More

    ವೈರಲ್ ಆಗುತ್ತಿದೆ ನಿಗಮ, ಮಂಡಳಿ ಸಂಭಾವಿತರ ಪಟ್ಟಿ!

    ಕೊಳ್ಳೇಗಾಲ : ಕಾಂಗ್ರೆಸ್‌ನ ನಿಗಮ, ಮಂಡಳಿ ಪಟ್ಟಿ ಬಿಡುಗಡೆ ವಿಚಾರವಾಗಿ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ 39 ಜನರನ್ನು ಒಳಗೊಂಡ ನಿಗಮ, ಮಂಡಳಿ ಪಟ್ಟಿಯೊಂದು ವೈರಲ್ ಆಗಿದೆ.

    39 ಜನರ ಪಟ್ಟಿಯಲ್ಲಿ ಕ್ರ.ಸಂ. 23 ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್.ಜಯಣ್ಣ ಹಾಗೂ ಕ್ರ.ಸಂ 30ರಲ್ಲಿ ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿ ಬಿ.ಪುಷ್ಪಾ ಅಮರನಾಥ್ ಅವರ ಹೆಸರಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ) ತಲೆ ಬರಹವಿರುವ ಆದೇಶ ಪ್ರತಿಯಲ್ಲಿ ಈ ಪಟ್ಟಿ ಪ್ರಕಟವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
    ವಿಧಾನಸಭಾ ಚುನಾವಣೆ ನಂತರ ಮಾಜಿ ಶಾಸಕ ಎಸ್.ಜಯಣ್ಣ ಅವರಿಗೆ ನಿಗಮ, ಮಂಡಳಿ ಸ್ಥಾನ ನೀಡಬೇಕೆಂದು ಬೆಂಬಲಿಗರು ಕಾಂಗ್ರೆಸ್ ನಾಯಕರಿಗೆ ಒತ್ತಾಯಿಸಿದ್ದರು. ಅದಲ್ಲದೆ ಎಸ್.ಜಯಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರು ಹೌದು. ಚುನಾವಣೆ ಪೂರ್ವದಲ್ಲೂ ಕೊಳ್ಳೇಗಾಲದಲ್ಲಿ ನಡೆದ ಕಾಂಗ್ರೆಸ್ ಚುನಾವಣೆ ಪ್ರಚಾರದ ವೇಳೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಟಿಕೆಟ್ ವಂಚಿತ ನಾಯಕರಿಗೆ ಉತ್ತಮ ಸ್ಥಾನಮಾನ ಸಿಗುತ್ತದೆ ಎಂಬ ಭರವಸೆ ನೀಡಿದ್ದರು.

    ಇದೀಗ ಚುನಾವಣೆಯಾಗಿ ಏಳೆಂಟು ತಿಂಗಳಲಾಗಿದ್ದು. ಕ್ಷೇತ್ರದಲ್ಲಿ ಎಸ್.ಜಯಣ್ಣ ಅವರಿಗೆ ನಿಗಮ, ಮಂಡಳಿ ನೀಡಬೇಕೆಂಬ ಕೂಗಿದೆ. ಅದರಂತೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎರಡು ದಿನಗಳ ಹಿಂದೆಯಷ್ಟೆ ಮಾಧ್ಯಮಗಳಲ್ಲಿ ವಾರದೊಳಗೆ ನಿಗಮ, ಮಂಡಳಿ ಪಟ್ಟಿಯನ್ನು ಪ್ರಕಟಿಸುವ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಶನಿವಾರ ನಿಗಮ, ಮಂಡಳಿ ಪಟ್ಟಿಯೊಂದು ವೈರಲ್ ಆಗಿದೆ. ಪಟ್ಟಿಯಲ್ಲಿ ಎಸ್.ಜಯಣ್ಣ ಅವರ ಹೆಸರಿರುವುದರಿಂದ ಅವರ ಬೆಂಬಲಿಗರಿಗೆ ಖುಷಿ ನೀಡಿದೆ. ಆದರೆ, ವೈರಲ್ ಆಗಿರುವ ನಿಗಮ, ಮಂಡಳಿ ಪಟ್ಟಿ ಅಧಿಕೃತವಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಸ್ವಾಮಿ ವಿಜಯವಾಣಿಗೆ ತಿಳಿಸಿದ್ದಾರೆ.


    ಸಾಮಾಜಿಕ ಜಾಲತಾಣದಲ್ಲಿ ನಿಗಮ, ಮಂಡಳಿ ಪಟ್ಟಿ ವೈರಲ್ ಆಗಿರುವುದು ತಿಳಿದಿದೆ. ಆದರೆ, ಈ ಮಾಹಿತಿ ಅಧಿಕೃತವಲ್ಲ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಮಾಹಿತಿ ಬಂದರೆ ನಾವೇ ತಿಳಿಸುತ್ತೇವೆ.

    ಮರಿಸ್ವಾಮಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts