More

    ವ್ಯರ್ಥವಾದ ಬಿಆರ್​ಟಿಎಸ್ ಕಾಮಗಾರಿ, ಬರಲಿದೆ ಹೊಸ ವಿನ್ಯಾಸ

    ಹುಬ್ಬಳ್ಳಿ: ವಿಳಂಬ ಕಾಮಗಾರಿ ಕುಖ್ಯಾತಿಯ ಬಿಆರ್​ಟಿಎಸ್ ಆರಂಭದಿಂದಲೂ ಒಂದಿಲ್ಲೊಂದು ಅವಾಂತರ ಸೃಷ್ಟಿಸುತ್ತಲೇ ಬಂದಿದ್ದು, ಇದೀಗ ನವಲೂರ ಮೇಲ್ಸೇತುವೆಯ ಕಳಪೆ ಕೆಲಸದಿಂದಾಗಿ ಸಾರ್ವಜನಿಕರ ಆಕ್ರೋಶ ಹಾಗೂ ಸಂಶಯಕ್ಕೆ ಕಾರಣವಾಗಿದೆ.

    2016ರಲ್ಲಿ ನವಲೂರ ಬಳಿ ಎರಡು ಮೇಲ್ಸೇತುವೆ ಕಾಮಗಾರಿ ಆರಂಭಿಸಿದ್ದ ಬಿಆರ್​ಟಿಎಸ್ ಕಂಪನಿ ಒಂದನ್ನು 2018ರಲ್ಲಿ ಪೂರ್ಣಗೊಳಿಸಿ ಪ್ರಾಯೋಗಿಕ ಬಸ್ ಸಂಚಾರ ಆರಂಭಿಸಿತು. ಆದರೆ, ಇನ್ನೊಂದು ಸೇತುವೆ ಕಾಮಗಾರಿಯನ್ನು ಹಠಾತ್ ನಿಲ್ಲಿಸಿ ಬಿಟ್ಟಿದೆ. ಇದು ಕೂಡ ಆಗಲೇ ಮುಗಿಯಬೇಕಿತ್ತು.

    ಆದರೆ, ಈ ಸೇತುವೆ ಬಳಿ ಬರುವ ಹೋಟೆಲ್​ವೊಂದರ ವಿಜಿಬಿಲಿಟಿಗಾಗಿ ಈಗ ಹೊಸ ವಿನ್ಯಾಸದಲ್ಲಿ ಬರಲಿದೆ!

    ನಮ್ಮ ಜನಪ್ರತಿನಿಧಿಗಳ ಪ್ರಕಾರ ಬಿಆರ್​ಟಿಎಸ್ ರಾಜ್ಯದ ಮಾದರಿ ಯೋಜನೆ. ಆದರೆ, ಇದರ ಅನುಷ್ಠಾನ ಮಾಡುವ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ, ವಿಳಂಬ ಹಾಗೂ ಕಳಪೆ ಕಾಮಗಾರಿ, ಭೂಸ್ವಾಧೀನಕ್ಕೆ ನೀಡಿದ ಅತ್ಯಂತ ಹೆಚ್ಚಿನ ಪರಿಹಾರ ಹಾಗೂ ಯೋಜನೆಗೆ ಖರ್ಚು ಮಾಡಿದ ಸಾವಿರ ಕೋಟಿ ರೂ. ಈ ಎಲ್ಲವನ್ನು ನೋಡಿದರೆ ಇದು ಯಾವುದಕ್ಕೆ ಮಾದರಿ ಎನ್ನುವ ಪ್ರಶ್ನೆಯನ್ನು ಜನರು ಮುಂದಿಡುತ್ತಿದ್ದಾರೆ. ಅದರೊಂದಿಗೆ ಗೋಲ್‍ಮಾಲ್ ವಾಸನೆಯೂ ಬಡಿಯುತ್ತಿದೆ.

    ಎರಡೂ ಬದಿ ಸಂಪರ್ಕಕ್ಕೆ ಸರಿಯಾಗಿ ರಸ್ತೆ ಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆ ಇತ್ತು ಎನ್ನುವುದು ಒಂದೆಡೆಯಾದರೆ, ಅಂದಿನ ಪ್ರಭಾವಿ ಸಚಿವರೊಬ್ಬರ ಒತ್ತಡದಿಂದಾಗಿ ಸೇತುವೆ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಅಲ್ಲಿನ ಹೋಟೆಲ್ ಕಾಣುವಂತೆ ಅನುಕೂಲವಾಗುವ ರೀತಿಯಲ್ಲಿ ಹೊಸ ವಿನ್ಯಾಸ ಮಾಡುವಷ್ಟು ಪ್ರಭಾವ ಬೀರಿದ್ದಾರೆ ಎಂಬ ಸಂಶಯ ಜನರನ್ನು ಕಾಡುತ್ತಿದೆ.

    ಈ ಮಧ್ಯೆ ಹುಬ್ಬಳ್ಳಿ- ಧಾರವಾಡ ಮಧ್ಯೆ ನಿರ್ವಣವಾದ (ಅರ್ಧಂಬರ್ಧ) ಬಿಆರ್​ಟಿಎಸ್ ಕಾರಿಡಾರ್ ಹಾಗೂ ಅಪೂರ್ಣ ಯೋಜನೆಯನ್ನು ಕಳೆದ ಫೆಬ್ರವರಿ 2ರಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಲೋಕಾರ್ಪಣೆ ಮಾಡಿದರು. ಆಗೆಲ್ಲ ಅತಿ ಶೀಘ್ರದಲ್ಲಿ ಯೋಜನೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಘಂಟಾಘೋಷವಾಗಿ ಹೇಳಿದ್ದರು. ಆದರೆ, ಅಂದು ಕಾಮಗಾರಿ ಎಲ್ಲಿಗೆ ನಿಂತಿತ್ತೋ ಅಲ್ಲೇ ಇದೆ!

    ನವಲೂರ ರೈಲ್ವೆ ಸೇತುವೆ: ಬಿಆರ್​ಟಿಎಸ್ ಯೋಜನೆ ಅಡಿ ಅವಳಿನಗರ ಮಧ್ಯೆ ನವನಗರ, ಉಣಕಲ್ಲ, ಉಣಕಲ್ಲ ಕ್ರಾಸ್ ಸೇರಿ ಮೂರು ಮೇಲ್ಸೇತುವೆ ಮಾಡಲಾಗಿದೆ. ಅದೇ ರೀತಿ ನವಲೂರ ಬಳಿ ರೈಲು ಹಳಿ ಮೇಲಿನ (ಆರ್​ಒಬಿ) ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. 2016ರಿಂದ ಈ ಸೇತುವೆ ಕಾಮಗಾರಿ ಆರಂಭವಾಗಿದೆ. ಆದರೆ, ಎರಡರ ಪೈಕಿ ಒಂದು ಸೇತುವೆ ಪೂರ್ಣಗೊಂಡಿದೆ. ಅರ್ಧ ಕಾಮಗಾರಿಯಾಗಿರುವ ಇನ್ನೊಂದು ಸೇತುವೆ ಕುಸಿಯಲು ಆರಂಭಿಸಿರುವುದು ಕಳಪೆತನಕ್ಕೆ ಕನ್ನಡಿ ಹಿಡಿದಿದೆ.

    ಇಲ್ಲಿಯೂ ಕೂಡ ಗೋಲ್‍ಮಾಲ್ ಮಾತುಗಳು ಕೇಳಿ ಬರುತ್ತಿವೆ. 2018ರಲ್ಲೇ ಮುಗಿಸಬೇಕಾಗಿದ್ದ ನವಲೂರ ಸೇತುವೆ ಕಾಮಗಾರಿ ವಿಳಂಬದಿಂದಾಗಿ ಇದೀಗ ಮತ್ತೆ ಯೋಜನಾ ವೆಚ್ಚ ಹೆಚ್ಚಾಗುವ ಎಲ್ಲ ಸಾಧ್ಯತೆಗಳಿವೆ.

    ವಿನ್ಯಾಸ ಬದಲು: ಯೋಜನೆಯಡಿ ನಿರ್ವಣಗೊಳ್ಳಲಿರುವ ಮೇಲ್ಸೇತುವೆಗೆ ಆರಂಭದಿಂದಲೂ ನವಲೂರು ಗ್ರಾಮಸ್ಥರ ವಿರೋಧ ಇತ್ತು. ನವಲೂರು, ವಿಠ್ಠಲನಗರ, ನವಲೂರ ಛಾವಣಿ ಇವುಗಳ ಮಧ್ಯೆ ಮೇಲ್ಸೇತುವೆಗಳು ಬರುವುದರಿಂದ ಗ್ರಾಮಸ್ಥರ ದಿನನಿತ್ಯದ ಓಡಾಟ, ಚಟುವಟಿಕೆಗೆ ತೀವ್ರ ಅಡಚಣೆಯಾಗುತ್ತದೆ. ಎರಡೂ ಬದಿ ಸುಲಭ ಸಂಪರ್ಕ ಇರಬೇಕು ಎಂದು ಪ್ರತಿಭಟನೆ ಮಾಡುತ್ತ ಬಂದಿದ್ದಾರೆ. ಆದರೆ, ಗ್ರಾಮಸ್ಥರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸದ ಅಧಿಕಾರಿಗಳು ಅದು ಯಾರ ಪ್ರಭಾವಕ್ಕೆ ಒಳಗಾಗಿ ಸೇತುವೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದರೋ ಎಂಬ ಪ್ರಶ್ನೆ ಉಳಿಸಿದ್ದಾರೆ. ಅರ್ಧಕ್ಕೆ ನಿಂತ ಕಾಮಗಾರಿ ಪರಿಣಾಮ ಈಗ ಮಳೆ ಹೆಚ್ಚಾಗಿ ಅಲ್ಲಲ್ಲಿ ಸೇತುವೆಯ ಪ್ಯಾನೆಲ್ ಹಾಗೂ ಮಣ್ಣು ಕುಸಿಯುವಂತಾಗಿದೆ. ದೊಡ್ಡ ಅನಾಹುತದ ಆತಂಕವೂ ಮನೆ ಮಾಡಿದೆ.

    ಈ ಮಧ್ಯೆ ನವಲೂರು ಸೇತುವೆಯ ಡಿಸೈನ್ ಬದಲಾಯಿಸುವ ಬಗ್ಗೆ ಬಿಆರ್​ಟಿಎಸ್ ಕಂಪನಿ ಚಿಂತನೆ ನಡೆಸಿದೆ.

    ಈಗಾಗಲೇ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಅಧ್ಯಯನ ನಡೆಸಿ ಹೊಸ ವಿನ್ಯಾಸ ಸಿದ್ಧಪಡಿಸಿದೆ. ಹಿರಿಯ ಅಧಿಕಾರಿಗಳು ವೀಕ್ಷಣೆ ಮಾಡಿದ್ದಾರೆ. ಅದರ ಪ್ರಕಾರ ಇನ್ನೂ 25 ಗುಂಟೆಯಷ್ಟು ಹೆಚ್ಚುವರಿ ಭೂಸ್ವಾಧೀನ ಮಾಡಿ ಸೇತುವೆ ಪಕ್ಕದ ಹೋಟೆಲ್ ಹಾಗೂ ಗ್ರಾಮಸ್ಥರಿಗೆ ಸುಗಮ ರಸ್ತೆ ಕಲ್ಪಿಸುವ ಯೋಜನೆ ರೂಪಿಸಲಾಗಿದೆ.

    ಒಟ್ಟಾರೆ ಸೇತುವೆ ಪಕ್ಕದ ಹೋಟೆಲ್ ಸೇರಿ ಇಮಾರತುಗಳಿಗೆ ತೊಂದರೆಯಾಗದಂತೆ ವಿನ್ಯಾಸ ರೂಪಿಸಿ ಇನ್ನಷ್ಟು ಹಣ ವೆಚ್ಚ ಮಾಡುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

    ಈಗಾಗಲೇ ಬಿಆರ್​ಟಿಎಸ್​ಗಾಗಿ ನವಲೂರಿನ ಸುಮಾರು ಎಂಟು ಎಕರೆ ಸೇರಿ ಅವಳಿ ನಗರ ಮಧ್ಯೆ ಒಟ್ಟು 72.29 ಎಕರೆ ಜಮೀನು ಭೂಸ್ವಾಧೀನ ಮಾಡಿಕೊಂಡು ಅಂದಾಜು 303 ಕೋಟಿ ರೂ. ಪರಿಹಾರ ನೀಡಲಾಗಿದೆ. ಅವಳಿ ನಗರದಲ್ಲಿ ಅತ್ಯಂತ ದೊಡ್ಡ ಪರಿಹಾರ ನೀಡಿದ ಯೋಜನೆಯೂ ಇದಾಗಿದೆ. ಇಂತಿಪ್ಪ ಯೋಜನೆಗೆ ಮತ್ತಷ್ಟು ಪರಿಹಾರ ಮೊತ್ತ ಸೇರುವ ಸಾಧ್ಯತೆ ಇದೆ.

    ರಾಷ್ಟ್ರೀಯ ನಷ್ಟ: ಹುಬ್ಬಳ್ಳಿ- ಧಾರವಾಡಕ್ಕೆ ಬಿಆರ್​ಟಿಎಸ್ ಯೋಜನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ತಂದಿದ್ದಾರೆ. 2012ರಲ್ಲಿ ಇದರ ಅನುಷ್ಠಾನಕ್ಕೆ ಹಸಿರು ನಿಶಾನೆ ತೋರಿಸಿ ಎರಡು ವರ್ಷದಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ವಿಪರ್ಯಾಸ ಎಂದರೆ ಬಿಆರ್​ಟಿಎಸ್ ಯೋಜನೆ 2020 ಮುಗಿಯುತ್ತ ಬಂದರೂ ಪೂರ್ಣಗೊಂಡಿಲ್ಲ!

    ಆರಂಭದಲ್ಲಿ ಈ ಯೋಜನೆಗೆ ಗೊತ್ತುಪಡಿಸಿ ಅಂದಾಜು ವೆಚ್ಚ 650 ಕೋಟಿ ರೂ. ಆದರೆ, ವಿಳಂಬವಾದಂತೆ ಇದರ ವೆಚ್ಚ ಹೆಚ್ಚುತ್ತ ಹೋಗಿ ಸಾವಿರ ಕೋಟಿ ರೂ.ಗೆ ತಲುಪಿತು. ಇನ್ನೂ ಮುಗಿದಿಲ್ಲ. ಸಾಲದ್ದಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ ಒಂದಿಷ್ಟು ಹಣ ಕೇಳಿ ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿ ಈ ಯೋಜನೆ ಇನ್ನೂ ಎಷ್ಟು ದುಡ್ಡು ತಿನ್ನುತ್ತದೋ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಹೆಚ್ಚುವರಿ ಸುಮಾರು 400 ಕೋಟಿ ರೂ. ರಾಷ್ಟ್ರೀಯ (ನ್ಯಾಷನಲ್ ವೇಸ್ಟ್) ನಷ್ಟ ಅಲ್ಲವೇ? ಇದಕ್ಕೆ ಹೊಣೆ ಯಾರು?

    ನವಲೂರ ಸೇತುವೆ ಕಾಮಗಾರಿ ಸ್ಥಳೀಯರು, ಹೋಟೆಲ್​ನವರ ಆಕ್ಷೇಪ ಹಾಗೂ ಕೆಲ ಜನಪ್ರತಿನಿಧಿಗಳ ತಕರಾರು ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದೆ. ಇದೀಗ ಡಲ್ಟ್ ಹೊಸ ವಿನ್ಯಾಸ ನೀಡಿದ್ದು, ಅದರಂತೆ ಯೋಜನೆ ಜಾರಿಗೆ ಅಂದಾಜು 25 ಗುಂಟೆ ಜಾಗ ಅಗತ್ಯವಾಗಿದೆ. ಭೂಸ್ವಾಧೀನಾಧಿಕಾರಿಗೆ ಸ್ಥಳ ಪರಿಶೀಲನೆಗೆ ಸೂಚಿಸಲಾಗಿದೆ. ಸಾಧಕ- ಬಾಧಕ ಪರಿಶೀಲಿಸಿ ಹೊಸ ಡಿಸೈನ್ ಪ್ರಕಾರ ಇನ್ನೊಂದು ವಾರದಲ್ಲಿ ಕಾಮಗಾರಿ ಪುನಾರಂಭ ಮಾಡಲಾಗುವುದು. – ಕೃಷ್ಣ ಬಾಜಪೇಯಿ, ಬಿಆರ್​ಟಿಎಸ್ ಎಂಡಿ

    ನವಲೂರ ಬಳಿ ಮೇಲ್ಸೇತುವೆ ಅವೈಜ್ಞಾನಿಕವಾಗಿರುವುದು ಸ್ಥಳೀಯ ಹೋಟೆಲ್​ನವರಿಗೂ ಅನನುಕೂಲವಾಗಿರಬಹುದು. ಅದಕ್ಕಿಂತ ಮುಖ್ಯವಾಗಿ ಸ್ಥಳೀಯ ಸುಮಾರು 30,000 ಜನಸಂಖ್ಯೆ ಹೊಂದಿರುವ ನವಲೂರಿಗೆ ಬಿಆರ್​ಟಿಎಸ್ ನಿಲ್ದಾಣ ಇಲ್ಲದಿರುವುದು ಜನರಿಗೆ ಅನನುಕೂಲವಾಗಿದೆ. ಈ ಬಗ್ಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ಗ್ರಾಮಸ್ಥರ ಅಹವಾಲು ಸಂಗ್ರಹಿಸಿದ್ದಾರೆ. ಅದರಂತೆ ಪರಿಷ್ಕೃತ ಡಿಸೈನ್ ರೂಪಿಸಲು ಸೂಚಿಸಲಾಗಿದೆ. ನವಲೂರ ಬಳಿ ನಿಲ್ದಾಣ ಆಗದಿದ್ದರೆ ಯೋಜನೆ ಸಾರ್ಥಕವಾಗದು. – ಅರವಿಂದ ಬೆಲ್ಲದ, ಧಾರವಾಡ 74ರ ಶಾಸಕ

    ಮೇಲ್ಸೇತುವೆ ಮೇಲೆ ಬಿಆರ್​ಟಿಎಸ್ ನಿಲ್ದಾಣವಿಲ್ಲ. ಇದರಿಂದ ನವಲೂರ, ನವಲೂರ ಛಾವಣಿ ಹಾಗೂ ವಿಠ್ಠಲ ನಗರದ ಜನರಿಗೆ ಬಿಆರ್​ಟಿಎಸ್ ವ್ಯವಸ್ಥೆಯ ಅನುಕೂಲವೇ ಇಲ್ಲದಂತಾಗಿದೆ. ಇದನ್ನು ಖಂಡಿಸಿ ಹಲವು ಬಾರಿ ರಸ್ತೆ ಸಂಚಾರ ತಡೆದು ಪ್ರತಿಭಟಿಸಿದ ಪರಿಣಾಮ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ. ಮೇಲ್ಸೇತುವೆಯನ್ನು ಎತ್ತರ ಮಾಡದೆ ಮೊದಲಿದ್ದ ರಸ್ತೆಗೆ ಸಮಾನವಾಗಿ ಮಾಡಬೇಕು ಎಂಬುದು ನಮ್ಮ ಬೇಡಿಕೆ. ಕಾಮಗಾರಿ ನಿಂತ ನಂತರ ಜಿಲ್ಲೆಯ ಸಚಿವ, ಶಾಸಕರು, ಗ್ರಾಮದ ಮುಖಂಡರನ್ನೊಳಗೊಂಡ ಸಭೆ ಜರುಗಿಸಿ ಅಹವಾಲು ಕೇಳಿದ್ದಾರೆ. ಮೂರನೇ ಪಾರ್ಟಿಯವರಿಂದ ಪರಿಶೀಲನೆ ನಡೆಸಿ ಕಾಮಗಾರಿಯಲ್ಲಿ ಬದಲಾವಣೆ ಮಾಡಲು ಅಧಿಕಾರಿಗಳು ಒಪ್ಪಿದ್ದರು. ಆದರೆ 2 ತಿಂಗಳಿಂದ ಯಾವುದೇ ಬೆಳವಣಿಗೆಯಾಗಿಲ್ಲ. – ಶಿವಾನಂದ ಬಡವಣ್ಣವರ, ಪಾಲಿಕೆ ಮಾಜಿ ಸದಸ್ಯ, ನವಲೂರ

    ನವಲೂರ ದಿಬ್ಬದ ಮೇಲೆ ಬಿಆರ್​ಟಿಎಸ್ ನಿಲ್ದಾಣ ಬೇಕು ಎಂಬುದು ಜನರ ಆಗ್ರಹ. ಪ್ರಸ್ತುತ ಕಾಮಗಾರಿಯನ್ನು ಯಥಾವತ್ ಮುಂದುವರಿಸಬೇಕೋ ಅಥವಾ ಬದಲಾವಣೆ ಮಾಡಬೇಕೋ ಎಂಬುದರ ಸ್ಪಷ್ಟ ನಿರ್ದೇಶನ ಬಿಆರ್​ಟಿಎಸ್​ನಿಂದ ಬಂದಿಲ್ಲ. ಮಳೆಗಾಲದ ನಂತರ ಕಾಮಗಾರಿ ಆರಂಭದ ತಯಾರಿಗೆ ಮುಖ್ಯ ಕಚೇರಿಯಿಂದ ನಿರ್ದೇಶನ ಬಂದಿದೆ. – ಎನ್.ಕೆ. ಪುರಂದಕರ, ಕೆಆರ್​ಡಿಸಿಎಲ್ ಇಇ

    ಮೇಲ್ಸೇತುವೆಯಿಂದ ಸ್ಥಳೀಯರಿಗೆ ಅನನುಕೂಲವಾಗಿದೆ. ಮೇಲ್ಸೇತುವೆಯ ಬಗ್ಗೆ ಸಾರ್ವಜನಿಕರಿಂದ ಆರಂಭದಲ್ಲಿ ಅಭಿಪ್ರಾಯ ಸಂಗ್ರಹಿಸಿಲ್ಲ. ಬಿಆರ್​ಟಿಎಸ್ ಬಸ್ ನಿಲ್ದಾಣವೂ ಇಲ್ಲ. ಇದರಿಂದ ಗ್ರಾಮಸ್ಥರು ಕಾಮಗಾರಿ ವಿರೋಧಿಸಿದರು. ಅವರ ಹೋರಾಟವನ್ನು ನಾನೂ ಬೆಂಬಲಿಸಿದ್ದೇನೆ. ಕಾಮಗಾರಿಯ ಡಿಸೈನ್ ಬದಲಿಸಿ ಓಪನ್ ಫ್ಲೈಓವರ್ ನಿರ್ವಿುಸಬೇಕು. ಅದರಿಂದ ಗ್ರಾಮಗಳಿಗೆ ಬಸ್ ಸಂಚಾರ ಹಾಗೂ ಪ್ರಯಾಣಿಕರು ಹತ್ತಲು, ಇಳಿಯಲು ಅನುಕೂಲವಾಗುತ್ತದೆ. – ಮೋಹನ ಮೋರೆ, ಸ್ಥಳೀಯ ರೆಸಾರ್ಟ್ ಮಾಲೀಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts