More

    ವ್ಯಾಪಾರಿಗಳ ಮೇಲೆ ಎಚ್ಚರವಹಿಸಿ

    ಕೋಲಾರ: ಕರೊನಾ ಮೂರನೇ ಅಲೆ, ಡೆಲ್ಟಾ ಪ್ಲಸ್ ತಡೆಯಲು ಹೊರರಾಜ್ಯಗಳಿಂದ ಜಿಲ್ಲೆಯ ಮಾರುಕಟ್ಟೆಗಳಿಗೆ ವ್ಯಾಪಾರಕ್ಕೆ ಬರುವವರು ಲಸಿಕೆ ಪಡೆದಿದ್ದರೆ ಹಾಗೂ ನೆಗೆಟಿವ್ ವರದಿ ಇದ್ದವರಿಗಷ್ಟೇ ಪ್ರವೇಶ ಕಲ್ಪಿಸಲು ಗಡಿಯಲ್ಲಿ ಕಟ್ಟೆಚ್ಚರ ವಹಿಸಲು ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಅಧಿಕಾರಿಗಳಿಗೆ ಸೂಚಿಸಿದರು.

    ಜಿಪಂ ಸಭಾಂಗಣದಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ಹಾಗೂ ಕೋವಿಡ್ 3ನೇ ಅಲೆಯ ಪೂರ್ವತಯಾರಿ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಮೂರನೇ ಅಲೆ ಬಗ್ಗೆ ಸಣ್ಣ ಸೂಚನೆ ಇರುವುದರಿಂದ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಎದುರಿಸಲು ಸಿದ್ಧತೆ ನಡೆಸಿಕೊಳ್ಳಬೇಕು. ಕೋವಿಡ್‌ಗೆ ಸಂಬಂಧಿಸಿದ ನೋಡಲ್ ಅಧಿಕಾರಿಗಳು, ಪೊಲೀಸ್ ಇಲಾಖೆ ಜಂಟಿಯಾಗಿ ಗ್ರಾಮಮಟ್ಟದಲ್ಲಿ ತಪಾಸಣೆ ನಡೆಸಲು ಸಿದ್ಧತೆ ಕೈಗೊಳ್ಳಬೇಕು ಎಂದರು.

    ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದರೂ ಜಿಲ್ಲೆಯಲ್ಲಿ ರಸ್ತೆಗಳು ಅಭಿವೃದ್ಧಿಯಾಗಿಲ್ಲ, ಜನ ವೋಟು ಹಾಕಿದ್ದಾರೆ, ಅವರಿಗೆ ರಸ್ತೆ, ಕುಡಿಯುವ ನೀರು ಕೊಟ್ಟಿಲ್ಲ ಅಂದರೆ ನಾವು ನಿಂದನೆಗೆ ಒಳಗಾಗುತ್ತೇವೆ ಎಂದರು. ಕ್ರೆಡಲ್ ನಡೆಸುವ ಕಾಮಗಾರಿಗಳ ಬಗ್ಗೆ ನಂಬಿಕೆಯೇ ಇಲ್ಲ. ಸಂಸ್ಥೆಯೇ ನೇರವಾಗಿ ಕಮಿಷನ್ ಪಡೆಯುತ್ತದೆ. ಅಧಿಕೃತವಾಗಿ ಶೇ.16ರಷ್ಟು ಇತರ ತೆರಿಗೆ ಪಡೆದೂ ಅನಧಿಕೃತವಾಗಿ ಶಾಸಕರು, ಸಂಸದರು, ಇತರರಿಗೆಂದು ತೆಗೆದಿಟ್ಟರೆ ಗುಣಮಟ್ಟ ಕಾಪಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಅಧಿಕಾರಿ ಸಮಜಾಯಶಿ ನೀಡಲು ಮುಂದಾದಾಗ ನಾನೊಬ್ಬ ಸಿವಿಲ್ ಇಂಜಿನಿಯರ್, ನನ್ನ ಹತ್ತಿರ ಸುಳ್ಳು ಹೇಳಿ ಸಮಸ್ಯೆ ಮಾಡಿಕೊಳ್ಳಬೇಡಿ, ಎಚ್ಚರಿಕೆಯಿಂದ ವಸ್ತುಸ್ಥಿತಿ ಬಗ್ಗೆ ಹೇಳಬೇಕಾಗುತ್ತದೆ ಎಂದು ಸಚಿವರು ಕಿವಿ ಹಿಂಡಿದರು.

    ಡಿಸಿ ಡಾ.ಆರ್.ಸೆಲ್ವಮಣಿ ಮಾತನಾಡಿ, ಕರೊನಾ 2ನೇ ಅಲೆಯಲ್ಲಿ ಜಿಲ್ಲೆಯಲ್ಲಿ ಹಾಸಿಗೆಗಳ ಕೊರತೆಯಾಗಿತ್ತು. 3ನೇ ಅಲೆಯ ವೇಳೆಗೆ ತಳಮಟ್ಟದಿಂದ ಸಿದ್ಧವಾಗಲು ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಕೊರತೆ ಪಟ್ಟಿಮಾಡಿಕೊಂಡು ಕಂಪನಿ ಹಾಗೂ ದಾನಿಗಳಿಂದ ಸೌಲಭ್ಯ ಪೂರೈಸಿಕೊಳ್ಳಲಾಗುತ್ತಿದೆ ಎಂದರು.

    ಡಿಎಚ್‌ಒ ಡಾ.ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿ 3,69,070 ಮಂದಿ ಲಸಿಕೆ ಪಡೆದಿದ್ದು, ಇದರಲ್ಲಿ 77,961 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. 150 ಕೇಂದ್ರಗಳಲ್ಲಿ ಲಸಿಕೆ ನೀಡುತ್ತಿದ್ದು, ದಿನಕ್ಕೆ ಕನಿಷ್ಠ 15,000 ಡೋಸ್ ಅಗತ್ಯವಿದೆ ಎಂದರು. ಜಿಪಂ ಸಿಇಒ ಎನ್.ಎಂ.ನಾಗರಾಜ್, ಎಸ್ಪಿಗಳಾದ ಕಿಶೋರ್ ಬಾಬು, ಇಲಾಕಿಯಾ ಕರುಣಾಕರನ್, ಎಡಿಸಿ ಡಾ.ಸ್ನೇಹಾ, ಡಿಎಫ್‌ಒ ಈ.ಶಿವಶಂಕರ್, ಎಸಿ ಸೋಮಶೇಖರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts