More

    ಶತಮಾನ ಕಂಡ ಶ್ರೇಷ್ಠ ಸಾಧಕ

    ಗದಗ: ಪಂ. ಪುಟ್ಟರಾಜ ಕವಿ ಗವಾಯಿಗಳು ಅಂಧ-ಅನಾಥರ ಪಾಲಿನ ದೇವರಾಗಿ ಅವರ ಬಾಳಿಗೆ ಬೆಳಕು ನೀಡಿದ ಮಹಾಮಹಿಮರು. ಸಾವಿರಾರು ಮಕ್ಕಳಿಗೆ ಸಂಗೀತ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ರೂಪಿಸಿದ ಗವಾಯಿಗಳು ಶತಮಾನ ಕಂಡ ಶ್ರೇಷ್ಠ ಸಾಧಕರು ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

    ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ದಿ. ಕೆ.ಎಚ್. ಪಾಟೀಲ ಅಭಿಮಾನಿ ಬಳಗದಿಂದ ಬುಧವಾರ ಆಯೋಜಿಸಿದ್ದ ಪಂ.ಪುಟ್ಟರಾಜ ಕವಿ ಗವಾಯಿಗಳ 107ನೇ ಜಯಂತಿ, ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ಪುಟ್ಟಯ್ಯಜ್ಜನ ಜನ್ಮದಿನದಂದು ಸಾಮೂಹಿಕ ವಿವಾಹದಂತ ಸಮಾಜಮುಖಿ ಕಾರ್ಯಕ್ರಮ ಏರ್ಪಡಿಸಿ ಸಾರ್ಥಕತೆ ಕಾಣುವುದು ಅಮೂಲ್ಯ ಕಾರ್ಯ ಎಂದರು.

    ಗವಾಯಿಗಳು ಶರಣರ ತತ್ವಗಳನ್ನು ಜೀವನದಲ್ಲಿ ಅಕ್ಷರಶಃ ಅಳವಡಿಸಿಕೊಂಡು ಆಚರಣೆಗೆ ತಂದರು. ಜೀವನಪೂರ್ತಿ ಮಕ್ಕಳಿಗೆ ಜ್ಞಾನ ಹಂಚಿದರು. ಇಂತಹ ಪುಣ್ಯಪುರುಷರನ್ನು ನೆನಪಿಸಿಕೊಳ್ಳುವುದೇ ಸುಯೋಗ ಎಂದರು.

    ನಂದಿವೇರಿಮಠದ ಶ್ರೀ ಶಿವಕುಮಾರ ಸ್ವಾಮೀಜಿ ಮಾತನಾಡಿ, ನವಜೀವನ ಕಾಲಿಟ್ಟ ದಂಪತಿ ಶರಣ ನುಡಿಯಂತೆ ಜೀವನ ನಡೆಸಬೇಕು. ಶರಣರ ವಚನ ಪಾಲಿಸಬೇಕು ಎಂದರು.

    ಶಿವಶಾಂತವೀರ ಶರಣರು ಮಾತನಾಡಿ, ಪುಟ್ಟರಾಜ ಗವಾಯಿಗಳ ಜಯಂತಿ ನಿಮಿತ್ತ ಸಾಮೂಹಿಕ ಮದುವೆ ಕಾರ್ಯಕ್ರಮ ಆಯೋಜನೆ ಮಾಡಿದ್ದು ಶ್ಲಾಘನೀಯ. ಇದು ಬಡವರ ಮದುವೆ ಅಲ್ಲ. ಭಾಗ್ಯವಂತರ ಮದುವೆ, ಶರಣ ತತ್ವಗಳಡಿ ಗೃಹಸ್ಥರಾಗಿರುವವರಿಗೆ ಒಳ್ಳೆದಾಗಲಿ, ಭವಿಷ್ಯ ಉಜ್ವಲವಾಗಲಿ ಎಂದರು.

    12 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಸಾನ್ನಿಧ್ಯ ವಹಿಸಿದ್ದ ಮಠಾಧೀಶರು ನೂತನ ಜೋಡಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ 9 ಗಂಟೆಗೆ ಪುಟ್ಟರಾಜ ಗವಾಯಿಗಳ ಭಾವಚಿತ್ರದ ಜತೆಗೆ 1007 ಮುತೆôದೆಯರಿಂದ ಕುಂಭ ಮೆರವಣಿಗೆ ನಡೆಯಿತು. ಕಲ್ಲಯ್ಯಜ್ಜನವರು ಚಾಲನೆ ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕುಂಭ ಮೆರವಣಿಗೆ ಪುನಃ ಪುಣ್ಯಾಶ್ರಮಕ್ಕೆ ಆಗಮಿಸಿ ಸಂಪನ್ನಗೊಂಡಿತು.

    ನಗರಸಭೆ ಪೌರಾಯುಕ್ತ ರಮೇಶ ಜಾಧವ, ಪ್ರಕಾಶ ಬಸರೀಗಿಡದ, ಮಹೇಶ ವೖದ್ಯ, ಶಿವಲೀಲಾ ಅಕ್ಕಿ, ಪಿ.ಎಸ್. ಹಿರೇಮಠ, ಪೀರಸಾಬ ಕೌತಾಳ, ವಿನೋದ ಸಿದ್ಲಿಂಗ್, ರಮೇಶ ಮುಳಗುಂದ ಮತ್ತಿತರರು ಇದ್ದರು.

    ದಿಯಾ ಪೀರಸಾಬ ಕೌತಾಳ ಪ್ರಾರ್ಥಿಸಿದರು. ವೆಂಕಟೇಶ ಆಲ್ಕೋಡ ಮತ್ತು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಬಾಹುಬಲಿ ಜೈನರ ನಿರೂಪಿಸಿದರು.

    ಪುಟ್ಟರಾಜ ಗವಾಯಿಗಳ ಜನ್ಮದಿನದ ನಿಮಿತ್ತ ವಿವಿಧ ಸಂಘಟನೆಗಳ ಕಾರ್ಯಕರ್ತರು, ಭಕ್ತರಿಂದ ಅವಳಿ ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಅನ್ನ ಸಂತರ್ಪಣೆ ಜರುಗಿತು. ಪಂಡಿತ ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.

    ಅಂಧರ ಬಾಳಿನ ಬೆಳಕಾಗಿದ್ದ ಗವಾಯಿಗಳು

    ನರಗುಂದ: ಅಂಧರ ಬಾಳಿಗೆ ದಾರಿದೀಪವಾಗಿದ್ದ ಲಿಂ. ಪುಟ್ಟರಾಜ ಗವಾಯಿಗಳ ಸಾಧನೆ ಅನನ್ಯವಾದದ್ದು ಎಂದು ವರ್ತಕ ರಾಘವೇಂದ್ರ ಗುಜಮಾಗಡಿ ಹೇಳಿದರು.

    ಪುಟ್ಟರಾಜ ಗವಾಯಿಗಳ 107ನೇ ಜಯಂತಿ ಅಂಗವಾಗಿ ಪಟ್ಟಣದ ರೋಣ ಕ್ರಾಸ್​ನಲ್ಲಿರುವ ಗಾನಗಾರುಡಿಗ ಪುಟ್ಟರಾಜರ ಪುತ್ಥಳಿಗೆ ಬುಧವಾರ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

    ಅಂಧ ಕಲಾವಿದರಿಗೆ ಸಂಗೀತದ ಜ್ಞಾನವನ್ನು ನೀಡಿರುವ ಪುಟ್ಟರಾಜರ ಸಾಧನೆ ಅಜರಾಮರ. ವೀರೇಶ್ವರ ಪುಣ್ಯಾಶ್ರಮದಲ್ಲಿ ಕಲಿತಿರುವ ಸಾವಿರಾರು ವಿದ್ಯಾರ್ಥಿಗಳು ರಾಜ್ಯದ ವಿವಿಧ ಭಾಗಗಳಲ್ಲಿ ತಮ್ಮ ಸಂಗೀತ ಸೇವೆ ಸಲ್ಲಿಸುವ ಮೂಲಕ ಪುಟ್ಟರಾಜರ ಆದರ್ಶಗಳನ್ನು ಭಿತ್ತರಿಸುತ್ತಿದ್ದಾರೆ ಎಂದರು. ಪುಟ್ಟರಾಜ ಸೇವಾ ಸಮಿತಿಯಿಂದ ಬೆಳಗ್ಗೆ ವಿಶೇಷ ಪೂಜೆ, ಪ್ರಸಾದ ವಿತರಣೆ ಕಾರ್ಯಕ್ರಮ ಜರುಗಿತು. ವಿಠ್ಠಲ ಹವಾಲ್ದಾರ, ನಬಿಸಾಬ್ ಕಿಲ್ಲೇದಾರ, ಬಾಲಾಜಿ ಗುಜಮಾಗಡಿ, ಚನ್ನು ನಂದಿ, ಬಿ.ಆರ್. ಸೊರಟೂರ, ಚಂದ್ರಶೇಖರ ಸೂಳಿಬಾವಿ, ದಾವಲಸಾಬ್ ಸಿಂಧಗಿ, ಬಿ.ವೈ. ಕಲ್ಲನಗೌಡ್ರ, ನಾಗರಾಜ ಪಾರ್ವತಿಯವರ, ಸುನೀಲ ಇದ್ದರು.

    ಜಗತ್ತಿನ ಎಂಟನೇ ಅದ್ಭುತ ಪುಟ್ಟರಾಜರು: ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಮಹಾತ್ಮರಾದ ಪುಟ್ಟರಾಜರ ಸತ್ಕಾರ್ಯಗಳನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಕಣ್ಣು ಕಾಣದ, ಬೆಳಕನ್ನೇ ನೋಡದ ಮಕ್ಕಳು ಅಜ್ಜನ ಜನ್ಮದಿನ ಆಚರಿಸುತ್ತಾರೆ. ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಮಕ್ಕಳನ್ನು ಮಠಕ್ಕೆ ಕರೆದುಕೊಂಡು ಬಂದು ವಸತಿ, ಊಟೋಪಚಾರ ಸಮೇತ ವಿದ್ಯೆ ನೀಡಿ ಬಾಳು ಕೊಟ್ಟು ಪುಣ್ಯಾತ್ಮನ ಸಾಧನೆ ಎಷ್ಟು ಕೊಂಡಾಡಿದರೂ ಸಾಲದು. ಜಗತ್ತಿನಲ್ಲಿ ಏಳು ಅದ್ಭುತಗಳಿವೆ. ಪುಟ್ಟಯ್ಯಜ್ಜನ ಸಾಧನೆ ಜಗತ್ತಿನ ಎಂಟನೇ ಅದ್ಭುತ. ಅಂತಃಕರಣದಲ್ಲಿ ಪ್ರೇಮ ತುಂಬಿಕೊಂಡಿದ್ದ ಪುಟ್ಟಯ್ಯಜ್ಜ ನಿಜವಾದ ಗುರು ಎಂದರು. ಬೆಳಕಿಗೆ ಜಾತಿ ಇಲ್ಲ, ಭಕ್ತಿಗೆ ಜಾತಿ ಇಲ್ಲ. ಹೀಗಾಗಿ ಸರ್ವಧರ್ಮದವರೂ ಅಜ್ಜನ ಜಯಂತಿ ಆಚರಣೆ ಮಾಡುತ್ತಾರೆ. ಮಠಕ್ಕೆ ಭಕ್ತರೇ ಆಸ್ತಿ. ಎಲ್ಲರ ಹಿತ ಬಯಸುವ ಆಶ್ರಮವೇ ಗದುಗಿನ ವೀರೇಶ್ವರ ಪುಣ್ಯಾಶ್ರಮ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts