More

    ವೈಜ್ಞಾನಿಕ ವಿಧಾನದಲ್ಲಿ ಕಸ ವಿಂಗಡಿಸಿ

    ಕೋಲಾರ: ವೈಜ್ಞಾನಿಕ ವಿಧಾನ ಹಾಗೂ ಮಾನದಂಡ ಆಧರಿಸಿ ಕಸ ವಿಲೇವಾರಿ ಮಾಡುವ ಕ್ರಮಗಳನ್ನು ನಗರಸಭೆ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚಿಸಿದರು. ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ನಗರಸಭೆ ಗುರುವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನ ಉದ್ಘಾಟಿಸಿ ಮಾತನಾಡಿ, ಸ್ಥಳೀಯ ಸಂಸ್ಥೆಗಳು ಒಣ ಹಾಗೂ ಹಸಿ ಕಸವೆಂದು ವಿಂಗಡಿಸಿ ವಿಲೇವಾರಿ ಮಾಡಬೇಕು. ಕಸ ವಿಲೇವಾರಿ ಸಂಬಂಧ ಸುಪ್ರೀಂಕೋರ್ಟ್, ಹೈಕೋರ್ಟ್ ನಿರ್ದೇಶನ ಹಾಗೂ ಸರ್ಕಾರದ ನಿರ್ದಿಷ್ಟ ಮಾನದಂಡವಿದೆ. ಅನುಷ್ಠಾನದಲ್ಲಿ ನಗರಸಭೆ ಹಿಂದುಳಿಯದೆ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂದರು.

    ಪೌರ ಕಾರ್ಮಿಕರಿಗೆ ಮೂಲಸೌಲಭ್ಯ, ಆರೋಗ್ಯ ರಕ್ಷಣೆಗೆ ಅಗತ್ಯ ಪರಿಕರ ಒದಗಿಸಬೇಕು. ಪೌರಕಾರ್ಮಿಕರ ಸೇವೆ ಕಾಯಂಗೊಳಿಸುವುದು ಸೇರಿ ಇನ್ನಿತರ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸುವ ಜತೆಗೆ ವಸತಿ ಸೌಲಭ್ಯಕ್ಕೆ ಕಂದಾಯ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶಲನಾಲಯದ ಜತೆ ಚರ್ಚಿಸಿ ಮೂರು ತಿಂಗಳೊಳಗೆ ಕ್ರಮ ವಹಿಸಲಾಗುವುದು ಎಂದರು.

    ಪೌರಾಯುಕ್ತ ಎಸ್. ಪ್ರಸಾದ್ ಮಾತನಾಡಿ, ಸ್ವಚ್ಛತಾ ಸೇನಾನಿಗಳಾಗಿ ಪೌರಕಾರ್ಮಿಕರು ನಗರದ ಆರೋಗ್ಯ ಕಾಪಾಡುತ್ತಿದ್ದಾರೆ. ಪೌರಕಾರ್ಮಿಕರ ದಿನದಂದು ಎಲ್ಲ ಕಾರ್ಮಿಕರು ಕರೊನಾ ಲಸಿಕೆ ಬಗ್ಗೆ ಜನ ಜಾಗೃತಿ ಮೂಡಿಸಲು ನಗರದಲ್ಲಿ ರ‌್ಯಾಲಿ ನಡೆಸಿ ಗಮನ ಸೆಳೆದಿದ್ದಾರೆ ಎಂದರು. ಉಪಾಧ್ಯಕ್ಷ ಎನ್.ಎಸ್. ಪ್ರವೀಣ್‌ಗೌಡ ಮಾತನಾಡಿ, ನೇರ ನೇಮಕಾತಿ, ಗುತ್ತಿಗೆ ನೌಕರರಿಗೆ ಜೀವನ ಭದ್ರತೆ ಇಲ್ಲದಿರುವುದರಿಂದ ಮಾನವೀಯತೆ ಆಧಾರದಲ್ಲಿ ನೆರವು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

    ಆಂಗ್ಲ ಭಾಷಾ ಸಂಪನ್ಮೂಲ ವ್ಯಕ್ತಿ ಡಾ. ರಮೇಶ್ ಮಾತನಾಡಿ, ಇಂಗ್ಲಿಷ್ ಕಲಿತರೆ ಉತ್ತಮ ಭವಿಷ್ಯವಿದೆ. ಪೌರಕಾರ್ಮಿಕರ ಮಕ್ಕಳು ಮುಂದೆ ಬಂದರೆ ಇಂಗ್ಲಿಷ್ ಕಲಿಕೆಗೆ 3 ತಿಂಗಳು ಉಚಿತ ತರಬೇತಿ ನೀಡಲಾಗುವುದು ಎಂದರು. ನಗರಸಭೆ ಅಧ್ಯಕ್ಷೆ ಶ್ವೇತಾ ಆರ್.ಶಬರೀಶ್ ಮಾತನಾಡಿ, 58 ಪೌರಕಾರ್ಮಿಕರಿಗೆ ನಿವೇಶನದ ಇ-ಸ್ವತ್ತು ಪತ್ರ ವಿತರಿಸುವ ಜತೆಗೆ ಮನೆ ನಿರ್ಮಿಸಿ ಕೊಳ್ಳಲು ಸರ್ಕಾರದ ಸೌಲಭ್ಯ ಒದಗಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

    ಗಾಂಧಿವನದಿಂದ ಪ್ರಮುಖ ರಸ್ತೆಗಳಲ್ಲಿ ಪೌರಕಾರ್ಮಿಕರು ಕರೊನಾ ಲಸಿಕೆ ಜಾಗೃತಿ ಜಾಥಾ ನಡೆಸಿದರು. ತಮಟೆ, ಡ್ರಮ್ ಬಡಿತಕ್ಕೆ ನಗರಸಭೆ ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ, ಪೌರಾಯುಕ್ತ, ಅಧಿಕಾರಿಗಳು ಹೆಜ್ಜೆ ಹಾಕಿ ಹುರಿದುಂಬಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ವಿ.ಆಂಬರೀಶ್, ರಾಕೇಶ್, ನಾಜಿಯಾ, ನಾರಾಯಣಮ್ಮ,ಕೆಎಂ ಮಂಜುನಾಥ್, ಪಾವನಾ.ಜಿ.ಎಸ್, ಲಕ್ಷ್ಮೀದೇವಿ, ಖಾಜಾ ಮೊಯಿದ್ದೀನ್, ಮಂಜುನಾಥ್, ಭಾಗ್ಯಲಕ್ಷ್ಮೀ, ನಾರಾಯಣಮ್ಮ, ಅಪೂರ್ವಾ, ನಾಮಕರಣ ಸದಸ್ಯರಾದ ಅರುಣಮ್ಮ, ರಾಜೇಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶರಣಪ್ಪ, ಸಫಾಯಿ ಕರ್ಮಚಾರಿ ಕಾವಲು ಸಮಿತಿ ಸದಸ್ಯರಾದ ರವಣಪ್ಪ, ವೆಂಕಟೇಶಪ್ಪ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ವೆಂಕಟೇಶಪ್ಪ , ಸಮಾಜ ಸೇವಕ ಸಿಎಂಆರ್ ಶ್ರೀನಾಥ್, ನಗರಸಭೆ ಆರ್‌ಐ ಚಂದ್ರು, ಸಿಬ್ಬಂದಿ ತ್ಯಾಗರಾಜ್ ಇತರರಿದ್ದರು.

    ಕ್ರೀಡಾ ವಿಜೇತರಿಗೆ ಬಹುಮಾನ: ಮಾಲೂರಿನ ಪೌರ ಕಾರ್ಮಿಕರಾದ ಸುಬ್ಬು ಮತ್ತು ಕುಟುಂಬದ ಸದಸ್ಯರು ತೆಲುಗು ಚಿತ್ರದ ಅರುಂಧತಿ ಹಾಡಿಗೆ ಹೆಜ್ಜೆ ಹಾಕಿದರೆ, ಮಾತೃ ವಾತ್ಸಲ್ಯ ಬಿಂಬಿಸುವ ಅಭಿನಯ ಮನಸೂರೆಗೊಂಡಿತು. 2020- 21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪೌರಕಾರ್ಮಿಕರ ಮಕ್ಕಳಾದ ಎಸ್.ಗಣೇಶ್, ಪಿ. ಜಗನ್, ವಿ.ಗುಣಶೇಖರ್, ಎಸ್. ಮನೋಜ್ ಇತರರನ್ನು ಪುರಸ್ಕರಿಸಲಾಯಿತು. ಪೌರಕಾರ್ಮಿಕರ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts