More

    ವೈದ್ಯ ವೃತ್ತಿಗೆ ಅಗೌರವ ಸಲ್ಲದು

    ಬೆಳಗಾವಿ: ವೈದ್ಯರು ದೇವರಿಗೆ ಸಮ ಎನ್ನುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ವೈದ್ಯ ವೃತ್ತಿಗೆ ಅಗೌರವ ತೋರಲಾಗುತ್ತಿದೆ ಎಂದು ಕೆಎಲ್‌ಇ-ಯುಎಸ್‌ಎಂ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ ಕಳವಳ ವ್ಯಕ್ತಪಡಿಸಿದರು.

    ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ, ದಿಗ್ವಿಜಯ ನ್ಯೂಸ್ ಸುದ್ದಿ ವಾಹಿನಿ ಹಾಗೂ ಯಳ್ಳೂರ ರಸ್ತೆಯಲ್ಲಿರುವ ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆ ಸಹಯೋಗದಲ್ಲಿ ಆಸ್ಪತ್ರೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ವೈದ್ಯರ ದಿನಾಚರಣೆ, ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ವೈದ್ಯರನ್ನು ದೇವರಿಗೆ ಹೋಲಿಕೆ ಮಾಡುವ ಕಾಲ ಈಗ ಮರೆಯಾಗುತ್ತಿದೆ. ವೈದ್ಯ ವೃತ್ತಿಗೆ ಗೌರವ ಕಡಿಮೆಯಾಗುತ್ತಿದೆ. ವೈದ್ಯರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ ಉದಾಹರಣೆಗಳು ಬಹಳಷ್ಟಿವೆ. ಇಂತಹ ಕಾಲಘಟ್ಟದಲ್ಲಿ ವೈದ್ಯರು, ವೈದ್ಯಕೀಯ ಕ್ಷೇತ್ರದ ಬಗ್ಗೆ ಜನರಿಗೆ ಗೌರವ ಕಡಿಮೆಯಾಗುತ್ತಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.

    ರೋಗಿಯು ಯಾವ ಸ್ಟೇಜ್‌ನಲ್ಲಿದ್ದರೂ ವೈದ್ಯರು ಆತನನ್ನು ಬದುಕಿಸಿಕೊಡಬೇಕು ಎಂಬ ಮನಸ್ಥಿಯಲ್ಲಿ ಜನರಿದ್ದಾರೆ. ರೋಗಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರೆ ವೈದ್ಯರ ಮೇಲೆ ಹಲ್ಲೆ ಆಗುತ್ತವೆ. ವೈದ್ಯನಿಗೆ ದೇವರ ಸ್ಥಾನ ನೀಡುವ ಜನರೇ ಮತ್ತೊಂದು ಕಡೆ ಅವರ ಮೇಲೆ ಹಲ್ಲೆ ಮಾಡುತ್ತಿರುವುದು ವಿಪರ್ಯಾಸವೇ ಸರಿ. ಶೇ.98 ವೈದ್ಯರು ಪ್ರಾಣವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ.

    ಶೇ.2 ವೈದ್ಯರು ಮಾಡುವ ತಪ್ಪಿನಿಂದಾಗಿ ಇಡೀ ವೈದ್ಯಕೀಯ ಕ್ಷೇತ್ರವನ್ನೇ ದೂರಲಾಗುತ್ತಿದೆ. ಕರೊನಾ ಸಂದರ್ಭದಲ್ಲಿ ಸಾವಿರಾರು ವೈದ್ಯರು ಸೋಂಕು ತಗುಲಿ ಅಸುನೀಗಿದರು. ನರ್ಸ್, ಅಂಬುಲೆನ್ಸ್ ಸಿಬ್ಬಂದಿಯೂ ಇದ್ದಾರೆ. ಅವರ ಕುಟುಂಬಗಳ ಗತಿ ಏನು?. ಮಾಧ್ಯಮಗಳು ಸಹಿತ ಈ ವಿಚಾರದಲ್ಲಿ ತಮ್ಮ ಹೊಣೆಗಾರಿಕೆ ಅರಿಯಬೇಕಾಗಿದೆ. ವೈದ್ಯರು ಸಮಾಜಕ್ಕೆ ಶ್ರಮಿಸುತ್ತಿರುವುದನ್ನು ಗುರುತಿಸಿ, ಪ್ರಸಂಶಿಸಬೇಕಾಗಿದೆ. ವೈದ್ಯರ ಬಗ್ಗೆ ಸತ್ಯಾಸತ್ಯತೆ ಅರಿತು ಸುದ್ದಿ ಪ್ರಸಾರ ಮಾಡಿ, ಸಾಮಾಜಿಕ ಬದ್ಧತೆ ತೋರಿಸಬೇಕು ಎಂದರು. ವೈದ್ಯರು ಸಮುದಾಯದ ಆರೋಗ್ಯ ಕಾಪಾಡುತ್ತಾರೆ. ಅವರಿಗೆ ಸಿಗಬೇಕಾದ ಸಂಬಳ, ಸವಲತ್ತುಗಳು ದೊರೆಯಬೇಕು. 45 ವಯ ಸ್ಸಿನ ಬಹಳಷ್ಟು ವೈದ್ಯರು ಮೃತಪಟ್ಟಿದ್ದಾರೆ.

    ವೈದ್ಯರು ಸಮುದಾಯದ ಆರೋಗ್ಯದೊಂದಿಗೆ ಸ್ವಆರೋಗ್ಯ ಕಾಪಾಡಿಕೊಳ್ಳಬೇಕು. ಕುಟುಂಬಕ್ಕೆ ಸಮಯ ನೀಡಬೇಕು ಎಂದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮಹೇಶ ಕೋಣಿ ಮಾತನಾಡಿ, ಕೆಎಲ್‌ಇ ಸಂಸ್ಥೆ ಶಿಕ್ಷಣ ಸಂಸ್ಥೆಗಳಿಂದ ಸಾವಿರಾರು ವೈದ್ಯರು ಹೊರಹೊಮ್ಮುತ್ತಿದ್ದಾರೆ. ಈ ಸಂಸ್ಥೆಯಲ್ಲಿ ನಾನು ಉತ್ತಮ ಶಿಕ್ಷಣ ಪಡೆದಿದ್ದರಿಂದ. ಇಂದು ಉನ್ನತ ಹುದ್ದೆಯಲ್ಲಿದ್ದೇನೆ. ಸಂಸ್ಥೆಗೆ ನಾನು ಆಭಾರಿ ಎಂದರು. ಆಸ್ಪತ್ರೆ ನಿರ್ದೇಶಕ ಡಾ.ಎಸ್.ಸಿ.ಧಾರವಾಡ ಮಾತನಾಡಿ, ಯಳ್ಳೂರ ರಸ್ತೆಯಲ್ಲಿರುವ ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯು ಜನರಿಗೆ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿದೆ. ಸುತ್ತಲಿನ ಪ್ರದೇಶದ ಜನರಿಗೆ ಅನುಕೂಲವಾಗಿದೆ ಎಂದರು. ಇದೇ ವೇಳೆ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಡಾ.ಜೆ.ಎಂ.ಖೋಟ, ಡಾ.ಸುರೇಶ ರಾಯ್ಕರ, ಡಾ.ರಾಜಗೋಪಾಲ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ವಿಜಯವಾಣಿ-ದಿಗ್ವಿಜಯ ಸುದ್ದಿವಾಹಿನಿ ವತಿಯಿಂದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ ಕೋಣಿ, ಡಾ.ಎಚ್.ಬಿ.ರಾಜಶೇಖರ, ಡಾ.ಎಸ್.ಸಿ.ಧಾರವಾಡ, ಡಾ.ಕಮರುದ್ದೀನ್ ಜಲಾಮ್ ಅವರನ್ನು ಸತ್ಕರಿಸಲಾಯಿತು. ವಿಜಯ ವಾಣಿ ಸ್ಥಾನಿಕ ಸಂಪಾದಕ ರಾಯಣ್ಣ ಆರ್.ಸಿ. ಹಾಗೂ ಡಾ.ಸಿ.ಎನ್.ತುಗಾಶೆಟ್ಟಿ, ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು. ರೂಪಾ ಸಂಗಡಿಗರು ಪ್ರಾರ್ಥಿಸಿದರು. ಸಂತೋಷ ಇತಾಪೆ ನಿರೂಪಿಸಿದರು. ಅರುಣ ನಾಗಣ್ಣವರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts