More

    ಶರಾವತಿ ಸಂತ್ರಸ್ತರಿಗೆ ಸ್ಪಂದಿಸದ ಡಬಲ್ ಇಂಜಿನ್ ಸರ್ಕಾರ; ಪರಿಸರವಾದಿಗಳ ಹೆಸರು ಬಳಸಿಕೊಂಡು ರೈತರಿಗೆ ಅನ್ಯಾಯ: ಮಧು ಬಂಗಾರಪ್ಪ ಕಿಡಿ

    ಶಿಕಾರಿಪುರ: ಬಿಜೆಪಿ ದುರಾಡಳಿತದಿಂದ ಬೇಸತ್ತ ಜನ ಕಾಂಗ್ರೆಸ್ ಕಡೆಗೆ ನೋಡುತ್ತಿದ್ದು, ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಜಿಲ್ಲೆಯಲ್ಲಿ ಏಳೂ ಸ್ಥಾನಗಳನ್ನು ಗೆಲ್ಲಲಿದೆ ಎಂದು ಕೆಪಿಸಿಸಿ ಹಿಂದುಳಿದ ವಗರ್ಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.
    ಪಟ್ಟಣದಲ್ಲಿ ಸೋಮವಾರ ಮಲೆನಾಡ ಜನಾಕ್ರೋಶ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಬೆಳಕು ಕೊಟ್ಟ ಶರಾವತಿ ಸಂತ್ರಸ್ತರು ಇಂದು ಕತ್ತಲಿನಲ್ಲಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರವಿದೆ. ಆದರೆ ಅವರಿಗೆ ಸಂತ್ರಸ್ತರ ಅಳಲು ಕೇಳದಿರುವುದು ದುರದೃಷ್ಟಕರ ಎಂದರು.
    ಅರಣ್ಯ ಭೂಮಿ ಸಾಗುವಳಿದಾರರಿಗೆ ವಿಶೇಷ ನ್ಯಾಯಾಲಯದಿಂದ ನೋಟಿಸ್‌ಗಳು ಬರುತ್ತಿವೆ, ರೈತರನ್ನು ಭೂಗಳ್ಳರ ಹಾಗೆ ಬಿಂಬಿಸಲಾಗುತ್ತಿದೆ. ರೈತರು ಬೇಲ್ಗಾಗಿ ಬೆಂಗಳೂರಿಗೆ ಅಲೆಯುತ್ತಿದ್ದಾರೆ, ಪರಿಸರವಾದಿಗಳ ಹೆಸರು ಬಳಸಿಕೊಂಡು ಸರ್ಕಾರ ಸಾಗುವಳಿದಾರರಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧಮ್ ಇದ್ರೆ, ತಾಕತ್ ಇದ್ರೆ, ರೈತರ ಬಗ್ಗೆ ನಿಜವಾದ ಕಾಳಜಿ ಇದ್ರೆ ಸಾಗುವಳಿದಾರರಿಗೆ ತಮ್ಮ ಅಧಿಕಾರ ಮತ್ತು ತಮ್ಮದೇ ಆದ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಒಂದೆರಡು ತಿಂಗಳಿನಲ್ಲಿ ಹಕ್ಕುಪತ್ರ ಕೊಡಿಸಲಿ. ಇಲ್ಲದಿದ್ದರೆ 2023ರಲ್ಲಿ ನಮ್ಮ ಪಕ್ಷ ಅಧಿಕಾರ ಕ್ಕೆ ಬರುತ್ತದೆ. ಆಗ ನಾವೇ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸುತ್ತೇವೆ. ರೈತರ ಬಗ್ಗೆ ನಿಜವಾದ ಕಳಕಳಿ ಇರಬೇಕು. ಮೊಸಳೆ ಕಣ್ಣೀರಿನಿಂದ ಯಾವುದೇ ಪ್ರಯೋಜನವಿಲ್ಲ ಎಂದರು.
    2014ರ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದರೆ ರೈತರ ಹಿತ ಕಾಯಲು ಸ್ವಾಮಿನಾಥನ್ ವರದಿ ಜಾರಿಗೆ ತರುತ್ತೇವೆ ಎಂದಿದ್ದರು. ಆದರೆ ಎಂಟು ವರ್ಷ ಕಳೆದರೂ ಇನ್ನೂ ಜಾರಿಗೆ ಬಂದಿಲ್ಲ. ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ರೈಲ್ವೆ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವ ಬಡ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ನೀಡಬೇಕು. ಭೂಮಿಕೊಟ್ಟ ರೈತರ ಮನೆಯ ಒಬ್ಬರಿಗೆ ಕೆಲಸ ಕೊಡಬೇಕು ಎಂದು ಆಗ್ರಹಿಸಿದರು.
    ಕಾಂಗ್ರೆಸ್ ಮಾಜಿ ಜಿಲ್ಲಾದ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ಬಿಜೆಪಿ 13 ಜನ ಉದ್ಯಮಿಗಳ 2.5 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಆದರೆ ಇವರು ರೈತರ ಬಡವರ ಸಾಲ ಮನ್ನಾ ಮಾಡಲು ಹಿಂದೆ ಮುಂದೆ ನೋಡುತ್ತಾರೆ ಎಂದು ಟೀಕಿಸಿದರು.
    ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ನ.28ರ ಪಾದಯಾತ್ರೆ ಮತ್ತು ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಬೇಕು ಎಂದರು. ವಿವಿಧ ಪಕ್ಷಗಳಿಂದ ಹತ್ತಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts