More

    ಹುಬ್ಬಳ್ಳಿ ಏರ್​ಪೋರ್ಟ್​ಗೆ ಮತ್ತೆ ಜೀವಕಳೆ

    ಕೇಶವಮೂರ್ತಿ ವಿ.ಬಿ., ಹುಬ್ಬಳ್ಳಿ

    ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮತ್ತೆ ಜೀವಕಳೆ ಬರುತ್ತಿದೆ. ಇದು 957 ಎಕರೆಯಷ್ಟು ವಿಶಾಲ ಪ್ರದೇಶ. ಕರೊನಾ ಲಾಕಡೌನ್​ದಿಂದಾಗಿ ಅಕ್ಷರಶಃ ನಿರ್ಜೀವ ತಾಣವಾಗಿತ್ತು. ಈಗ ಮತ್ತೆ ಲೋಹದ ಹಕ್ಕಿಗಳು ಹಾರಾಡತೊಡಗಿವೆ. ಪ್ರಯಾಣಿಕರು ಇಲ್ಲಿಂದ ಬಾನಂಗಳಕ್ಕೆ ನೆಗೆಯುತ್ತಿದ್ದಾರೆ.

    ಹೌದು! ಕರೊನಾ ಲಾಕ್​ಡೌನ್ ತೆರವಾದ ನಂತರ ಹಂತ ಹಂತವಾಗಿ ವಿಮಾನಗಳ ಹಾರಾಟ ಹೆಚ್ಚಳವಾಗುತ್ತಿದೆ. ಪ್ರತಿ ತಿಂಗಳು ಪ್ರಯಾಣಿಕರ ಸಂಖ್ಯೆಯೂ ಏರುತ್ತಲೇ ಇದೆ. ಸದ್ಯ ಇಲ್ಲಿಂದ ನಿತ್ಯ ಹತ್ತಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸುತ್ತಿವೆ. ಸ್ಟಾರ್ ಏರ್ ವಿಮಾನಗಳು ಬೆಂಗಳೂರು, ಹಿಂಡಾನ್, ತಿರುಪತಿಗೆ ಹೋಗಿ ಬರುತ್ತಿವೆ. ಇಂಡಿಗೊ ಸಂಸ್ಥೆ ಬೆಂಗಳೂರು, ಕಣ್ಣೂರು, ಅಹಮದಾಬಾದ್, ಚೆನ್ನೈ, ಮುಂಬೈ, ಕೊಚ್ಚಿ, ಗೋವಾಕ್ಕೆ ಸೇವೆ ಆರಂಭಿಸಿದೆ. ಇನ್ನೂ ಹಲವು ಮಹಾನಗರಗಳಿಗೆ ಸೇವೆ ಆರಂಭಿಸಲು ಕೆಲ ವಿಮಾನಯಾನ ಸಂಸ್ಥೆಗಳು ಚಿಂತನೆ ನಡೆಸಿವೆ.

    2019ರ ಡಿಸೆಂಬರ್​ನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ 42 ಸಾವಿರ ಪ್ರಯಾಣಿಕರ ಸಂಚಾರ ದಾಖಲಾಗಿತ್ತು. ಕರೊನಾ ನಂತರದಲ್ಲಿ, 2020ರ ಜುಲೈನಲ್ಲಿ ಕೇವಲ 930 ಜನ ಪ್ರಯಾಣಿಸಿದ್ದರು. ಆಗಸ್ಟ್​ನಲ್ಲಿ 2,355, ಸೆಪ್ಟೆಂಬರ್​ನಲ್ಲಿ 5,779, ಅಕ್ಟೋಬರ್​ನಲ್ಲಿ 8,892, ನವೆಂಬರ್​ನಲ್ಲಿ 13,764 ಹಾಗೂ ಡಿಸೆಂಬರ್​ನಲ್ಲಿ 17,358 ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದಕುಮಾರ ಠಾಕರೆ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಏರ್ ಇಂಡಿಯಾ ಹೊರತುಪಡಿಸಿ ಎಲ್ಲ ವಿಮಾನಗಳು ಪುನರಾರಂಭಗೊಂಡಿವೆ. ಈ ತಿಂಗಳಲ್ಲಿ 20 ಸಾವಿರ, ಫೆಬ್ರವರಿಯಲ್ಲಿ 30 ಸಾವಿರಕ್ಕೂ ಅಧಿಕ ಸಂಖ್ಯೆಯ ಜನರು ಪ್ರಯಾಣಿಸುವ ನಿರೀಕ್ಷೆ ಇದೆ. | ಪ್ರಮೋದಕುಮಾರ ಠಾಕರೆ ನಿರ್ದೇಶಕ, ಹುಬ್ಬಳ್ಳಿ ವಿಮಾನ ನಿಲ್ದಾಣ

    ಗೋವಾ, ಕೊಚ್ಚಿಗೆ ಸಂಚಾರ ಶುರು: ಹುಬ್ಬಳ್ಳಿ ನಿಲ್ದಾಣದಿಂದ ಗೋವಾ ಮತ್ತು ಕೊಚ್ಚಿಗೆ ಇಂಡಿಗೋ ಸಂಸ್ಥೆ ವಿಮಾನ ಸಂಚಾರ ಸೇವೆ ಒದಗಿಸುತ್ತಿತ್ತು. ಎರಡೂ ಸೇವೆಗಳು ಕರೊನಾ ಲಾಕ್​ಡೌನ್​ನಿಂದ ಸ್ಥಗಿತಗೊಂಡಿದ್ದವು. ಜ. 21ರಂದು ಮತ್ತೆ ಈ ಸಂಚಾರ ಶುರುವಾಗಿದೆ.

    ಎಎಐ ಶ್ಲಾಘನೆ: ಹುಬ್ಬಳ್ಳಿ ವಿಮಾನ ನಿಲ್ದಾಣ ಪ್ರಯಾಣಿಕರ ಸಂಖ್ಯೆ ಹೆಚ್ಚಳದ ಕುರಿತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಟ್ವೀಟ್ ಮೂಲಕ ಶ್ಲಾಘನೆ ವ್ಯಕ್ತಪಡಿಸಿದೆ. 2020 ಜುಲೈನಲ್ಲಿ 930 ಇದ್ದ ಪ್ರಯಾಣಿಕರ ಸಂಖ್ಯೆ ಡಿಸೆಂಬರ್​ನಲ್ಲಿ 17,358 ಆಗಿರುವುದಕ್ಕೆ ಶಹಬ್ಬಾಸ್ ಎಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts