More

    ವೈದ್ಯರಿಗೆ ಒಂದಷ್ಟು ಪ್ರಶ್ನೆಗಳು…

    ಬದುಕಿನಲ್ಲಿ ಎಲ್ಲವೂ ನಾವೆಣಿಸಿದಂತೆಯೇ ಇರುವುದಿಲ್ಲ. ಯಾವುದೇ ನಿರ್ದಿಷ್ಟ ಕರಾರುವಕ್ಕಾದ ಲೆಕ್ಕಾಚಾರಗಳೂ ಅಂತ್ಯದಲ್ಲಿ ಏರುಪೇರಾಗುವುದು, ಇನ್ನು ಕೆಲವೊಮ್ಮೆ ಸಂಪೂರ್ಣವಾಗಿ ತಲೆಕೆಳಗಾಗುವುದು ಎಲ್ಲರಿಗೂ ಅನುಭವವೇದ್ಯ ಸಂಗತಿ. ಮಾನವನ ಆರೋಗ್ಯದ ವಿಚಾರವೂ ಇದಕ್ಕೆ ಹೊರತಲ್ಲ. ಹೇಳಿಕೇಳಿ ಕಾಯಿಲೆ ಯಾರಿಗೆ ವೈದ್ಯರಿಗೆ ಒಂದಷ್ಟು ಪ್ರಶ್ನೆಗಳು...ಬೇಕು? ಅತ್ಯುತ್ತಮ ಜೀವನಶೈಲಿ, ಆದರ್ಶಪ್ರಾಯ ಆಹಾರವಿಧಾನ, ಮಾದರಿ ಎನ್ನುವಂತಹ ನಡೆ-ನುಡಿ, ಅನುಕರಣೀಯ ಆಚಾರ ವಿಚಾರ, ಹರ್ಷದಾಯಕ ಹವ್ಯಾಸಗಳು – ಹೀಗೆ ಬದುಕಿನಲ್ಲಿ ಏನೆಲ್ಲ ಇದ್ದರೆ ಚೆನ್ನವೋ ಅವೆಲ್ಲವೂ ಇದ್ದಾಗ್ಯೂ ಆರೋಗ್ಯ ಕೆಲವೊಮ್ಮೆ ದಾರಿ ತಪ್ಪುವುದಿದೆ. ಆಗ ಇಲ್ಲಿಯ ತನಕ ಮಾಡಿದ್ದೆಲ್ಲವೂ ವ್ಯರ್ಥ ಕಸರತ್ತು ಎಂದು ಭಾವಿಸಿದರೆ ತಪ್ಪಾಗುತ್ತದೆ. ಇಷ್ಟೆಲ್ಲ ಮಾಡಿದ್ದರಿಂದ ಆರೋಗ್ಯ ಹೀಗಾದರೂ ಇದೆ ಎಂದು ತೃಪ್ತಿಪಡುವುದರಲ್ಲಿ ಜಾಣ್ಮೆಯಿದೆ.

    ‘ಇಪ್ಪತ್ತು ವರ್ಷಗಳಿಂದ ನಿರಂತರವಾಗಿ ಯೋಗಾಭ್ಯಾಸ ಮಾಡುತ್ತಿದ್ದೇನೆ, ಆದರೂ ಯಾಕಿಷ್ಟು ಕಾಯಿಲೆ?’ ಎಂಬ ಪ್ರಶ್ನೆಗೆ ಉತ್ತರವೂ ಅದರಲ್ಲೇ ಅಡಗಿದೆ! ‘ಇಂತಹ ಯೋಗಾಭ್ಯಾಸದಿಂದಾಗಿ ಇಷ್ಟೇ ಕಾಯಿಲೆಯಿದೆ, ಅದಿಲ್ಲವಾಗಿದ್ದರೆ ಪರಿಸ್ಥಿತಿಯೇ ಬೇರೆಯಾಗುತ್ತಿತ್ತು’ ಎಂಬುದಷ್ಟೇ ಇಲ್ಲಿ ಗ್ರಾಹ್ಯವಾಗಿದೆ. ಅದಿಲ್ಲವಾದರೆ ಹುಟ್ಟಿ ನಾಲ್ಕೇ ದಿನಗಳಲ್ಲಿ ತೀವ್ರವಾದ ಹೃದಯದ ಕಾಯಿಲೆಯಿದೆಯೆಂದು ಗೊತ್ತಾದಾಗ ಪಾಲಕರು ದಂಗಾಗುತ್ತಾರೆ. ಆ ಮಗು ಮಾಡಿದ ತಪ್ಪಾದರೂ ಏನು? ಆಹಾರ-ವಿಹಾರಗಳಲ್ಲಿ ಆದ ತೊಂದರೆಯೇ ಅಲ್ಲವಲ್ಲ. ಅಂದಮೇಲೆ ನಾವು ಬಯಸಿದಂತೆಯೇ ‘ಸ್ವಾಸ್ಥ್ಯ ಎಂಬ ಜೀವನದ ಅತ್ಯಮೂಲ್ಯ ರತ್ನ ಇರುತ್ತದೆ ಎಂದೇನಿಲ್ಲ. ಬಂದದ್ದನ್ನು ಬಂದಂತೆ ಸ್ವೀಕರಿಸಿ ಅದರ ಪರಿಹಾರಕ್ಕೆ ಯತ್ನಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯವಾಗುತ್ತದೆ.

    ಜೀವನದಲ್ಲಿ ಸದಾ ಎಚ್ಚರಿಕೆಯಿಂದ ಇರಬೇಕು. ಆರೋಗ್ಯದಲ್ಲಿ ಏರುಪೇರಾದಾಗ ಈ ಎಚ್ಚರ ಹೆಚ್ಚಿರಬೇಕು. ರಸ್ತೆಯಲ್ಲಿ ವಾಹನ ಚಲಾಯಿಸುವಾಗ ‘ಅಪಘಾತದ ವಲಯ, ಎಚ್ಚರಿಕೆಯಿಂದ ಚಲಿಸಿ’ ಎಂಬ ಸೂಚನಾಫಲಕವಿದ್ದರೆ ಅದಿಲ್ಲದಲ್ಲಿ ಎಚ್ಚರತಪ್ಪಿ ಚಲಾಯಿಸಬಹುದೆಂದಲ್ಲ. ‘ಎಲ್ಲೆಡೆಯೂ ಜಾಗರೂಕತೆಯಿರಲಿ, ಇಲ್ಲಿ ಸ್ವಲ್ಪ ಹೆಚ್ಚು’ ಎಂಬುದಷ್ಟೇ ಸೂಚನೆಯ ತಾತ್ಪರ್ಯ.

    ಬದುಕು ಸರಿದಾರಿಯಲ್ಲಿ ಸಾಗುತ್ತಿರುವಾಗ ಅಚಾನಕ್ ಆಗಿ ದೊಡ್ಡ ಹೆಸರಿನ ರೋಗವೊಂದು ನಮ್ಮನ್ನು ತತ್ತರಿಸುವಂತೆ ಮಾಡಿದರೆ ಏನು ಮಾಡಬೇಕೆಂದು ದಿಕ್ಕೇ ತೋಚದಂತಾಗುವುದು ಸಹಜ. ಅನುಭವೀ ವೈದ್ಯರಲ್ಲಿಗೆ ಹೋದಾಗ ‘ನಿಮಗೆ ಇಂತಹ ಕಾಯಿಲೆ ನೋಡಿ ಗೊತ್ತಾ?’ ಎಂಬ ಪ್ರಶ್ನೆ ಕೇಳಿಬಿಡುತ್ತೇವೆ. ಗಲ್ಲಿಗಲ್ಲಿಗಳಲ್ಲಿ ಕಾಣಸಿಗುವ ಕಾಯಿಲೆ ನಮಗೆ ಹೊಸದಿರಬಹುದು, ಆದರೆ ಅದನ್ನು ಕೇಳಿಸಿಕೊಂಡ ವೈದ್ಯರಿಗೆ ಹೇಗಾಗಬೇಡ? ಒಂದುವೇಳೆ ಆ ವೈದ್ಯರು ಚಿಕಿತ್ಸೆ ಪ್ರಾರಂಭಿಸಿದ ದಿನದಂದೇ ಈ ಪ್ರಶ್ನೆ ಕೇಳಿದ್ದರೂ ಅದು ಸಮಯೋಚಿತವಲ್ಲ. ಹಾಗಿದ್ದರೆ ಹೊಸ ವೈದ್ಯರು ಚಿಕಿತ್ಸೆ ನೀಡುವುದೇ ದುಸ್ತರವಾಗುತ್ತದೆ. ಯಾಕೆಂದರೆ ಅವರಿಗೆ ನಾವು ಬಯಸಿರುವಂತಹ ಅನುಭವವೇ ಇಲ್ಲವಲ್ಲ! ಆ ವೈದ್ಯರಿಗೆ ಗುಣಪಡಿಸುವ ವಿಚಾರವಂತಿಕೆ ಇದೆಯಾ, ಉತ್ತಮ ಚಿಕಿತ್ಸೆ ನೀಡಲು ಸಾಧ್ಯವೆಂಬ ಅದಮ್ಯ ಧೈರ್ಯ ವಿಶ್ವಾಸಗಳಿವೆಯಾ ಎಂಬುದಷ್ಟೇ ಇಲ್ಲಿ ಮುಖ್ಯವಾಗುತ್ತದೆ.

    ‘ಈ ರೋಗ ಸಂಪೂರ್ಣ ಗುಣಮುಖವಾಗುತ್ತದಾ?’ ಎಂಬುದೂ ಮತ್ತೊಂದು ಮಹತ್ವದ ಪ್ರಶ್ನೆ. ವೈದ್ಯರಾದವರಿಗೆ ಸರ್ವೆಸಾಮಾನ್ಯವಾಗಿ ಚಿಕಿತ್ಸೆಯ ಫಲಿತವ್ಯ ಯಾವ ದಿಕ್ಕಿನಲ್ಲಿ ಇರುತ್ತದೆ ಎಂಬುದಷ್ಟೇ ಅರಿವಿನಲ್ಲಿರುತ್ತದೆ. ಅದರ ಹೊರತು ನಿಖರವಾಗಿ ಆ ನಿರ್ದಿಷ್ಟ ವ್ಯಕ್ತಿಯಲ್ಲಿ ಫಲಿತಾಂಶ ಹೇಗೆ ಬರುತ್ತದೆ ಎಂಬುದನ್ನು ಹೇಳಲು ಬರುವುದಿಲ್ಲ. ಸಾಧ್ಯವಿದೆ ಎನಿಸಿದರೆ ಮಾತ್ರವೇ ಚಿಕಿತ್ಸೆಗೆ ಉದ್ಯುಕ್ತರಾಗುತ್ತಾರೆ. ‘ರೋಗದಿಂದ ಹೊರಬರಲು ಎಷ್ಟು ಸಮಯ ಬೇಕು?’ ಎಂಬ ಇನ್ನೊಂದು ಪ್ರಶ್ನೆಯನ್ನೂ ಸಾಮಾನ್ಯವಾಗಿ ಕೇಳುತ್ತೇವೆ. ವಾಸಿ ಮಾಡಬಹುದಾದ ಯಾವುದೇ ವ್ಯಾಧಿಯೇ ಆಗಿದ್ದರೂ ಇಂತಿಷ್ಟೇ ಸಮಯದಲ್ಲಿ ಎಂದು ಖಚಿತವಾಗಿ ಹೇಳಲು ಬರುವುದಿಲ್ಲ. ‘ಔಷಧದ ಕೋರ್ಸ್’ ಎಂದು ನಿರ್ದಿಷ್ಟವಾಗಿ ಇರುವಲ್ಲೂ ಅದನ್ನು ಹಲವಾರು ಬಾರಿ ಪುನರಾವರ್ತನೆ ಮಾಡಬೇಕಾಗುವುದಿದೆ. ಜ್ವರ ಒಂದೇ ದಿನ ಇರುವುದೂ ಇದೆ, ಒಂದೆರಡು ತಿಂಗಳು ಬಾಧಿಸುವುದೂ ಇದೆ! ಇಪ್ಪತ್ತು ವರ್ಷಗಳಿಂದ ಒಂದೇ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ಹೊಸದಾಗಿ ಭೇಟಿಯಾದ ವೈದ್ಯರಲ್ಲಿ ‘ಎಷ್ಟು ದಿನದಲ್ಲಿ ವಾಸಿಯಾಗಬಹುದು?’ ಎಂದು ಆತುರದಲ್ಲಿ ಕೇಳುವುದಿದೆ! ಚಿಕಿತ್ಸೆ ಮ್ಯಾಜಿಕ್​ನಂತೆ ನಡೆಯಲೆಂದು ಬಯಸುವುದು ಸಹಜ. ಆದರೆ ಜೀವಿಗಳೆಲ್ಲ ನಿಸರ್ಗದ ನಿಯಮಗಳಿಗೆ ಅಧೀನರೆಂಬುದು ವಾಸ್ತವ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts