More

    ವೆಬ್ ಪೋರ್ಟಲ್​ನಲ್ಲಿ ಬೆಡ್ ವಿವರ

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್​ಗಳ ಮಾಹಿತಿಯನ್ನು ಧಾರವಾಡ ಜಿಲ್ಲಾಡಳಿತವು ನಿತ್ಯವೂ ವೆಬ್ ಪೋರ್ಟಲ್​ನಲ್ಲಿ ಪ್ರಕಟಿಸುವ ಮೂಲಕ ಕೋವಿಡ್ ಸೋಂಕಿತರಿಗೆ ಅನುಕೂಲ ಕಲ್ಪಿಸಿದೆ.

    ಕೆಲ ದಿನಗಳ ಹಿಂದೆ ದೇಶಪಾಂಡೆ ಪ್ರತಿಷ್ಠಾನದ ತಾಂತ್ರಿಕ ನೆರವಿನೊಂದಿಗೆ ಜಛಞಜಿಠ್ಟಿಚ.ಟ್ಟಜ ವೆಬ್ ಪೋರ್ಟಲ್ ಸೃಷ್ಟಿಸಲಾಗಿದೆ. ಇದರಲ್ಲಿ ಜಿಲ್ಲೆಯ 9 ಸರ್ಕಾರಿ ಹಾಗೂ 31 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಆರೈಕೆಗೆ ಮೀಸಲಿಟ್ಟಿರುವ ಬೆಡ್​ಗಳ ಪೈಕಿ ಖಾಲಿ ಇರುವ ಬೆಡ್​ಗಳ ಸಂಖ್ಯೆಯನ್ನು ನಿತ್ಯವೂ 2-3 ಬಾರಿ ಅಪ್ಡೇಟ್ ಮಾಡಲಾಗುತ್ತದೆ. ಇದರಲ್ಲಿ ಪ್ರತಿ ಆಸ್ಪತ್ರೆಯಲ್ಲಿ ಖಾಲಿ ಇರುವ ಸಾಮಾನ್ಯ, ಆಕ್ಸಿಜನ್, ಐಸಿಯು ಹಾಗೂ ವೆಂಟಿಲೇಟರ್ ಸೌಲಭ್ಯವುಳ್ಳ ಮಾಹಿತಿಯನ್ನು ಸಹ ನೀಡಲಾಗಿದೆ. ಸೋಂಕಿತರು ವೆಬ್ ಪೋರ್ಟಲ್​ನಲ್ಲಿರುವ ಮಾಹಿತಿಯನ್ನು ಆಧರಿಸಿ ಸಹಾಯವಾಣಿಗೆ (ಸಂಖ್ಯೆ-08047168111) ಕರೆ ಮಾಡುವ ಮೂಲಕ ನೆರವನ್ನು ಪಡೆಯಬಹುದಾಗಿದೆ.

    ಸಹಾಯವಾಣಿಗೆ ಕರೆ ಮಾಡಿದಾಗ ಸೋಂಕಿತರ ಹೆಸರು, ವಯಸ್ಸು, ವಿಳಾಸ, ಆಧಾರ್ ಸಂಖ್ಯೆ, ಕೋವಿಡ್ ಪರೀಕ್ಷೆ ಮಾಡಿಸಿದ ಎಸ್​ಆರ್​ಎಫ್ ಐಡಿ ಸಂಖ್ಯೆಯನ್ನು ತಿಳಿಸಬೇಕಾಗುತ್ತದೆ. ಬಳಿಕ ಸಹಾಯವಾಣಿ ತಂಡವು ಸೋಂಕಿತರ ಅವಶ್ಯಕತೆಗೆ ತಕ್ಕಂತೆ ಲಭ್ಯವಿರುವ ಸಾಮಾನ್ಯ, ಆಕ್ಸಿಜನ್, ಐಸಿಯು ಹಾಗೂ ವೆಂಟಿಲೇಟರ್ ಸೌಲಭ್ಯವುಳ್ಳ ಬೆಡ್ ಯಾವ ಆಸ್ಪತ್ರೆಯಲ್ಲಿ ಖಾಲಿ ಇದೆ ಎಂಬುದನ್ನು ಖಾತರಿ ಪಡಿಸಿಕೊಂಡು ಹಂಚಿಕೆ ಮಾಡುತ್ತದೆ. ಪ್ರವಾಸಿಗರು ಹೋಟೆಲ್ ರೂಮ್ ಬುಕ್ ಮಾಡುವ ರೀತಿಯಲ್ಲಿ ಈ ವ್ಯವಸ್ಥೆ ಕೆಲಸ ನಿರ್ವಹಿಸುತ್ತದೆ. ಬೆಡ್ ಲಭ್ಯತೆಗೆ ಅನುಗುಣವಾಗಿ ಸೋಂಕಿತರು ವಾಸವಿರುವ ಮನೆಯ ಹತ್ತಿರದ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ.

    ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಿಲ್ಲವಂತೆ

    ಧಾರವಾಡ ಜಿಲ್ಲೆಯಲ್ಲಿನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪೀಡಿತರ ಚಿಕಿತ್ಸೆಗಾಗಿ ಖಾಲಿ ಇರುವ ಬೆಡ್​ಗಳ ಮಾಹಿತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಿಲ್ಲ. ವೆಬ್ ಪೋರ್ಟಲ್​ನಲ್ಲಿ ಪ್ರಕಟಿಸಲಾಗುತ್ತದೆ. ನಿತ್ಯ 5-6 ಬಾರಿ ಪೋರ್ಟಲ್​ನಲ್ಲಿ ಮಾಹಿತಿ ಅಪ್ಡೇಟ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಸೂಚನೆ ಮೇರೆಗೆ ಜಿಲ್ಲಾಡಳಿತವು ಆಸ್ಪತ್ರೆಗಳಲ್ಲಿನ ಬೆಡ್ ಮಾಹಿತಿಯನ್ನು ನಿತ್ಯ ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿತ್ತು. ಗುರುವಾರದಿಂದ ಇದನ್ನು ನಿಲ್ಲಿಸಿದೆ. ಜಿಲ್ಲೆಯಲ್ಲಿ ಶುಕ್ರವಾರ ಸಂಜೆಯವರೆಗೆ 2321 ಬೆಡ್​ಗಳು ಭರ್ತಿಯಾಗಿದ್ದು, 834 ಬೆಡ್​ಗಳು ಖಾಲಿಯಿವೆ ಎಂದು ವೆಬ್ ಪೋರ್ಟಲ್​ನಲ್ಲಿ ತಿಳಿಸಲಾಗಿದೆ.

    5 ವೆಂಟಿಲೇಟರ್ ನಿರುಪಯೋಗಿ

    ಕಲಘಟಗಿ ತಾಲೂಕು ಆಸ್ಪತ್ರೆಯಲ್ಲಿ 3 ವೆಂಟಿಲೇಟರ್ ಬೆಡ್​ಗಳು ಖಾಲಿಯಿವೆ ಎಂದು ವೆಬ್ ಪೋರ್ಟಲ್​ನಲ್ಲಿ ತಿಳಿಸಲಾಗಿದೆ. ಆದರೆ, ಇವುಗಳನ್ನು ನಿರ್ವಹಣೆ ಮಾಡಲು ತಜ್ಞರಿಲ್ಲದೆ ನಿರುಪಯೋಗಿಯಾಗಿವೆ. ಇದೇ ರೀತಿ ನವಲಗುಂದ ತಾಲೂಕು ಆಸ್ಪತ್ರೆಯಲ್ಲಿ ಜಾಗದ ಕೊರತೆಯಿಂದ 2 ವೆಂಟಿಲೇಟರ್​ಗಳು ಕೆಲಸ ಮಾಡುತ್ತಿಲ್ಲ. ಇಲ್ಲಿ 1 ಐಸಿಯು ಬೆಡ್ ಹಾಗೂ 2 ವೆಂಟಿಲೇಟರ್​ಗಳು ಭರ್ತಿಯಾಗಿವೆ.

    ಬೆಡ್ ಮಾಹಿತಿಗಾಗಿ ವೆಬ್ ಪೋರ್ಟಲ್ ಆರಂಭಿಸಿ 3 ದಿನಗಳಾಗಿವೆ. ಮುಂದಿನ ದಿನಗಳಲ್ಲಿ ಅನೇಕ ಅಂಶಗಳನ್ನು ಸೇರಿಸಿ ಬಳಕೆದಾರರ ಸ್ನೇಹಿಯನ್ನಾಗಿ ಮಾಡಲಾಗುವುದು. ಸಹಾಯವಾಣಿಗೆ ಕರೆ ಮಾಡಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್ ಬುಕ್ ಮಾಡಿದ 5ರಿಂದ 15 ನಿಮಿಷಗಳಲ್ಲಿ ಸೋಂಕಿತರ ಮನೆ ಬಾಗಿಲಿಗೆ ಆಂಬುಲೆನ್ಸ್ ಬರುತ್ತದೆ. 30ರಿಂದ 45 ನಿಮಿಷಗಳಲ್ಲಿ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ವ್ಯವಸ್ಥೆ ಸೃಷ್ಟಿಸಲಾಗಿದೆ.

    | ಬಿ. ಗೋಪಾಲಕೃಷ್ಣ

    ಧಾರವಾಡ ಉಪ ವಿಭಾಗಾಧಿಕಾರಿ, ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್​ಗಳ ಪರಿಶೀಲನಾ ತಂಡದ ನೋಡಲ್ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts