More

    ವಿದ್ಯುತ್ ದರ ಪರಿಷ್ಕರಣೆಗೆ ವಿರೋಧ

    ಧಾರವಾಡ: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್​ಸಿ)ದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿದ್ಯುಚ್ಛಕ್ತಿ ದರ ಪಟ್ಟಿ ನಿಗದಿ ಕುರಿತು ಸೋಮವಾರ ಕರೆಯಲಾಗಿದ್ದ ಸಾರ್ವಜನಿಕ ಆಕ್ಷೇಪಣೆ ಅರ್ಜಿಗಳ ವಿಚಾರಣೆ ಸಭೆಯಲ್ಲಿ ದರ ಏರಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ಧಾರವಾಡ, ಉತ್ತರ ಕನ್ನಡ, ಬೆಳಗಾವಿ, ಗದಗ, ಹಾವೇರಿ ಜಿಲ್ಲೆಗಳ ಜನರು ದರ ಏರಿಕೆ ಪ್ರಸ್ತಾಪವನ್ನು ಸಾರಾಸಗಟಾಗಿ ವಿರೋಧಿಸಿದರು.

    ಶಿರಸಿಯ ಉತ್ತರ ಕನ್ನಡ ಜಿಲ್ಲಾ ವಾಣಿಜ್ಯೋದ್ಯಮ ಹಾಗೂ ಕೃಷಿ ಸಂಸ್ಥೆಯ ಅಧ್ಯಕ್ಷ ಜಿ.ಜಿ. ಹೆಗಡೆ ಕಡೇಕೋಡಿ ಮಾತನಾಡಿ, 2020- 21ನೇ ಸಾಲಿನ ಆರ್ಥಿಕ ಕೊರತೆ ತುಂಬಿಸಿಕೊಳ್ಳಲು ಹೆಸ್ಕಾಂ ಸಲ್ಲಿಸಿರುವ ಅರ್ಜಿಯನ್ನು ಆಯೋಗ ತಿರಸ್ಕರಿಸಬೇಕು. ಕಂಪನಿ ನೀಡಿರುವ ಆಯವ್ಯಯ ಹಲವು ದೋಷಗಳಿಂದ ಕೂಡಿರುವುದು ಲೆಕ್ಕಪರಿಶೋಧನೆಯಲ್ಲಿ ಬೆಳಕಿಗೆ ಬಂದಿದೆ. ಡಿಸ್​ಕನೆಕ್ಷನ್​ನಿಂದ 2960.93 ಲಕ್ಷ ರೂ. ಬರಬೇಕು. ಸಿಬ್ಬಂದಿಯ ಕಾರ್ಯಕ್ಷಮತೆ ಕೊರತೆಯಿಂದ ಹಾನಿಯಾಗಿದ್ದು, ಗ್ರಾಹಕರ ಹೆಗಲಿಗೆ ಹೊರೆ ಹಾಕುವ ಬದಲು ಸಿಬ್ಬಂದಿಯಿಂದ ವಸೂಲಿ ಮಾಡಬೇಕು. ನೀರಾವರಿ ಪಂಪ್​ಸೆಟ್, ಬಳಕೆ ಪ್ರಮಾಣ ನಿಖರವಾಗಿಲ್ಲ. ಐ.ಪಿ. ಸೆಟ್​ಗಳಿಗೆ ಪ್ರತ್ಯೇಕ ಫೀಡರ್​ಗಳಿಲ್ಲ. ಸರ್ಕಾರಿ ಶಾಲೆಗಳ ವಿದ್ಯುತ್ ವ್ಯವಸ್ಥೆಯನ್ನು ಎಲ್​ಟಿ2 (ಎ) ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಎಲ್​ಟಿ2 (ಬಿ) ಎಂದು ಪ್ರತ್ಯೇಕಿಸುತ್ತಿರುವುದು ತಪು್ಪ. ಗಂಗಾ ಕಲ್ಯಾಣ ಯೋಜನೆ ಹೆಸ್ಕಾಂ ಕಲ್ಯಾಣವಾಗಿದೆ. ಕಂಪನಿಯು ಗುಣಮಟ್ಟದ ವಿದ್ಯುತ್ ನೀಡುವಲ್ಲಿ ವಿಫಲವಾಗಿದೆ. ಹಾಗಾಗಿ ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಬಾರದು ಎಂದರು.

    ಕುಮಟಾದ ಅರವಿಂದ ಪೈ ಮಾತನಾಡಿ, ಆಯೋಗ ಗ್ರಾಹಕರ ಹಿತರಕ್ಷಣೆಗಾಗಿ ಇದ್ದರೂ ಶೋಷಣೆಯಾಗುತ್ತಿದೆ. ಕೋವಿಡ್ ಕಾರಣದಿಂದ ರೈಲು, ಸಾರಿಗೆ ವ್ಯವಸ್ಥೆ ಸ್ಥಗಿತವಾಗಿ ಪುನರಾರಂಭವಾದರೂ ಟಿಕೆಟ್ ದರ ಏರಿಸಿಲ್ಲ. ಆಯೋಗದಿಂದ ರಿಯಾಯಿತಿ ಕೊಡಬೇಕಾದ ಪರಿಸ್ಥಿತಿ ಇದೆ. ಹೀಗಿರುವಾಗ ದರ ಪರಿಷ್ಕರಣೆ ಪ್ರಸ್ತಾವನೆ ಸಲ್ಲಿಸುವುದೂ ಬೇಡವಾಗಿತ್ತು ಎಂದರು. ಆಯೋಗವು ಹೆಸ್ಕಾಂ ಸಲ್ಲಿಸಿರುವ ಪ್ರಸ್ತಾವನೆಯನ್ನು ತಿರಸ್ಕರಿಸುವ ಮೂಲಕ, ವಿದ್ಯುತ್ ದರ ಇನ್ನೂ ಹೆಚ್ಚಾಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.

    ರೈತ ಸಂಘ ಹಾಗೂ ಹಸಿರು ಸೇನೆಯ ಅಥಣಿ ತಾಲೂಕಾಧ್ಯಕ್ಷ ರಾಜಕುಮಾರ ಜಂಬಗಿ ಮಾತನಾಡಿ, ರೈತರ ಪಂಪ್​ಸೆಟ್​ಗಳಿಗೆ 7 ಗಂಟೆ ವಿದ್ಯುತ್ ಪೂರೈಸಬೇಕು ಎಂಬ ಆದೇಶವಿದ್ದರೂ 2-3 ಗಂಟೆ ಪೂರೈಸಲಾಗುತ್ತಿದೆ. ಸುಟ್ಟ ವಿದ್ಯುತ್ ಪರಿವರ್ತಕಗಳ ಬದಲಾವಣೆಯಲ್ಲಿ ಭ್ರಷ್ಟಾಚಾರ ಮಾಡಲಾಗುತ್ತಿದೆ. ದುರಸ್ತಿ ಮಾಡಿದರೂ ಒಂದೆರಡು ದಿನಗಳಲ್ಲಿ ಮತ್ತೆ ಸುಟ್ಟು ಹೋಗುತ್ತಿವೆ. ರೈತರಿಗೆ ವಿದ್ಯುತ್ ಸಂಪರ್ಕ ನೀಡಲು 2- 3 ವರ್ಷ ಸತಾಯಿಸಿದ ಪ್ರಕರಣಗಳಿವೆ. ವಿದ್ಯುತ್ ತಂತಿ ಹರಿದು ರೈತರ ಬೆಳೆ ನಷ್ಟವಾದರೆ ಪರಿಹಾರ ನೀಡಲಾಗುತ್ತಿಲ್ಲ. 2019- 2020ರಲ್ಲಿ ಮಹಾಪೂರ ಬಂದಾಗ ವಿದ್ಯುತ್ ಕಂಬ ಮತ್ತು ಟಿಸಿಗಳು ಮುಳುಗಡೆಯಾಗಿದ್ದವು. ಅವುಗಳ ಬದಲಾವಣೆಗೆ ಅಧಿಕಾರಿಗಳು ಕೋಟ್ಯಂತರ ರೂ. ಖೊಟ್ಟಿ ಬಿಲ್ ತೆಗೆದಿದ್ದಾರೆ. ಈ ಬಗ್ಗೆ ಆಯೋಗದಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

    ವಿವಿಧ ವಿದ್ಯುತ್ ಬಳಕೆದಾರ ಸಂಘಗಳ ಸದಸ್ಯರು ಮತ್ತು ವಿದ್ಯುತ್ ಬಳಕೆದಾರರಾದ ಎ.ಎಸ್. ಕುಲಕರ್ಣಿ, ಆರ್.ಎಫ್. ದೊಡ್ಡಮನಿ, ಉದಯಕುಮಾರ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಂದೀಪ, ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ವಿವೇಕ ಮೋರೆ, ಗದಗದ ವೀರಣ್ಣ ಮಜ್ಜಿಗಿ, ಹುಬ್ಬಳ್ಳಿಯ ಗೋಪಾಲ, ನಾಯಕನ ಹುಲಿಕಟ್ಟಿಯ ಮಂಜುನಾಥ ಗೌರಿ, ಬೆಳಗಾವಿಯ ಪ್ರಭಾಕರ, ಜಯಶ್ರೀ, ಚನ್ನಪ್ಪ ಪೂಜಾರಿ, ಹಾವೇರಿಯ ಆರ್.ಕೆ. ದೇಶಪಾಂಡೆ ಸೇರಿ 26 ಜನರು ಆಕ್ಷೇಪಣೆಗಳನ್ನು ಸಲ್ಲಿಸಿದರು.

    ಆಯೋಗದ ಅಧ್ಯಕ್ಷ ಶಂಭು ದಯಾಳ್ ಮೀನಾ ಮಾತನಾಡಿ, ಪ್ರತಿ ಯೂನಿಟ್​ಗೆ 0.73 ಪೈಸೆ ಹೆಚ್ಚಳದ ಪ್ರಸ್ತಾವವಿದ್ದು, ಪರಿಶೀಲಿಸುವುದಾಗಿ ತಿಳಿಸಿದರು.

    ಆಯೋಗದ ಸದಸ್ಯರಾದ ಎಂ.ಡಿ. ರವಿ, ಎಚ್.ಎಂ. ಮಂಜುನಾಥ ಹಾಜರಿದ್ದರು. ಹೆಸ್ಕಾಂ ಎಂ.ಡಿ. ಎಂ. ಮುನಿರಾಜು, ತಾಂತ್ರಿಕ ನಿರ್ದೇಶಕ ಎ.ಎಚ್. ಕಾಂಬ್ಳೆ, ಹಣಕಾಸು ನಿರ್ದೇಶಕ ಸುರೇಶ ತೇರದಾಳ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts