More

    ವಿಸ್ತರಣಾ ಕೇಂದ್ರಕ್ಕೇ ಅನಾರೋಗ್ಯ

    ಸುಭಾಸ ಧೂಪದಹೊಂಡ ಕಾರವಾರ

    ಕುಗ್ರಾಮಗಳ ಜನರ ಚಿಕಿತ್ಸೆಗಾಗಿ ಸರ್ಕಾರವು ಆರೋಗ್ಯ ವಿಸ್ತರಣಾ ಕೇಂದ್ರಗಳನ್ನು ತೆರೆದರೂ ವೈದ್ಯರ ಕೊರತೆಯಿಂದ ಅದು ಜಿಲ್ಲೆಯಲ್ಲಿ ಯಶಸ್ವಿಯಾಗಿಲ್ಲ.

    ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕನಿಷ್ಠ 10 ಕಿಮೀ ದೂರದಲ್ಲಿರುವ ಗ್ರಾಮಗಳಲ್ಲಿನ ಜನರಿಗೆ ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ಆರೋಗ್ಯ ವಿಸ್ತರಣಾ ಕೇಂದ್ರ ತೆರೆಯಲು ಸರ್ಕಾರ 2018ರ ಜನವರಿಯಲ್ಲಿ ಆದೇಶ ಹೊರಡಿಸಿತ್ತು. ಸರ್ಕಾರಿ ಕಟ್ಟಡಗಳಾದ ಗ್ರಾಪಂ, ಶಾಲೆ, ಸಮುದಾಯ ಭವನಗಳಲ್ಲಿ ಈ ಕೇಂದ್ರ ತೆರೆಯಬೇಕು. ಅದರಲ್ಲಿ ಒಬ್ಬ ಎಂಬಿಬಿಎಸ್ ವೈದ್ಯ, ಒಬ್ಬ ಸ್ಟಾಪ್ ನರ್ಸ್ ಹಾಗೂ ಒಬ್ಬ ಡಿ ಗ್ರುಪ್ ಸಿಬ್ಬಂದಿ ನೇಮಕ ಮಾಡಬೇಕು ಎಂದು ಆದೇಶಿಸಲಾಗಿದೆ.

    ಅದರಂತೆ ಜಿಲ್ಲೆಯ ಜೊಯಿಡಾದ 3, ಹಳಿಯಾಳದ 3, ಯಲ್ಲಾಪುರದ 2 ಹಾಗೂ ಮುಂಡಗೋಡಿನ 1 ಗ್ರಾಮ ಸೇರಿ 9 ಕಡೆಗಳಲ್ಲಿ ಆರೋಗ್ಯ ವಿಸ್ತರಣಾ ಕೇಂದ್ರ ತೆರೆಯಲಾಗಿದೆ. ಅದಕ್ಕೆ ಹೊರ ಗುತ್ತಿಗೆ ಆಧಾರದಲ್ಲಿ ಒಬ್ಬ ಸ್ಟಾಫ್ ನರ್ಸ್ ಹಾಗೂ ಒಬ್ಬ ಡಿ ಗ್ರುಪ್ ನೌಕರರನ್ನು ನಿಯೋಜಿಸಲಾಗಿದೆ. ಆದರೆ, ಮುಖ್ಯವಾಗಿ ಬೇಕಿದ್ದ ವೈದ್ಯರೇ ಸಿಗುತ್ತಿಲ್ಲ. ಇದರಿಂದಾಗಿ ಆರೋಗ್ಯ ವಿಸ್ತರಣಾ ಕೇಂದ್ರ ಯೋಜನೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಜಾರಿಗೊಂಡಿಲ್ಲ.

    ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೇ ಇಲ್ಲ: ಜಿಲ್ಲೆಯಲ್ಲಿ ಒಟ್ಟು 82 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 12 ಕೇಂದ್ರಗಳಲ್ಲಿ ವೈದ್ಯರೇ ಇಲ್ಲ. ಇನ್ನುಳಿದ 60 ಕೇಂದ್ರಗಳಲ್ಲಿ 20ಕ್ಕೂ ಹೆಚ್ಚು ಕಡೆ ಬಿಎಎಂಎಸ್ ವೈದ್ಯ ಪದ್ಧತಿ ಓದಿದ ವೈದ್ಯರಿದ್ದಾರೆ. ಅವರಿಗೆ ಅಲೋಪತಿ ವೈದ್ಯ ಪದ್ಧತಿಯ ಚಿಕಿತ್ಸೆಗೆ ಅವಕಾಶವಿಲ್ಲದ ಕಾರಣ ಸಮಸ್ಯೆಯಾಗಿದೆ.

    ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯರ ನೇಮಕಕ್ಕೆ ನಾವು ಅರ್ಜಿ ಕರೆದಿದ್ದೇವೆ. ಆದರೆ, ಅರ್ಜಿಗಳೇ ಬರುತ್ತಿಲ್ಲ. ಕೆಲವರು ಬಂದರೂ ನಾವು ಹೇಳಿದ, ಖಾಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋಗಲು ಒಪ್ಪುವುದಿಲ್ಲ. ಆಸ್ಪತ್ರೆಗಳಲ್ಲೇ ವೈದ್ಯರ ಕೊರತೆ ಇರುವಾಗ ಆರೋಗ್ಯ ವಿಸ್ತರಣಾ ಕೇಂದ್ರಗಳಿಗೆ ವೈದ್ಯರನ್ನು ನೇಮಿಸುವುದೆಲ್ಲಿಂದ? | ಡಾ.ಜಿ.ಎನ್. ಅಶೋಕ ಕುಮಾರ ಡಿಎಚ್​ಒ, ಕಾರವಾರ

    ಹೊರೆ ತಗ್ಗಿಸಲು ಯೋಜನೆ: ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿಜವಾಗಿ ಇಬ್ಬರು ವೈದ್ಯರು, ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನಿಶಿಯನ್ ಸೇರಿ ಒಟ್ಟು 14 ಹುದ್ದೆಗಳು ಬೇಕಾಗುತ್ತವೆ. ಸದ್ಯ ಪ್ರಾಆ ಕೇಂದ್ರಗಳಿಗೆ ತಲಾ ಒಬ್ಬ ವೈದ್ಯರನ್ನು ನೇಮಕ ಮಾಡುವುದೇ ಕಷ್ಟವಾಗಿದೆ. ಅಲ್ಲದೆ, ಒಟ್ಟಾರೆ ಪ್ರಾಆ ಕೇಂದ್ರಗಳ ನಿರ್ವಹಣೆ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗಲಿರುವ ಕಾರಣ ಆರೋಗ್ಯ ವಿಸ್ತರಣಾ ಕೇಂದ್ರ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts