More

    ವ್ಯಾಪಾರದ ಅವಧಿ ಕಡಿತ

    ಲಕ್ಷ್ಮೇಶ್ವರ: ಕರೊನಾ ಮಹಾಮಾರಿ ಇದೀಗ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿದ್ದು, ಸರ್ಕಾರದ ಆದೇಶವಿಲ್ಲದಿದ್ದರೂ ಮುಂಜಾಗ್ರತೆ ದೃಷ್ಟಿಯಿಂದ ಪಟ್ಟಣದ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ವ್ಯಾಪಾರದ ಅವಧಿ ಕಡಿತಗೊಳಿಸಿದ್ದಾರೆ.

    ಲಕ್ಷ್ಮೇಶ್ವರ ಮತ್ತು ಬಾಲೇಹೊಸೂರಲ್ಲಿ ವಾರದ ಹಿಂದೆ ಕರೊನಾ ಸೋಂಕಿತ ವ್ಯಕ್ತಿಗಳು ಪತ್ತೆಯಾಗಿದ್ದು, ಈ ಪ್ರದೇಶವನ್ನು ಸೀಲ್​ಡೌನ್ ಮಾಡಲಾಗಿದೆ. ಇದರಿಂದ ಎಚ್ಚೆತ್ತುಕೊಂಡ ವ್ಯಾಪಾರಸ್ಥರು ಜೂ.29 ರಿಂದ ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮಾತ್ರ ವ್ಯಾಪಾರ-ವಹಿವಾಟು ನಡೆಸುವ ಬಗ್ಗೆ ತೀರ್ಮಾನ ಕೈಗೊಂಡು ಸಂಜೆ ನಂತರ ಸ್ವಯಂಪ್ರೇರಿತವಾಗಿ ವ್ಯಾಪಾರ ಬಂದ್ ಮಾಡುತ್ತಿದ್ದಾರೆ.

    ‘ಕರೊನಾದಿಂದ ಪಾರಾಗಲು ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಅನಿವಾರ್ಯವಾಗಿದೆ. ಜನರಿಗೆ ಜೀವನಾವಶ್ಯಕ ವಸ್ತುಗಳನ್ನು ಒದಗಿಸುವುದರೊಂದಿಗೆ ಅವರ ಆರೋಗ್ಯ ಕಾಪಾಡುವ ಗುರುತರ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಹೀಗಾಗಿ ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮಾತ್ರ ವ್ಯಾಪಾರ -ವಹಿವಾಟು ನಡೆಸುತ್ತಿದ್ದೇವೆ’ ಎನ್ನುತ್ತಾರೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವೇಶ ಮಹಾಂತಶೆಟ್ಟರ್.

    ವ್ಯಾಪಾರದ ಅವಧಿ ಮೊಟಕುಗೊಳಿಸುವಂತೆ ಸರ್ಕಾರ ಆದೇಶಿಸಿಲ್ಲ. ಆದರೆ, ಪಟ್ಟಣದ ವ್ಯಾಪಾರಸ್ಥರೇ ಸ್ವಯಂಪ್ರೇರಿತವಾಗಿ ಒಮ್ಮತದ ತೀರ್ಮಾನ ಕೈಗೊಂಡು ಸಂಜೆ 4 ಗಂಟೆಗೆ ವ್ಯಾಪಾರ ಬಂದ್ ಮಾಡುತ್ತಿದ್ದಾರೆ. ದಿನೇದಿನೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ನಮ್ಮೆಲ್ಲರ ಹೊಣೆಗಾರಿಕೆ ಸಾಕಷ್ಟಿದೆ.

    | ಭ್ರಮರಾಂಬ ಗುಬ್ಬಿಶೆಟ್ಟಿ ತಹಸೀಲ್ದಾರ್, ಲಕ್ಷ್ಮೇಶ್ವರ

    ಸ್ವಯಂಪ್ರೇರಿತ ಲಾಕ್​ಡೌನ್

    ಶಿರಹಟ್ಟಿ: ಲಾಕ್​ಡೌನ್ ಸಡಿಲಿಕೆಯಿಂದ ಅನವಶ್ಯಕವಾಗಿ ಜನರು ರಸ್ತೆಗಿಳಿದಿದ್ದರಿಂದ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತ ಸಾಗಿತ್ತು. ಇದರಿಂದ ಎಚ್ಚೆತ್ತ ಸ್ಥಳೀಯ ವ್ಯಾಪಾರಸ್ಥರೇ ಮುಂಜಾಗ್ರತೆಯಿಂದ ಸ್ವಯಂಪ್ರೇರಿತ ಲಾಕ್​ಡೌನ್​ಗೆ ಮುಂದಾಗಿದ್ದಾರೆ.

    ಶಿರಹಟ್ಟಿ ಪಟ್ಟಣದಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಪಟ್ಟಣದ ವ್ಯಾಪಾರಿಗಳು, ಮುಖಂಡರೆಲ್ಲ ಸೇರಿ ಒಕ್ಕೊರಲಿನ ತೀರ್ಮಾನ ಕೈಗೊಂಡು ವ್ಯಾಪಾರ ವಹಿವಾಟನ್ನು ಸೀಮಿತ ಅವಧಿಗೆ ಅಂದರೆ ಬೆಳಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ನಿಗದಿಪಡಿಸಿ ಉಳಿದ ಸಮಯದಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್ ಪಾಲನೆಗೆ ನಿರ್ಧರಿಸಿದ್ದರು. ಇದರಿಂದ ಮಧ್ಯಾಹ್ನ 2 ಗಂಟೆಯಷ್ಟರಲ್ಲಿ ಜನತೆ ಮನೆ ಸೇರಿಕೊಳ್ಳುತ್ತಿದ್ದಾರೆ.

    ವ್ಯಾಪಾರಸ್ಥರ ನಿರ್ಧಾರಕ್ಕೆ ಆರಂಭದಲ್ಲಿ ಜನತೆಯಿಂದ ಅಪಸ್ವರ ಕೇಳಿ ಬಂದಿತ್ತು. ನಂತರ ನಿತ್ಯ ಕರೊನಾ ಪಾಸಿಟಿವ್ ಕೇಸ್​ಗಳ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ ಅವರೆಲ್ಲ ಮೌನಕ್ಕೆ ಶರಣಾಗಿ ವ್ಯಾಪಾರಿಗಳ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts