More

    ವಿದ್ಯೆಯಿಂದ ಮಾತ್ರ ಹುದ್ದೆ, ಗೌರವ, ಹಣ ಸಂಪಾದನೆ ಸಾಧ್ಯ: ಡಾ.ಬಿ.ಆನಂದ್

    ಮೈಸೂರು: ವಿದ್ಯೆಯಿಂದ ಮಾತ್ರ ಹುದ್ದೆ, ಗೌರವ, ಹಣ ಸಂಪಾದನೆ ಸಾಧ್ಯ. ವಿದ್ಯೆ ಇಲ್ಲದಿದ್ದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುವುದಿಲ್ಲ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಡಾ.ಬಿ.ಆನಂದ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
    ವಿನಾಯಕ ನಗರದ ಸಪ್ತಗಿರಿ ಕ್ಷೇಮಾಭಿವೃದ್ಧಿ ಸಂಘದಿಂದ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪುರಸ್ಕಾರ, ನಿವೃತ್ತಿ ಹಾಗೂ ಬಡ್ತಿ ಹೊಂದಿರುವವರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಇಂದಿನ ದಿನಗಳಲ್ಲಿ ವಿದ್ಯೆ ಬಹಳ ಮಹತ್ವವಿದ್ದು, ವಿದ್ಯೆಯಿಂದ ಮಾತ್ರ ಎತ್ತರಕ್ಕೆ ಏರಬಹುದು. ಸಾಕಷ್ಟು ವಿದ್ಯೆ ಇಲ್ಲದಿದ್ದರಿಂದ ನಮ್ಮ ತಂದೆ, ತಾಯಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದರು. ಆದರೆ ಶಿಕ್ಷಣ ಆರಂಭಗೊಂಡ ಬಳಿಕ ಉದ್ಯೋಗ, ಗೌರವ, ಹಣ ಎಲ್ಲವೂ ಗಳಿಸಲು ಸಾಧ್ಯವಾಗುತ್ತಿದೆ. ಆದ್ದರಿಂದ ತಂದೆ, ತಾಯಿಗಳ ಆಸೆ ಪೂರೈಸಲು ವಿದ್ಯಾರ್ಥಿಗಳು ವಿದ್ಯೆ ಕಲಿಯಲು ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.
    ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ದೈಹಿಕ ಶಿಕ್ಷಣ ಪ್ರಭಾರ ಅಧಿಕಾರಿ ಎಸ್.ಸಿದ್ದರಾಜು, ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕಾಗಿ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಒತ್ತು ನೀಡಿದೆ. ಹೀಗಾಗಿ ಇಂಗ್ಲಿಷ್ ಶಾಲೆಗಳ ಮಾದರಿಯಲ್ಲಿಯೇ ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ಶಿಕ್ಷಣ ದೊರೆಯುತ್ತಿದೆ. ಇದನ್ನು ಪಾಲಕರು ಹಾಗೂ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
    ಬಡತನದಲ್ಲೂ ಕೂಲಿ ಕೆಲಸ ಮಾಡಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಆರ್ಥಿಕ ಸಂಕಷ್ಟಕ್ಕೀಡಾಗಬಾರದು. ಬದಲಿಗೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಅಲ್ಲಿಯೇ ಉತ್ತಮ ವ್ಯಾಸಂಗ ಕೊಡಿಸಬೇಕು. ಮೊಬೈಲ್, ಟಿವಿ ಸೇರಿದಂತೆ ಇನ್ನಿತರ ಚಟಗಳಿಗೆ ದಾಸರಾಗಬಾರದು ಎಂದರು.
    ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಮೋಹನ್‌ದಾಸ್ ಅವರು ವಿದ್ಯಾರ್ಥಿಗಳನ್ನು ಕುರಿತು ಅವರ ವೃತ್ತಿ ಜೀವನ ಹಾಗೂ ವಿದ್ಯಾಭ್ಯಾಸದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
    ಬ್ಯಾಂಕ್‌ನ ನಿವೃತ್ತ ಅಧಿಕಾರಿ ಸಿ.ಗಿರಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾ ಧ್ಯಕ್ಷ ಎನ್.ರಾಜಕುಮಾರ್, ಅಧ್ಯಕ್ಷ ಆರ್.ರಾಜೇಶ್, ಕಾರ್ಯದರ್ಶಿ ಎಸ್. ರಾಜಪ್ಪ, ಖಜಾಂಚಿ ಪಿ. ನಿಂಗರಾಜು, ತಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಜಿ. ಪದ್ಮರಾಮಲಿಂಗು, ಮೈಸೂರು ಜಿಲ್ಲೆಯ ಅರವಟ್ಟಿಗೆ ಕೊಪ್ಪಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನಾಗಮ್ಮ, ಗುರುಶಾಂತು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts