More

    ವಿಶಾಲ, ಸ್ವಚ್ಛ ಮನಸುಳ್ಳವನೇ ಮಹಾತ್ಮ

    ಸಾವಿರಾರು ವರ್ಷಗಳಿಂದ ಶರಣರು, ಸಂತರು ಸಣ್ಣ ಸಣ್ಣ ಮಾತುಗಳನ್ನು ಹೇಳಿದ್ದಾರೆ. ಅವು ಇಂದಿಗೂ ಮನುಷ್ಯನ ಮನಸನ್ನು ವಿಶಾಲಗೊಳಿಸುತ್ತಿವೆ. ನಮ್ಮ ಮನಸು ಇಲ್ಲೇ ಸ್ಥಿರವಾಗಿರಬಾರದು. ಆಕಾಶದವರೆಗೂ ಹೋಗುತ್ತಿರಬೇಕು.

    ಒಂದು ಪಟ ಆಕಾಶದಲ್ಲಿ ತೇಲುತ್ತಿರುತ್ತದೆ. ಅದು ತೇಲಲೂಬೇಕು. ಅದಕ್ಕೊಂದು ಬಾಲ. ಅದು ಸಣ್ಣದಿರುತ್ತದೆ. ಬಾಲ ದಪ್ಪ ಇರಬಾರದು. ದಪ್ಪ ಇದ್ದರೆ ಪಟ ಮೇಲೆ ಹಾರುವುದಿಲ್ಲ. ಪಟ ನಮ್ಮ ಶರೀರ ಇದ್ದಂತೆ, ಬಾಲ ಸಂಸಾರ ಇದ್ದಂತೆ. ನಾವು ಸಂಸಾರಕ್ಕೆ ಸೀಮಿತವಾಗದೇ ಜಗತ್ತಿಗೆ ಸೀಮಿತವಾಗಿರಬೇಕು. ಮನೆ ಹಿಡಿದುಕೊಂಡು ಕುಳಿತರೆ ಈ ವಿಶಾಲ ಜಗತ್ತನ್ನು ಅನುಭವಿಸುವುದು ಹೇಗೆ?

    ಸಂಸಾರಕ್ಕೂ ಸಮಯ ಕೊಡಬೇಕು. ಸಾಮಾಜಿಕ ಜೀವನಕ್ಕೂ ಸಮಯ ಕೊಡಬೇಕು. ನಮ್ಮ ವಿಚಾರ ವಿಶಾಲವಾಗಿರಬೇಕು ವಿನಃ ನಾಲ್ಕು ಗೋಡೆಯ ಮಧ್ಯ ಬದುಕುವುದಲ್ಲ. ಸಂಸಾರ ಬೇಕು, ಭೂಮಂಡಲ ಜೀವನವನ್ನೂ ಅನುಭವಿಸಬೇಕು. ದೇಹ ವಿಸ್ತಾರ ಆಗುವುದಿಲ್ಲ. ಆದರೆ, ಭಾವ ವಿಸ್ತಾರ ಆಗುತ್ತದೆ.

    ನಾವು ಮಹಾತ್ಮ ಎಂಬ ಶಬ್ದ ಬಳಸುತ್ತೇವೆ. ಅವರು ನಮ್ಮಂತೆ ಮನುಷ್ಯರೇ. ಅವರ ಶುದ್ಧ, ವಿಶಾಲ ಮನಸು ಅವರನ್ನು ಮಹಾತ್ಮನನ್ನಾಗಿ ಮಾಡುತ್ತದೆ.

    ಮಹಾತ್ಮನ ಮೂರು ಗುಣಗಳು: 1. ಸುಂದರವಾದ ಮನಸು. 2. ವಿಶಾಲವಾದ ಮನಸು. 3.ಸ್ವಚ್ಛ ಮನಸು. ಎಲ್ಲ ಗುಣಗಳು ಇರುವ ಮನುಷ್ಯನಿಗೆ ಮಹಾತ್ಮ ಅನ್ನುತ್ತಾರೆ. ನಾವು ನಮ್ಮ ಜಾತಿ, ನಮ್ಮ ಕುಲ, ನಮ್ಮ ಕುಟುಂಬ ಎನ್ನುತ್ತ ಅದರಲ್ಲೇ ಇರುವ ಬದಲು ಮನಸನ್ನು ವಿಶಾಲ ಮಾಡಿಕೊಂಡರೆ ಜಗತ್ತನ್ನು ಅನುಭವಿಸಬಹುದು.

    ಇದು ನಮ್ಮ ದೇವರು, ಅದು ನಿಮ್ಮ ದೇವರು ಎನ್ನುತ್ತ ನಮಗೆ ಹೇಗೆ ಬೇಕೋ ಹಾಗೆ ದೇವರ ಹೆಸರಿನಲ್ಲಿ ಆಹಾರ ಸೇವನೆ ಮಾಡುತ್ತೇವೆ. ಎಂದಾದರೂ ದೇವರು, ಪ್ರಾಣಿ ಬೇಕು ಎಂದು ಕೇಳುತ್ತಾನೆಯೇ? ಮನುಷ್ಯರೇ, ನಿಮ್ಮ ಊಟಕ್ಕಾಗಿ ದೇವರನ್ನು ಸಣ್ಣವರನ್ನಾಗಿ ಮಾಡಿದ್ದೀರಿ. ಇದು ಸರಿಯೇ?

    ಅರಿಸ್ಟಾಟಲ್ ಎಂಬ ಗ್ರೀಕ್ ದೇಶದ ನಾಗರಿಕ. ಆತ ಎಂದಿಗೂ ಗ್ರೀಕ್ ದೇಶದ ನಾಗರಿಕ ಅಂತ ಹೇಳಲಿಲ್ಲ. ಯಾವತ್ತೂ ತಾನು ವಿಶ್ವದ ನಾಗರಿಕ ಅನ್ನುತ್ತಿದ್ದ. ಎಂತಹ ವಿಶಾಲ ಮನಸು ನೋಡಿ. ಇಂತಹ ಭಾವ ಎಲ್ಲರಲ್ಲಿ ಬಂದರೆ ಜಗತ್ತು ಸುಂದರವಾಗುತ್ತದೆ.

    ಈ ಭೂಮಿ ‘ನಮ್ಮದು’ ಅಂದರೆ ಎಷ್ಟು ಸುಂದರ. ಈ ಭೂಮಿ ‘ನನ್ನದು’ ಅಂದರೆ ಎಷ್ಟು ತಾಪ. ನನ್ನದು, ನನ್ನದು ಎಂದು ಕಚೇರಿಗಳಿಗೆ ತಿರುಗುತ್ತೇವೆ. ಆದರೆ, ಭೂಮಿಗೆ ನಾವು ಮಾಲೀಕರಲ್ಲ. ನೀವು ಬೇಕಾದರೆ ಭೂಮಿಗೆ ಹೇಳಿ, ‘ನಾನು ನಿನ್ನ ಮಾಲೀಕ ಅಂತ’. ಅದು ಹೇಳುತ್ತದೆ, ‘ನಿನ್ನಂಥವರು ಬಂದಿದ್ದಾರೆ, ಹೋಗಿದ್ದಾರೆ. ನೀನು ನನ್ನ ಮಾಲೀಕನಲ್ಲ. ನನ್ನ ಸೃಷ್ಟಿಸಿದ್ದು ದೇವರು. ಅವನೇ ನನ್ನ ಮಾಲೀಕ’ ಎಂದು ಹೇಳುತ್ತದೆ. ಮನುಷ್ಯರೇ, ನಾವು ಬದುಕಲು ಬಂದಿದ್ದೇವೆ. ಭೂಮಿಯ ಮೇಲೆ ಎಲ್ಲವೂ ನನ್ನದೇ ಅಂದರೆ ಹೇಗೆ?. ಇದ್ದಷ್ಟು ದಿನ ಅನುಭವಿಸಲು ಬಂದಿದ್ದೇವೆ. ನಾವು ಈ ಭೂಮಂಡಲದ ಅತಿಥಿಗಳು ಅಷ್ಟೆ.

    ಚನ್ನ ಮಲ್ಲಿಕಾರ್ಜುನ ಹೇಳಿದರು, ‘ನಮ್ಮ ಮನಸು ಮೇಲೆ ಏರಬೇಕು. ಅದಕ್ಕೆ ಬಲ್ಲವರ ಮಾತುಗಳನ್ನು ಕೇಳಬೇಕು. ಸಂತರ ಶುದ್ಧ ಮಾತುಗಳನ್ನು ಕೇಳಬೇಕು. ದೇವಲೋಕಕ್ಕೆ ಹೋಗಲು ಒಂದೊಂದು ಮಾತು ಸಹ ಜೀವನದ ಮೆಟ್ಟಿಲು ಇದ್ದಂತೆ’.

    ಮನಸು ವಿಸ್ತರಿಸಲು ಬಲ್ಲವರ ಮಾತುಗಳನ್ನು ಕೇಳಬೇಕು.

    ಯಾವ ಭಾಷೆಯದ್ದೇ ಇರಲಿ, ಯಾವ ದೇಶದ ಮಾತುಗಳೇ ಇರಲಿ; ಒಳ್ಳೆಯ, ಶುದ್ಧ ಮಾತುಗಳನ್ನು ಕೇಳಬೇಕು. ಮನಸನ್ನು ವಿಶಾಲ ಮಾಡಿಕೊಳ್ಳಬೇಕು.

    ಒಬ್ಬ ಸಂತ ಇದ್ದ. ಅವನಿಗೆ ಮನೆ ಇರಲಿಲ್ಲ. ಅವನ ಭಕ್ತರು ಹೇಳುತ್ತಾರೆ, ‘ನಿಮಗೊಂದು ಮನೆಯನ್ನು ನಾವು ಕಟ್ಟಿಸುತ್ತೇವೆ’.

    ಸಂತ ಹೇಳುತ್ತಾನೆ, ‘ನಾನು ಅಷ್ಟು ಸಣ್ಣವನಿಲ್ಲ. ನಾನು ಹೊರಗಡೆ ಇರುತ್ತೇನೆ. ಏಕೆಂದರೆ, ನನ್ನ ಮನಸು ವಿಶಾಲ ಇದೆ. ಮನೆ ಕಟ್ಟಿದರೆ ನಾಲ್ಕು ಗೋಡೆಗಳು ನನ್ನ ಮನಸನ್ನು ತಡೆಯುತ್ತವೆ’. ನೋಡಿ, ಎಷ್ಟು ದೊಡ್ಡ ಮನಸು.

    ಮನೆ ಕಟ್ಟಬಾರದು ಅಂತ ಅಲ್ಲ. ಮನೆಗೆ ಹೋಗುವುದು ವಿಶ್ರಾಂತಿಗಾಗಿ ಅಷ್ಟೇ. ಬದುಕಲು ಹೊರಗಡೆ ಬರಬೇಕು. ಎಲ್ಲವನ್ನೂ ಅನುಭವಿಸಬೇಕು. ಸಂತರು, ಶರಣರ ಮಾತುಗಳನ್ನು ಕೇಳಿ ಕಲಿಯಬೇಕು.

    ನಿರೂಪಣೆ: ತುಕಾರಾಂ ಬ. ಜಾಧವ ಕನಕೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts