More

    ಶವದೊಂದಿಗೆ ಪಪಂ ಎದುರು ಪ್ರತಿಭಟನೆ

    ನರೇಗಲ್ಲ: ಪಟ್ಟಣದ ಕುಡವಕ್ಕಲಿಗ ಸಮಾಜದ ರುದ್ರಭೂಮಿಗೆ ಹೋಗಲು ಸಮರ್ಪಕ ರಸ್ತೆ ಇಲ್ಲದಿರುವುದನ್ನು ಖಂಡಿಸಿ, ಸಾರ್ವಜನಿಕರು ಮೃತ ದೇಹದೊಂದಿಗೆ ಗುರುವಾರ ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದರಿಂದ ಕುಡುವಕ್ಕಲಿಗ ಸಮಾಜದ ಯಾರಾದರೂ ಮೃತಪಟ್ಟರೆ ಅವರ ಅಂತ್ಯಸಂಸ್ಕಾರ ಮಾಡುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ಕಳೆದ ಮೂರು ವರ್ಷಗಳಿಂದ ಪ.ಪಂ. ಅಧಿಕಾರಿಗಳಿಗೆ ಹಲವಾರು ಸಲ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಪ.ಪಂ. ಕಚೇರಿ ಮುಂದೆ ಶವವಿಟ್ಟು, ಪಟಾಕಿ ಹೊಡೆದು, ತಮಟೆ ಬಾರಿಸುವ ಮೂಲಕ ಪ್ರತಿಭಟನೆ ಮಾಡಿದರು.

    ಕುಡವಕ್ಕಲಿಗ ಸಮಾಜದ ಮಲ್ಲಮ್ಮ ಚನ್ನಪ್ಪ ಧರ್ವಯತ (ಊಟಿ) (55) ಬುಧವಾರ ತಡ ರಾತ್ರಿ ಹಾಗೂ ಪರಪ್ಪ ಬಾಳಪ್ಪ ಕಳಕೊಣ್ಣವರ (86) ಗುರುವಾರ ಬೆಳಗ್ಗೆ ನಿಧನ ಹೊಂದಿದ್ದರು. ಆದರೆ, ಸ್ಮಶಾನಕ್ಕೆ ಹೋಗುವ ದಾರಿ ಸಂಪೂರ್ಣ ಹದಗೆಟ್ಟು, ರಸ್ತೆಯ ತುಂಬ ಚರಂಡಿ ನೀರು ಹರಿಯುತ್ತಿತ್ತು. ಇದರಿಂದ ಕೆರಳಿದ ಮೃತರ ಕುಟುಂಬಸ್ಥರು ಹಾಗೂ ಸಮಾಜದವರು ಮಲ್ಲಮ್ಮ ಅವರ ಮೃತ ದೇಹವನ್ನು ಟ್ರ್ಯಾಕ್ಟರ್​ನಲ್ಲಿಟ್ಟು ಪ.ಪಂ. ಮುಂದೆ ನಿಲ್ಲಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಪಟ್ಟಣದ ಬಹುತೇಕ ಸ್ಮಶಾನಗಳು ದುಸ್ಥಿತಿಯಲ್ಲಿವೆ. ಅಲ್ಲಿಗೆ ತೆರಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ವಣವಾಗಿವೆ. ಈ ಬಗ್ಗೆ ಅನೇಕ ಬಾರಿ ಪ.ಪಂ. ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ರಸ್ತೆ ಸೇರಿದಂತೆ ಸ್ಮಶಾನಗಳ ಅಭಿವೃದ್ಧಿಗೆ ಅಧಿಕಾರಿಗಳು ಮುಂದಾಗಿಲ್ಲ. ಕುಡವಕ್ಕಲಿಗ ಸಮಾಜದ ಸ್ಮಶಾನದ ರಸ್ತೆಯನ್ನು ಅಕ್ಕಪಕ್ಕದ ಜಮೀನುಗಳ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೆ, ರಸ್ತೆಯ ಎರಡು ಬದಿಯಲ್ಲಿದ್ದ ಚರಂಡಿಗಳನ್ನು ಒತ್ತುವರಿ ಮಾಡಿದ್ದರಿಂದ ಚರಂಡಿಯ ನೀರು ರಸ್ತೆಯುದ್ದಕ್ಕೂ ಹರಿಯುತ್ತಿದೆ. ರಸ್ತೆಯು ಸಂಪೂರ್ಣ ಕೆಸರುಮಯವಾಗಿದೆ. ಮಹಿಳೆಯರು, ವೃದ್ಧರು ಸ್ಮಶಾನಕ್ಕೆ ಬಾರದ ಪರಿಸ್ಥಿತಿ ನಿರ್ವಣವಾಗಿದೆ. ಮೃತ ದೇಹವನ್ನು ಹೊತ್ತುಕೊಂಡು ಹೋಗುವುದು ದುಸ್ತರವಾಗಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಪ.ಪಂ. ಅಧಿಕಾರಿಗಳು ಮಾತ್ರ ಗಮನ ಹರಿಸುತ್ತಿಲ್ಲ. ರಸ್ತೆ ದುರಸ್ತಿಯಾಗುವವರೆಗೂ ಮೃತ ದೇಹದೊಂದಿಗೆ ಪ.ಪಂ. ಮುಂದೆ ಕುಳಿತು ಧರಣಿ ಮಾಡುವುದಾಗಿ ಪ್ರತಿಭಟನಾಕಾರರು ಪಟ್ಟು ಹಿಡಿದರು.

    ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದ ಪ.ಪಂ. ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಮತ್ತು ಇಂಜಿನಿಯರ್ ಉಮೇಶ ಓಜನಹಳ್ಳಿ, ಪಟ್ಟಣದ ಕುಡವಕ್ಕಲಿಗ ಸಮಾಜದ ಸ್ಮಶಾನದ ರಸ್ತೆ ದುರಸ್ತಿಗಾಗಿ 14ನೇ ಹಣಕಾಸು ಯೋಜನೆಯಡಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಒಂದು ವಾರದೊಳಗೆ ರಸ್ತೆ ದುರಸ್ತಿಗೆ ಚಾಲನೆ ನೀಡಿ 15 ದಿನಗಳಲ್ಲಿ ಕೆಲಸ ಮುಗಿಸಲಾಗುವುದು ಎಂದು ಲಿಖಿತ ಭರವಸೆ ನೀಡಿದರು.

    ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಪಿಎಸ್​ಐ ಬಿ.ಬಿ. ಕೊಳ್ಳಿ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.

    ಶೇಖಪ್ಪ ಲಕ್ಕನಗೌಡ್ರ, ಚಂದ್ರು ಹೊನವಾಡ, ಶಶಿಧರ ಓದಿಸೋಮಠ, ಬಾಳಪ್ಪ ಸೋಮಗೊಂಡ, ಶಿವಪ್ಪ ಧರ್ವಯತ, ಶರಣಪ್ಪ ಗಂಗರಗೊಂಡ, ರಮೇಶ ಹತ್ತಿಕಟಗಿ, ಆನಂದ ಕಳಕೊಣ್ಣವರ, ವೀರೇಶ ಪಿಡಗೊಂಡ, ಶಶಿಧರ ಕಳಕೊಣ್ಣವರ, ಈರಪ್ಪ ಹತ್ತಿಕಟಗಿ, ಶರಣಪ್ಪ ಗಚ್ಚಿನ, ವಿಜಯ ಲಕ್ಕನಗೌಡ್ರ, ಮಾಂತೇಶ ಸೋಮಗೊಂಡ, ಎಂ.ಕೆ. ಗಂಗರಗೊಂಡ, ಕಳಕಪ್ಪ ಧರ್ವಯತ, ಪ್ರಕಾಶ ಪಿಡಗೊಂಡ, ಯಲ್ಲಪ್ಪ ಜುಟ್ಲದ, ಕನ್ನಪ್ಪ ಪಿಡಗೊಂಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts