More

    ವಿವಿ ಸಾಗರ ಹಿನ್ನೀರು ಪ್ರವಾಹ ನಿಯಂತ್ರಿಸಿ

    ಹೊಸದುರ್ಗ: ವಾಣಿವಿಲಾಸ ಸಾಗರ ಅಣೆಕಟ್ಟೆಯ ಕೋಡಿಗೆ ಕ್ರಸ್ಟ್ ಗೇಟ್ ಅಳವಡಿಸುವ ಮೂಲಕ ತಾಲೂಕಿನ ಹಿನ್ನೀರು ಪ್ರದೇಶಕ್ಕೆ ನೀರು ನುಗ್ಗಿ ಉಂಟಾಗುವ ಪ್ರವಾಹ ಪರಿಸ್ಥಿತಿ ತಡೆಯಲು ಅಧಿಕಾರಿಗಳು ಮುಂದಾಗಬೇಕು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಸೂಚನೆ ನೀಡಿದರು
    ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ವರ್ಷ ವಿ.ವಿ.ಸಾಗರದ ನೀರಿನ ಮಟ್ಟ 135 ಅಡಿ ತಲುಪಿದ ಹಿನ್ನೆಲೆಯಲ್ಲಿ ಹಿನ್ನೀರು ಪ್ರದೇಶದ ಹೊರಗಿರುವ ಸುಮಾರು 1 ಸಾವಿರ ಎಕರೆ ಕೃಷಿ ಜಮೀನು ಹಾಗೂ ಗ್ರಾಮಗಳಿಗೆ ನೀರು ನುಗ್ಗಿದ ಪರಿಣಾಮ ಹಲವಾರು ವರ್ಷಗಳಿಂದ ಬೆಳೆಸಿದ ತೆಂಗು, ಅಡಕೆ ಮತ್ತಿತರ ಬೆಳೆಗಳು ನಾಶವಾದವು. ಜನರು ಇಂದಿಗೂ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ ಎಂದು ಬೆಸರ ವ್ಯಕ್ತಪಡಿಸಿದರು.
    25 ಸಾವಿರ ಎಕರೆ ಪ್ರದೇಶದಲ್ಲಿ ನೀರು ನಿಲ್ಲುವುದರಿಂದ ಕೋಡಿಯ ಮೂಲಕ ಹೆಚ್ಚಿನ ನೀರು ಹರಿದು ಹೋಗಲು ತಡವಾಗುತ್ತದೆ. ಆದ್ದರಿಂದ ಹೆಚ್ಚಿನ ನೀರನ್ನು ಹೊರ ಬಿಡಲು ಅನುಕೂಲವಾಗುವಂತೆ ಕೋಡಿಗೆ ವೈಜ್ಞಾನಿಕವಾಗಿ ಕ್ರಸ್ಟ್ ಗೇಟ್ ಅಳವಡಿಸಬೇಕು. ಜೊತೆಗೆ ಒಳಹರಿವಿನ ಪ್ರಾಮಾಣ ಅಳೆಯಲು ಎಲ್ಲ ಹಳ್ಳಗಳಿಗೂ ಮಾಪಕ ಅಳವಡಿಸಬೇಕು ಎಂದರು.
    ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಹೊಸದುರ್ಗ ಹಾಗೂ ಹಿರಿಯೂರಿನ ರೈತರ ಸಭೆ ಕರೆದು ಈ ಕುರಿತು ಗಂಭೀರವಾಗಿ ಯೋಚಿಸಬೇಕು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಜರಿದ್ದು, ವಸ್ತು ಸ್ಥಿತಿ ಮನವರಿಕೆ ಮಾಡಿಕೊಡಲಾಗುವುದು ಎಂದರು.
    ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪಟ್ಟಣದ ಪುರದ ರಸ್ತೆಯಲ್ಲಿ ನಿರ್ಮಾಣವಾಗಿರುವ 5 ಸಮುದಾಯ ಭವನಗಳನ್ನು ಅವುಗಳ ಸಮಾಜಗಳ ಸುಪರ್ದಿಗೆ ಒಪ್ಪಿಸಬೇಕು. ಸಮುದಾಯ ಭವನಗಳು ನಿರ್ವಹಣೆಯಿಲ್ಲದೆ ಅನೈತಿಕ ಚಟುವಟಿಕೆಗಳ ತಾಣಗಳಾಗಿವೆ. ಕೂಡಲೇ ಸಮಾಜಗಳ ಮುಖಂಡರ ಸಭೆ ಕರೆದು ಅವರಿಗೆ ಭವನಗಳ ಜವಾಬ್ದಾರಿ ವಹಿಸಬೇಕು ಎಂದರು.
    ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜಾಗವನ್ನು ಹಾಸ್ಟೆಲ್ ಮತ್ತಿತರ ಕಟ್ಟಡಗಳ ನಿರ್ಮಾಣಕ್ಕಾಗಿ ಒತ್ತುವರಿ ಮಾಡಲಾಗಿದೆ. ತಹಸೀಲ್ದಾರರು ಕೂಡಲೇ ಕಾಲೇಜಿಗೆ ಸೇರಿದ 25 ಎಕರೆ ಜಾಗ ಅಳತೆ ಮಾಡಿ ವರದಿ ನೀಡಬೇಕು ಎಂದು ತಾಕೀತು ಮಾಡಿದರು.
    ಸಭೆಯಲ್ಲಿ ತಹಸೀಲ್ದಾರ್ ಕೆ.ಒ.ಪಾಲಯ್ಯ, ತಾ.ಪಂ ಇಒ ಸುನಿಲ್‌ಕುಮಾರ್, ಬಿಇಒ ಸೈಯದ್ ಮೋಸಿನ್ ಇತರರಿದ್ದರು.

    ಪಟ್ಟಣದ ಹೊರವಲಯದ ಗುಡ್ಡದ ಬಳಿ ನೂತವಾಗಿ ಶಿಕ್ಷಕರ ಭವನ ನಿರ್ಮಾಣಕ್ಕೆ ಗುರುತಿಸಿರುವ ಜಾಗದ ಕುರಿತು ಶಿಕ್ಷಕರಲ್ಲಿ ಅಪಸ್ವರವಿದೆ. ಬಿಇಒ ಕೂಡಲೇ ಶಿಕ್ಷಕರ ಸಂಘಟನೆಗಳ ಸಭೆ ಕರೆದು ಶಿಕ್ಷಕರ ಭವನ ನಿರ್ಮಾಣದ ಕುರಿತು ಅವರ ಅಭಿಪ್ರಾಯ ಪಡೆದುಕೊಳ್ಳಬೇಕು. ಜಾಗದ ಕುರಿತು ನಿರ್ಧಾರ ಸ್ಪಷ್ಟವಾಗುವವರೆಗೆ ಕೆಆರ್‌ಡಿಎಲ್ ಅಧಿಕಾರಿಗಳು ಕಾಮಗಾರಿ ಅರಂಭಿಸಬಾರದು.
    ಬಿ.ಜಿ. ಗೋವಿಂದಪ್ಪ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts