಕುಮಾರಲಿಂಗೇಶ್ವರ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ.ಲೋಕೇಶ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts