More

    ವೀರಶೈವರು ಒಂದಾದರೇನೆ ಅಧಿಕಾರ -ವಿಘಟನೆಗೆ ಕೆಲವರ ತಂತ್ರ-ಕುತಂತ್ರ  ಶ್ರೀ ರಂಭಾಪುರಿ ಜಗದ್ಗುರುಗಳ ಅಭಿಪ್ರಾಯ  

    ದಾವಣಗೆರೆ: ಸಮಸ್ತ ವೀರಶೈವ ಲಿಂಗಾಯತರೆಲ್ಲರೂ ಒಂದಾದರೆ ಈ ರಾಜ್ಯದ ಅಧಿಕಾರ ಬೇರೆಲ್ಲೂ ಹೋಗದು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಶ್ರೀ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜ ದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
    ಶ್ರೀ ಮದ್ವೀರಶೈವ ಸದ್ಭೋಧನಾ ಸಂಸ್ಥೆಯಿಂದ ನಗರದ ಅಭಿನವ ರೇಣುಕ ಮಂದಿರದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಜನಜಾಗೃತಿ ಧರ್ಮ ಸಮಾವೇಶ ಸಮಾರೋಪದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ವೀರಶೈವ ಲಿಂಗಾಯತರು ಒಂದಾಗದಿರಲು ಕೆಲವರು ತಂತ್ರ-ಕುತಂತ್ರಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ಯಾರೂ ಅವಕಾಶ ನೀಡಬಾರದು. ಸಮಾಜದ ಎಲ್ಲ ಒಳಪಂಗಡಗಳ ಧುರೀಣರು ಒಂದೆಡೆ ಕುಳಿತು ಪರಸ್ಪರ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಮಾಜ ಒಂದಾಗಿ ನಡೆದರೆ ಈ ರಾಜ್ಯದ ಅಧಿಕಾರ ಸ್ವರೂಪ ಬೇರೆಲ್ಲೂ ಹೋಗಲು ಸಾಧ್ಯವಿಲ್ಲ ಎಂದರು.
    ವೀರಶೈವ ಧರ್ಮವನ್ನು ಕಲುಷಿತಗೊಳಿಸುವುದಾಗಲೀ, ಇದರಲ್ಲಿನ ಜಾತಿಗಳನ್ನು ಗುಂಪು-ಗುಂಪುಗಳಾಗಿ ವಿಘಟನೆ ಮಾಡುವುದಾಗಲೀ ಯೋಗ್ಯವಲ್ಲ. ಇದನ್ನು ಯಾರೂ ಮಾಡಬಾರದು. ಧರ್ಮ ಉಳಿದರೆ ಮಾತ್ರ ನಮ್ಮ ಸಂಸ್ಕೃತಿಗೆ ಉಳಿವು ಎಂದು ತಿಳಿಸಿದರು.
    ವೀರಶೈವ ಧರ್ಮ ಯಾರನ್ನೂ ವಿರೋಧ ಮಾಡದೆ ಎಲ್ಲರನ್ನೂ ಬೆಳೆಸಿಕೊಂಡು ಬಂದ ಕಾರಣಕ್ಕೆ ವಿಶ್ವಧರ್ಮ ಆಗಿದೆ. ಬಸವಣ್ಣನವರು 12ನೇ ಶತಮಾನದಲ್ಲಿ ಈ ಧರ್ಮವನ್ನು ಸ್ವೀಕರಿಸಿ ಅದರ ಏಳಿಗೆಗೆ ಶ್ರಮಿಸಿದರು. ರೇಣುಕಾಚಾರ್ಯರಾದಿಯಾಗಿ ಬಂದ ಧರ್ಮಾಚರಣೆ ಹಾಗೂ ಕರ್ಮ ಶಕ್ತಿಯನ್ನು ಧರ್ಮಾಭಿಮಾನಿಗಳು ತಿಳಿಯುವ ಅಗತ್ಯವಿದೆ ಎಂದೂ ಹೇಳಿದರು.
    ಕೆಲವರಿಂದ ಕಂದಕ ಸೃಷ್ಟಿ
    ಕೆಲವರು ಗುರು ಮತ್ತು ಶರಣ ಪರಂಪರೆ ನಡುವೆ ಕಂದಕ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ವೀರಶೈವ ಧರ್ಮವನ್ನು ಅರಿಯದೆ ಈ ರೀತಿ ಭಿನ್ನಾಭಿಪ್ರಾಯ ಮೂಡಿಸಿದರೆ ಸಮಾಜ ದುರ್ಬಲವಾಗಲಿದೆ ಎಂದು ಶ್ರೀಗಳು ಎಚ್ಚರಿಸಿದರು.
    ಆಚಾರ್ಯರ ತತ್ವ ಸಂದೇಶ ಹಾಗೂ ಶರಣರ ಸಾಮಾಜಿಕ ಚಿಂತನೆಗಳು ಬೇರೆ-ಬೇರೆಯಲ್ಲ. ಎರಡೂ ಒಂದೇ ಆದರೂ ಕೆಲವರು ಸಂಕುಚಿತ ಮನೋಭಾವದಿಂದ ಕಂದಕ ಸೃಷ್ಟಿಸುತ್ತಿದ್ದಾರೆ. ವೀರಶೈವ ಧರ್ಮದ ಸೈದ್ಧಾಂತಿಕ ತತ್ವ ತಿಳಿದಲ್ಲಿ ಗೊಂದಲಗಳು ಇರುವುದಿಲ್ಲ ಎಂದು ತಿಳಿಸಿದರು.
    ಎಲ್ಲ ಪಂಚಾಚಾರ್ಯರು ವೀರಶೈವ ಧರ್ಮದ ಬೇರು-ವೃಕ್ಷವಾಗಿದ್ದಾರೆ. 12ನೇ ಶತಮಾನದ ಶಿವಶರಣರು ಅದರಲ್ಲಿನ ಹೂವು-ಹಣ್ಣು ಆಗಿದ್ದಾರೆ. ವೃಕ್ಷಕ್ಕೆ ನೀರೆರೆದರೆ ಹೂವು-ಹಣ್ಣುಗಳು ಸಿಗಲಿವೆ. ಯಾರೇನೇ ಮಾಡಿದರೂ ಧರ್ಮದ ಭದ್ರ ಬೇರನ್ನು ಅಲುಗಾಡಿಸಲು ಸಾಧ್ಯವಾಗಿಲ್ಲ ಎಂದರು.
    ಶರಣರು ವಚನಗಳ ಮೂಲಕ ವೀರಶೈವ ಧರ್ಮವನ್ನು ಸುಂದರವಾಗಿ ಹೇಳಿದ್ದಾರೆ. ಗದಗದ ರಾಜಗುರು ಗುರುಸ್ವಾಮಿ ಕಲಕೇರಿ ಅವರು ಸಂಗೀತದ ಧ್ವನಿಸುರುಳಿಗಳ ಮೂಲಕ ವೀರಶೈವ ಧರ್ಮದ ವಿರೋಧಿಗಳಿಗೆ ಉತ್ತರ ನೀಡಿದ್ದಾರೆ ಎಂದು ತಿಳಿಸಿದರು.
    ಬಸವಣ್ಣನವರು ‘ಇವನಾರವ ಎಂದೆನಿಸದೆ ಇವ ನಮ್ಮವ ಎಂದೆನ್ನಿಸಯ್ಯ’ ಎಂಬ ಸಂದೇಶ ನೀಡಿದರು. ಆದರೆ, ಕೆಲವರು ಧರ್ಮ -ಧರ್ಮದ ನಡುವೆ ಚ್ಯುತಿ ತರುತ್ತಿದ್ದಾರೆ. ಯಾರೇನೇ ಮಾಡಿದರೂ ಮೂಲತತ್ವ ಸಿದ್ಧಾಂತ ಬದಲಿಸಲಾಗದು. ಪುಸ್ತಕ ಅಥವಾ ಪುಟಗಳು ಬದಲಾಗಬಹುದು. ಆದರೆ, ಮೂಲ ಗ್ರಂಥಗಳಲ್ಲಿನ ಶಾಸ್ತ್ರೀಯ ಜ್ಞಾನದ ಬದಲಾವಣೆ ಅಥವಾ ತಿರಸ್ಕಾರ ಅಸಾಧ್ಯ ಎಂದು ಸೂಚ್ಯವಾಗಿ ಹೇಳಿದರು.
    ದಾವಣಗೆರೆಯಲ್ಲಿ ಯುಗಮಾನೋತ್ಸವ
    ದಾವಣಗೆರೆಯಲ್ಲಿ ಮುಂದಿನ ದಿನದಲ್ಲಿ ಭಕ್ತರ ಸಹಯೋಗದಲ್ಲಿ ರೇಣುಕಾಚಾರ್ಯರ ಯುಗಮಾನೋತ್ಸವ ಆಚರಿಸಲಾಗುವುದು ಎಂದು ರಂಭಾಪುರಿ ಶ್ರೀಗಳು ಪ್ರಕಟಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts