More

    ವಿಶ್ಲೇಷಣೆ ಆಧರಿಸಿ ಕೋವಿಡ್-19 ತಪಾಸಣೆ

    ಧಾರವಾಡ: ಜಿಲ್ಲೆಯ ಸುಮಾರು 1200 ಔಷಧ ಅಂಗಡಿಗಳಲ್ಲಿ ಔಷಧ ಖರೀದಿಸುತ್ತಿರುವ ಗ್ರಾಹಕರ ಹಾಗೂ ಕೆಪಿಎಂಇ ಕಾಯ್ದೆಯಡಿ ನೋಂದಾವಣೆಯಾಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಮಾಹಿತಿ ಸಂಗ್ರಹವಾಗುತ್ತಿದೆ. ಈ ದತ್ತಾಂಶ ವಿಶ್ಲೇಷಣೆ ಮಾಡಿ, ತೀವ್ರ ಉಸಿರಾಟದ ತೊಂದರೆ ಹಾಗೂ ಕೆಮ್ಮು, ಜ್ವರ, ನೆಗಡಿ ಲಕ್ಷಣಗಳಿರುವವರನ್ನು ಗುರುತಿಸಿ ಕೋವಿಡ್ ತಪಾಸಣೆಗೊಳಪಡಿಸುವ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದರು.

    ತಮ್ಮ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಈ ಹಿಂದಿನ ಸಭೆಗಳಲ್ಲಿ ಸೂಚಿಸಿರುವಂತೆ ಜಿಲ್ಲೆಯ ಎಲ್ಲ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್​ಗಳು ತಮ್ಮ ಗ್ರಾಹಕರ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ, ಖರೀದಿಸಿರುವ ಔಷಧಿಯ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಒದಗಿಸುತ್ತಿದ್ದಾರೆ. ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಮಾಹಿತಿ ಕ್ರೋಡೀಕರಣವಾಗುತ್ತಿದೆ. ಈ ಮಾಹಿತಿಯನ್ನು ಫಾರ್ಮಸಿ ಕಾಲೇಜ್​ಗಳ ಪ್ರಾಧ್ಯಾಪಕರು, ಸಿಬ್ಬಂದಿ ನೆರವಿನೊಂದಿಗೆ ವಿಶ್ಲೇಷಣೆ ಮಾಡಿ, ಸಾಮಾನ್ಯ ಜ್ವರ ಮತ್ತು ಸಾಮಾನ್ಯ ನೆಗಡಿ ಹೊರತುಪಡಿಸಿ ತೀವ್ರ ಉಸಿರಾಟದ ತೊಂದರೆ ಹಾಗೂ ತೀವ್ರ ಜ್ವರ, ಶೀತ, ಕೆಮ್ಮು ಇದ್ದವರ ಪಟ್ಟಿ ಮಾಡಿ ಅವರನ್ನು ಸಂರ್ಪಸಿ ಕೋವಿಡ್ ತಪಾಸಣೆಗೆ ಅವರ ಮೂಗು ಮತ್ತು ಗಂಟಲು ದ್ರವ ಸಂಗ್ರಹಿಸಬೇಕು. ಹೋಂ ಕ್ವಾರಂಟೈನ್​ಗೆ ಒಳಪಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚಿಸಿದರು.

    ಆಹಾರ ಧಾನ್ಯ ಬೇಡಿಕೆ ಖುದ್ದು ಪರಿಶೀಲನೆಗೆ ಕ್ರಮ: ಕರೊನಾ ನಿಯಂತ್ರಣದ ಲಾಕ್​ಡೌನ್ ಅವಧಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸಿದ್ಧ ಆಹಾರ ಮತ್ತು ಆಹಾರ ಧಾನ್ಯಗಳ ಬೇಡಿಕೆಯೊಂದಿಗೆ ಸಹಾಯವಾಣಿ ಕೇಂದ್ರಗಳಲ್ಲಿ ಕರೆಗಳು ದಾಖಲಾಗುತ್ತಿವೆ. ಅವುಗಳಿಗೆ ಆದ್ಯತೆಯಡಿ ಆಹಾರ ವಿತರಣೆ ಮಾಡಲಾಗುತ್ತಿದೆ. ಇನ್ನು ಮುಂದೆ ಬೇಡಿಕೆ ಬಂದ ಸ್ಥಳಗಳಿಗೆ ಖುದ್ದು ಭೇಟಿ ನೀಡಿ, ಅವರಿಗೆ ಈ ಮುಂಚೆ ಆಹಾರ ಧಾನ್ಯ ವಿತರಣೆ ಆಗದಿರುವುದು ಮತ್ತು ಅವರು ಪಡಿತರ ಚೀಟಿ ಹೊಂದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಆಹಾರ ಧಾನ್ಯಗಳ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

    ಆಹಾರ ಧಾನ್ಯದ ಸಮಸ್ಯೆ ಎದುರಿಸುತ್ತ ನೈಜ ತೊಂದರೆಯಲ್ಲಿರುವ ಜನರಿಗೆ ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳು ನೀಡುವ ನೆರವು ತಲುಪಬೇಕು. ಇದನ್ನು ಖಚಿತಪಡಿಸಿಕೊಳ್ಳಲು ಬೇಡಿಕೆ ಬಂದ ಸ್ಥಳದಲ್ಲಿ ಪೂರ್ವಭಾವಿಯಾಗಿ ಪರಿಶೀಲನೆ ನಡೆಸಿ, ಬೇಡಿಕೆ ಸಲ್ಲಿಸುವವರು ಈಗಾಗಲೇ ಸ್ವಯಂಸೇವಾ ಸಂಸ್ಥೆಗಳ ನೆರವು ಅಥವಾ ಸರ್ಕಾರದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ಅವರ ಆಧಾರ್ ಕಾರ್ಡ್ ಪಡೆದು ಆಹಾರ ಧಾನ್ಯಗಳನ್ನು ವಿತರಿಸಬೇಕು ಎಂದು ಸೂಚಿಸಿದರು.

    ಸ್ವಯಂಸೇವಾ ಸಂಸ್ಥೆಗಳಿಗೆ ಅವಕಾಶ: ಲಾಕ್​ಡೌನ್ ಅವಧಿಯಲ್ಲಿ ಸಂಕಷ್ಟಕ್ಕೀಡಾಗಿರುವ ಜನರಿಗೆ ಸರ್ಕಾರ ಸ್ಪಂದಿಸುತ್ತಿದೆ. ಸರ್ಕಾರದೊಂದಿಗೆ ಸ್ವಯಂಸೇವಾ ಸಂಸ್ಥೆಗಳ ಸಹಕಾರ ಕೂಡ ಮುಖ್ಯ. ಕಂಟೈನ್​ವೆುಂಟ್ ಪ್ರದೇಶ ಹೊರತುಪಡಿಸಿ ಉಳಿದ ಸ್ಥಳಗಳಲ್ಲಿ ಸಂಘ ಸಂಸ್ಥೆಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಆಹಾರ ಧಾನ್ಯ ವಿತರಿಸಲು ಅವಕಾಶ ನೀಡಲಾಗುವುದು. ಅಂಥ ಆಸಕ್ತ ಸಂಸ್ಥೆಗಳು ಜಿಲ್ಲಾಡಳಿತದ ಅಧಿಕೃತ ವೆಬ್​ಸೈಟ್ ಮೂಲಕ ನೋಂದಣಿ ಮಾಡಿಕೊಂಡು ಅನುಮತಿ ಪಡೆದು ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಮೂಗು ಮತ್ತು ಗಂಟಲ ದ್ರವ ಪರೀಕ್ಷೆಗೆ ಒಳಪಡುವ ಎಲ್ಲ ಸಾರ್ವಜನಿಕರ ಹೆಸರು, ಸಂಪರ್ಕ ಸಂಖ್ಯೆ, ವಿಳಾಸ, ಆಧಾರ ಸಂಖ್ಯೆ ಮತ್ತಿತರ ಮಾಹಿತಿಯನ್ನು ಆರ್​ಟಿಪಿಸಿಆರ್ ಮೊಬೈಲ್ ಆಪ್​ಗೆ ಅಳವಡಿಸಬೇಕು. ಇದಕ್ಕಾಗಿ ಅಧಿಕೃತ ವ್ಯಕ್ತಿಗಳನ್ನು ಎಲ್ಲ ಗಂಟಲು ದ್ರವ ಸಂಗ್ರಹಣಾ ಕೇಂದ್ರಗಳಲ್ಲಿ ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ ಹೇಳಿದರು.

    ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಕಿಮ್್ಸ ತಜ್ಞ ವೈದ್ಯ ಡಾ. ಲಕ್ಷ್ಮೀಕಾಂತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಸುಜಾತಾ ಹಸವೀಮಠ, ಜಿಲ್ಲಾ ಆರ್​ಸಿಎಚ್ ಅಧಿಕಾರಿ ಡಾ. ಎಸ್.ಎಂ. ಹೊನಕೇರಿ, ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ. ಶಶಿ ಪಾಟೀಲ, ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ರಾಜಶೇಖರ, ಜಿಲ್ಲಾ ಎನ್​ಐಸಿ ಅಧಿಕಾರಿ ಮೀನಾಕುಮಾರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

    ಜಿಲ್ಲಾದ್ಯಂತ ಕ್ಯಾನ್ಸರ್, ಮಧುಮೇಹ, ಗರ್ಭಿಣಿ, ನವಜಾತ ಶಿಶುಗಳಂತಹ ದುರ್ಬಲ ಗುಂಪಿನ ಆರೋಗ್ಯ ಮಾಹಿತಿಯನ್ನು ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕರ ಮೂಲಕ ಸಂಗ್ರಹಿಸಲಾಗಿದೆ. ಈಗಾಗಲೇ ಜಿಲ್ಲೆಯ 3.98 ಲಕ್ಷ ಮನೆಗಳಿಗೆ ಭೇಟಿ ನೀಡಿ ಸುಮಾರು 16 ಲಕ್ಷ ಜನರ ಮಾಹಿತಿ ಪಡೆಯಲಾಗಿದೆ.

    | ಡಾ. ತನುಜಾ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts