More

    ವಿಧಾನ ಪರಿಷತ್ ಪ್ರವೇಶಕ್ಕೆ ಪೈಪೋಟಿ

    ಹುಬ್ಬಳ್ಳಿ: ವಿಧಾನಸಭೆಯಿಂದ ವಿಧಾನ ಪರಿಷತ್​ಗೆ 7 ಜನ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ಘೊಷಣೆಯಾಗುತ್ತಿದ್ದಂತೆ ಟಿಕೆಟ್ ಗಿಟ್ಟಿಸಲು ಧಾರವಾಡ ಜಿಲ್ಲೆಯ ಬಿಜೆಪಿ ನಾಯಕರಲ್ಲಿ ಪೈಪೋಟಿ ಕಾಣಿಸಿಕೊಂಡಿದೆ.

    ನಾಮಪತ್ರ ಸಲ್ಲಿಸಲು ಜೂ. 19 ಕೊನೆಯ ದಿನ. 15 ಅಥವಾ 16ರಂದು ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ಸೇರಿ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್​ಗೆ ಕಳುಹಿಸಲಿದೆ. ಘೊಷಣೆಯಾಗಿರುವ 7 ಸ್ಥಾನಗಳಿಗೆ ಚುನಾವಣೆ ನಡೆದರೆ ಬಿಜೆಪಿ 4 ಸ್ಥಾನಗಳನ್ನು ಗೆಲ್ಲಬಹುದಾಗಿದೆ. ಈ ನಾಲ್ಕು ಸ್ಥಾನಗಳಲ್ಲಿ ಜಿಲ್ಲೆಯ ಒಬ್ಬರಿಗೆ ಪಕ್ಷದ ವರಿಷ್ಠರು ಟಿಕೆಟ್ ದಯಪಾಲಿಸಬಹುದೆಂಬ ಲೆಕ್ಕಾಚಾರವಿದೆ.

    ಹೀಗಾಗಿ ಸ್ಥಳೀಯ ನಾಯಕರಲ್ಲಿ ಪಕ್ಷದ ಟಿಕೆಟ್​ಗಾಗಿ ಪೈಪೋಟಿ ಕಾಣಿಸಿಕೊಂಡಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಉಪಾಧ್ಯಕ್ಷ ಮಾ. ನಾಗರಾಜ, ಹುಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ, ಮಾಜಿ ಶಾಸಕರಾದ ಅಶೋಕ ಕಾಟವೆ, ಸೀಮಾ ಮಸೂತಿ, ವೀರಭದ್ರಪ್ಪ ಹಾಲಹರವಿ, ಎಸ್.ಐ. ಚಿಕ್ಕನಗೌಡ್ರ, ಮುಖಂಡ ಶಂಕರಣ್ಣ ಮುನವಳ್ಳಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇವರೆಲ್ಲ ತಮ್ಮ ನಾಯಕರು, ಸಂಘ ಪರಿವಾರದ ಪ್ರಮುಖರ ಮೂಲಕ ಟಿಕೆಟ್​ಗಾಗಿ ಲಾಬಿ ನಡೆಸಿದ್ದಾರೆ.

    ಮಹೇಶ ಟೆಂಗಿನಕಾಯಿ ಅವರಿಗೆ ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರದ ಟಿಕೆಟ್ ಕೊನೆ ಕ್ಷಣದಲ್ಲಿ ಕೈತಪ್ಪಿತ್ತು. ಬಳಿಕ ಅವರಿಗೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿ ಸಮಾಧಾನ ಪಡಿಸಲಾಗಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ ಅವರ ಆಪ್ತರು. 3 ದಶಕಗಳಿಂದ ಬಿಜೆಪಿಯಲ್ಲಿರುವ ಲಿಂಗರಾಜ ಪಾಟೀಲರಿಗೆ ಹುಡಾ ಅಧ್ಯಕ್ಷ ಸ್ಥಾನ ಬಿಟ್ಟರೆ ಅಧಿಕಾರ ಸ್ಥಾನ ಸಿಕ್ಕಿಲ್ಲ. ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್​ಗೆ ನಡೆಯುವ ಚುನಾವಣೆಯಲ್ಲೂ ಲಿಂಗರಾಜ ಪಾಟೀಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ, ಅಲ್ಲಿ ಹಾಲಿ ಸದಸ್ಯರಾದ ಎಸ್.ವಿ. ಸಂಕನೂರ ಅವರನ್ನೇ ಮುಂದುವರಿಸುವ ಸಾಧ್ಯತೆಗಳಿವೆ. ಇತ್ತೀಚೆಗೆ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪಟ್ಟಿಯಲ್ಲಿ ಕಾರ್ಯಕರ್ತರ ನೆಲೆಯಲ್ಲಿ ಲಿಂಗರಾಜ ಪಾಟೀಲ ಅವರ ಹೆಸರು ಸೂಚಿಸಲಾಗಿತ್ತಂತೆ.

    ಕೆಎಲ್​ಇ ನಿರ್ದೇಶಕರು, ಲಿಂಗಾಯಿತ ಸಮಾಜದ ಪ್ರಭಾವಿ ಮುಖಂಡರು ಆದ ಶಂಕರಣ್ಣ ಮುನವಳ್ಳಿ ಅವರಿಗೆ ಪ್ರಮುಖ ಸ್ಥಾನ, ಅಧಿಕಾರ ಸಿಕ್ಕಿಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಇಬ್ಬರಿಗೂ ಆತ್ಮೀಯರು. ಕೆಎಲ್​ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರಿಗೆ ರಾಜ್ಯಸಭೆ ಸದಸ್ಯ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಶಂಕರಣ್ಣ ಮುನವಳ್ಳಿ ಪರ ಪಕ್ಷದ ವರಿಷ್ಠರು ಒಲವು ತೋರಬಹುದು. ಮಾ. ನಾಗರಾಜ ರಾಜ್ಯಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದರು.

    ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಹುದಾದ 4 ಸ್ಥಾನಗಳಲ್ಲಿ 2 ಟಿಕೆಟ್ ಹಂಚಿಕೆಯಲ್ಲಿ ರಾಜ್ಯ ನಾಯಕರ ಶಿಫಾರಸಿಗೆ ಮನ್ನಣೆ ಸಿಗಬಹುದೆಂದು, ಇನ್ನುಳಿದ 2 ಸ್ಥಾನಗಳನ್ನು ಹೈ ಕಮಾಂಡ್ ನಿರ್ಧರಿಸಲಿದೆ ಎಂದು ಹೇಳಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ವಿಪ ಟಿಕೆಟ್ ಆಕಾಂಕ್ಷಿಗಳು ಇನ್ನು ಹಲವರಿದ್ದು, ಪಕ್ಷದ ವರಿಷ್ಠರ ಕೃಪೆ ಯಾರ ಮೇಲೆ ಎಂಬುದು ಕೆಲವೇ ದಿನಗಳಲ್ಲಿ ನಿರ್ಧಾರವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts