More

    ವಿಶ್ವಕರ್ಮ ಶಕ್ತಿ ಗುರುತಿಸುವಲ್ಲಿ ಸರ್ಕಾರ ವಿಫಲ : ಸಮಾಜದ ಅಭಿವೃದ್ಧಿಗೆ ನಿರೀಕ್ಷಿತ ಅನುದಾನ ಸಿಗುತ್ತಿಲ್ಲವೆಂದು ಮಂಜುನಾಥ್ ವಿಷಾದ

    ಮೈಸೂರು : ವಿಶ್ವದ ನಿರ್ಮಾತೃಗಳಾದ ವಿಶ್ವಕರ್ಮ ಸಮುದಾಯದ ಶಕ್ತಿಯನ್ನು ಗುರುತಿಸುವಲ್ಲಿ ಆಳುವ ಸರ್ಕಾರಗಳು ವಿಫಲವಾಗಿವೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ವಿಷಾದಿಸಿದರು.


    ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹುಣಸೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಸಮಾರಂಭದಲ್ಲಿ ಮಾತನಾಡಿದರು. ವಿಶ್ವಕರ್ಮ ಸಮುದಾಯವಿಲ್ಲದೆ ಸಮಾಜವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಮಾಜದ ಯುವಪೀಳಿಗೆ ತಮ್ಮ ವಂಶಾವಳಿಯಿಂದ ಕೊಡುಗೆಯಾಗಿ ಬಂದ ಕೌಶಲತೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಇನ್ನಷ್ಟು ಹೊಸತನವನ್ನು ಜಗತ್ತಿಗೆ ಪರಿಚಯಿಸಬೇಕು.

    ವಿಶ್ವಕರ್ಮ ಸಮಾಜದ ಅಭಿವೃದ್ಧಿಗಾಗಿ ಸರ್ಕಾರ ನಿಗಮ, ಮಂಡಳಿಗಳನ್ನು ಸ್ಥಾಪಿಸಿದೆ. ಆದರೆ ನಿರೀಕ್ಷಿತ ಅನುದಾನ ಸಿಗುತ್ತಿಲ್ಲ. ಶಿಕ್ಷಣದಲ್ಲಿ ವಿಶ್ವಕರ್ಮ ಸಮಾಜ ಮುಂದಿದ್ದರೂ ಸರ್ಕಾರಿ ಉದ್ಯೋಗ ಪಡೆಯುವಲ್ಲಿ ಹಿಂದಿರುವುದು ವಿಷಾದನೀಯ ಸಂಗತಿ. ವಿಶ್ವಕರ್ಮ ಸಮಾಜ ಒಂದಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಿದೆ ಎಂದು ಕರೆ ನೀಡಿದರು.


    ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ಮಾತನಾಡಿ, ಶೋಷಿತ ಸಮಾಜಗಳನ್ನು ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಸಬಲೀಕರಣಗೊಳಿಸುವುದು ಮೀಸಲಾತಿಯ ಉದ್ದೇಶವಾಗಿದೆ. ಮೀಸಲಾತಿ ಪಡೆದ ಅನೇಕ ಜಾತಿ, ಜನಾಂಗಗಳು ಅಭಿವೃದ್ಧಿ ಪಥದತ್ತ ಸಾಗಿದ್ದು, ವಿಶ್ವಕರ್ಮ ಸಮಾಜಕ್ಕೂ ನ್ಯಾಯಯುತ ಮೀಸಲಾತಿ ದೊರಕಿಸಿಕೊಡುವ ಮೂಲಕ ಸಮಾಜವನ್ನು ಸಬಲೀಕರಣಗೊಳಿಸಬೇಕೆಂದು ಆಗ್ರಹಿಸಿದರು.


    ಸಮಾಜದ ತಾಲೂಕು ಅಧ್ಯಕ್ಷ ಕೃಷ್ಣಾಚಾರಿ, ನಗರಸಭಾ ಅಧ್ಯಕ್ಷೆ ಗೀತಾ ನಿಂಗರಾಜು, ಮುಖಂಡರಾದ ಚಂದ್ರಾಚಾರಿ, ವಸಂತಾಚಾರಿ, ವೆಂಕಟೇಶಾಚಾರ್, ನಾರಾಯಣ, ಕುಮಾರ್, ಹೊನ್ನಪ್ಪ, ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts