More

    250 ಕೆರೆ ತುಂಬಿಸುವ ಕುರಿತು ತನಿಖೆ ಮಾಡಿ’ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಿ; ಡಿಸಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಆದೇಶ

    ಹಾವೇರಿ: ಜಿಲ್ಲೆಯಲ್ಲಿ 9 ವಿವಿಧ ನೀರಾವರಿ ಯೋಜನೆಗಳು ಚಾಲ್ತಿಯಲ್ಲಿದ್ದು, ಯೋಜನೆ ವ್ಯಾಪ್ತಿಯ 250 ಕೆರೆಗಳಲ್ಲಿ ಎಷ್ಟು ಕೆರೆಗಳನ್ನು ಅಧಿಕಾರಿಗಳು ತುಂಬಿಸಿದ್ದಾರೆ ? ಎಂಬ ಕುರಿತು ತನಿಖೆ ಮಾಡಿ, ಒಂದು ವಾರದೊಳಗೆ ವರದಿ ಸಲ್ಲಿಸಿ. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರಿಗೆ ಸೂಚಿಸಿದರು. ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಎರಡನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಗರ ಹಾಗೂ ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆ ಹಾಗೂ ವಿದ್ಯುತ್, ಹಿಂಗಾರು ಬಿತ್ತನೆ ಸ್ಥಿಗತಿಗಳ ಕುರಿತಂತೆ ವಿಶೇಷ ಚರ್ಚೆ ನಡೆಸಿದರು. ಹಿರೇಕೆರೂರಿನ ದುರ್ಗಾದೇವಿ ಕೆರೆ ಸೇರಿದಂತೆ ಅನೇಕ ಕೆರೆಗಳಿಗೆ ನೀರು ತುಂಬಿಸಿಲ್ಲ. 250ರಲ್ಲಿ ಎಷ್ಟು ಕೆರೆಗಳಿಗೆ ನೀರು ತುಂಬಿಸಿದ್ದಾರೆ ಕೇಳಿ. ಯಾರೂ ಮಾನಿಟರ್ ಮಾಡುವುದಿಲ್ಲ. ಲಾಗ್ ಬುಕ್ ಇಟ್ಟಿಲ್ಲ. ಸಹಿ ಮಾಡಲ್ಲ. ಈ ಬಗ್ಗೆ ತನಿಖೆ ಮಾಡಿಸಿ ಎಂದು ಸಭೆಯಲ್ಲಿ ಶಾಸಕ ಯು.ಬಿ.ಬಣಕಾರ ಒತ್ತಾಯಿಸಿದರು. ಬ್ಯಾಡಗಿಯಲ್ಲಿ ಒಂದೆರೆಡು ಕೆರೆ ಮಾತ್ರ ತುಂಬಿಸಿದ್ದಾರೆ. ಒಬ್ಬ ಇಂಜಿನಿಯರ್ ಕೂಡ ಕೆರೆಗೆ ಹೋಗಲ್ಲ ಎಂದು ಶಾಸಕ ಬಸವರಾಜ ಶಿವಣ್ಣನವರ ದನಿಗೂಡಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಪಾಟೀಲ, ತುಂಗಭದ್ರಾ ನದಿ ಎರಡು ಸಲ ತುಂಬಿ ಹರಿದಿದೆ. ವರದಾ, ಧರ್ಮಾ ನದಿಗಳಲ್ಲೂ ಮಳೆ ಬಂದಾಗ ನೀರು ಹರಿದಿದೆ. ಆಗಲೂ ಯಾಕೆ ಕೆರೆಗಳಿಗೆ ನೀರು ತುಂಬಿಸಿಲ್ಲ. ಸಾವಿರಾರು ಕೋಟಿ ರೂ. ಯೋಜನೆಗಳ ಕುರಿತು ವರದಿಯಲ್ಲಿ ಶೇ.60ರಿಂದ 99ರಷ್ಟು ಕಾಮಗಾರಿ ಆಗಿದೆ ಎಂದು ಹೇಳಿದ್ದೀರಿ. ಹಾಗಿದ್ದರೆ ನೀರು ಯಾಕೆ ತುಂಬಿಸಿಲ್ಲ ಎಂದು ಕರ್ನಾಟಕ ನೀರಾವರಿ ನಿಗಮದ ಎಇಇ ಹಾಗೂ ತಂಡವನ್ನು ಪ್ರಶ್ನಿಸಿದರು. ಎಷ್ಟು ಕೆರೆ ತುಂಬಿವೆ ಎಂಬ ಕುರಿತು ಅಧಿಕಾರಿಗಳಿಗೇ ಮಾಹಿತಿ ಇಲ್ಲದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿದಿನ ಎಷ್ಟು ಗಂಟೆ ಮೋಟಾರ್ ಓಡಿದೆ, ಎಂಬಿತ್ಯಾದಿ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಿ ಎಂದು ಡಿಸಿಗೆ ಸೂಚಿಸಿದರು. ತುಂಗಾ ಮೇಲ್ದಂಡೆ ಯೋಜನೆಯಡಿ ಬಾಳಂಬೀಡ ಏತ ನೀರಾವರಿ ಯೋಜನೆಯಡಿ 162 ಕೆರೆಗಳ ಪೈಕಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಕೆರೆಗಳನ್ನು ಮೊದಲು ತುಂಬಿಸಿ ಎಂದು ಸೂಚಿಸಿದರು. ಸರ್ವಜ್ಞ ಏತ ನೀರಾವರಿ ಯೋಜನೆಯ ಕಾಮಗಾರಿ ಕೇವಲ ಶೇ.40ರಷ್ಟು ಪೂರ್ಣಗೊಂಡಿದ್ದು, ಫೆಬ್ರುವರಿಯಲ್ಲಿ ಪೂರ್ಣಗೊಳಿಸಬೇಕು. ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಲಿಖಿತ ಪತ್ರ ನೀಡುವಂತೆ ಇಂಜಿನಿಯರ್‌ಗೆ ಸೂಚಿಸಿದರು. ಮೆಡ್ಲೇರಿ ಏತ ನೀರಾವರಿ, ಬುಳ್ಳಾಪುರ-ಹಾಡೆ ಇತರ ಏಳು ಕೆರೆಗಳನ್ನು ತುಂಬಿಸುವ ಕಾಮಗಾರಿ ವಿಳಂಬವಾಗಿರುವುದರಿಂದ ನಿಗದಿತ ಕಾಲಾವಧಿಗೆ ಮುನ್ನವೇ ಈ ಯೋಜನೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸುವಂತೆ ನಿರ್ದೇಶಿಸಿದರು.
    ಸಭೆಯಲ್ಲಿ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಯು.ಬಿ.ಬಣಕಾರ, ಬಸವರಾಜ ಶಿವಣ್ಣನವರ, ಪ್ರಕಾಶ ಕೋಳಿವಾಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಆರ್.ವಿಶಾಲ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಕ್ಷಯ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ, ಇತರರು ಉಪಸ್ಥಿತರಿದ್ದರು.
    ವಿದ್ಯುತ್ ಪೂರೈಕೆ ಅವಧಿ ಮೊದಲೇ ತಿಳಿಸಿ
    ರೈತರಿಗೆ ಐದು ತಾಸಿನಿಂದ ಏಳು ತಾಸಿಗೆ ವಿದ್ಯುತ್ ಒದಗಿಸಲು ಸರ್ಕಾರ ಘೋಷಿಸಿದೆ. ಯಾವ ಅವಧಿಯಲ್ಲಿ ಸಂದರ್ಭದಲ್ಲಿ ಕೊಳವೆಬಾವಿಗೆ ವಿದ್ಯುತ್ ಪೂರೈಸಲಾಗುತ್ತದೆ ಎಂಬ ಮಾಹಿತಿಯನ್ನು ಮಾಧ್ಯಮಗಳ ಜಾಹೀರಾತು ಮೂಲಕ ಪ್ರಚಾರಪಡಿಸಿ. ರೈತರ ವಾಟ್ಸ್‌ಪ್ ಗ್ರೂಪ್‌ಗಳಿಗೆ ಮುಂಚಿತವಾಗಿ ಮಾಹಿತಿ ರವಾನಿಸಿ ಎಂದು ಹೆಸ್ಕಾಂ ಅಭಿಯಂತರರಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಅಗತ್ಯವಿರುವೆಡೆ ಹೊಸದಾಗಿ ಸಬ್ ಸ್ಟೇಷನ್‌ಗಳ ಆರಂಭ, 110 ಕೆವಿ ಘಟಕಗಳ ಉನ್ನತೀಕರಣದ ಮಾಹಿತಿಯನ್ನು ಎಲ್ಲ ಶಾಸಕರಿಗೂ ನೀಡಬೇಕು. ಹೊಸ ಸ್ಟೇಷನ್‌ಗಳ ಸ್ಥಾಪನೆಗೆ ಭೂಮಿಯ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತರಬೇಕೆಂದು ಸೂಚಿಸಿದರು.
    ಹಿಂಗಾರು ಬಿತ್ತನೆಗೆ ಸಿದ್ಧತೆ:
    ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಮಾತನಾಡಿ, ಜಿಲ್ಲೆಯಲ್ಲಿ 1.15 ಲಕ್ಷ ಹೆಕ್ಟೇರ್ ಹಿಂಗಾರು ಕ್ಷೇತ್ರವಿದ್ದು, 1 ಲಕ್ಷ ಹೆಕ್ಟೇರ್ ಬಿತ್ತನೆ ಕ್ಷೇತ್ರವಿದೆ. ಈವರೆಗೆ ಶೇ.10ರಷ್ಟು ಹಿಂಗಾರು ಬಿತ್ತನೆಯಾಗಿದೆ. ಎಲ್ಲ ಕ್ಷೇತ್ರದಲ್ಲೂ ಮಳೆಯಾಗಿಲ್ಲ. ಇಂದು ಮಳೆ ಮುಂದುವರಿದರೆ ಬಿತ್ತನೆಗೆ ಸೂಕ್ತವಾಗಲಿದೆ. ಬಿಳಿಜೋಳ, ಕಡಲೆ, ಹಲಸಂದೆ ಹಿಂಗಾರಿನ ಪ್ರಮುಖ ಬೆಳೆಯಾಗಿದ್ದು, ಬೀಜದ ಕೊರತೆ ಇಲ್ಲ ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts