More

    ವಿದ್ಯಾರ್ಥಿ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

    ಬೆಳಗಾವಿ: ನಗರದ ಗೋಗಟೆ ಕಾಲೇಜಿನಲ್ಲಿ ಬುಧವಾರ ನಡೆದ ಕಾಲೇಜು ಹಬ್ಬದಲ್ಲಿ ಕನ್ನಡ ಧ್ವಜ ಹಿಡಿದು ಕುಣಿದ ವಿದ್ಯಾರ್ಥಿ ಮೇಲೆ ಸಹಪಾಠಿಗಳು ಹಾಗೂ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಆರ್‌ಪಿಡಿ ವೃತ್ತದಲ್ಲಿ ವಾಹನ ಸಂಚಾರ ತಡೆದು ಪ್ರತಿಭಟಿಸಿದರು.

    ಮೂರು ತಾಸಿಗೂ ಹೆಚ್ಚು ಸಮಯ ವೃತ್ತದಲ್ಲಿ ಧರಣಿ ಕುಳಿತ ಪ್ರತಿಭಟನಾಕಾರರು ಗೋಗಟೆ ಕಾಲೇಜು, ರಾಜ್ಯ ಸರ್ಕಾರ, ಪೊಲೀಸರು, ಸ್ಥಳೀಯ ರಾಜಕಾರಣಿಗಳು ಹಾಗೂ ಎಂಇಎಸ್ ವಿರುದ್ಧ ಘೋಷಣೆ ಮೊಳಗಿಸಿದರು. ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಗೋವಾ, ಖಾನಾಪುರ ಮಾರ್ಗದ ವಾಹನಗಳನ್ನು ತಡೆದರು. ಇದರಿಂದ ರಾಣಿ ಚನ್ನಮ್ಮ ವೃತ್ತ, ಬಸವೇಶ್ವರ ವೃತ್ತದಿಂದಲೇ ವಾಹನ ಮಾರ್ಗ ಬದಲಿಸಲಾಯಿತು. ಹಲವು ವಾಹನಗಳು ಆರ್.ಪಿ.ಡಿ ವೃತ್ತದ ಸುತ್ತ ಸಾಲಾಗಿ ನಿಲ್ಲಬೇಕಾಯಿತು. ಧ್ವಜ ಹಿಡಿದು ಕುಣಿದ ವಿದ್ಯಾರ್ಥಿಗೆ ನ್ಯಾಯ ಕೊಡಿಸಬೇಕಾದ ಪೊಲೀಸರೇ ಅವನನ್ನು ಠಾಣೆಗೆ ಕರೆಯಿಸಿ ಹೊಡೆದು, ಬೂಟುಗಾಲಿನಿಂದ ಒದ್ದಿದ್ದಾರೆ. ಕನ್ನಡ ಧ್ವಜಕ್ಕೂ ಅವಮಾನಕರ ಪದ ಬಳಸಿ ಬೈದಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಯೇ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾನೆ. ವಿದ್ಯಾರ್ಥಿಯನ್ನು ಠಾಣೆಗೆ ಕರೆಯಿಸಿ ಹೆದರಿಸಿದ ಸಿಸಿಟಿವಿ ತುಣುಕು ಪರಿಶೀಲಿಸಬೇಕು. ಕೂಡಲೇ ಆ ಪೊಲೀಸ್ ಅಧಿಕಾರಿ ಮೇಲೆ ಕ್ರಮ ಜರುಗಿಸಬೇಕು ಎಂದು ಮುಖಂಡರು ಆಗ್ರಹಿಸಿದರು.

    ಕನ್ನಡ ತಾಯಿ ಭುವನೇಶ್ವರಿಯ ಮಕ್ಕಳಿಗೆ ಕರ್ನಾಟಕದಲ್ಲಿಯೇ ರಕ್ಷಣೆ ಇಲ್ಲದಂತಾಗಿದೆ. ಕಾಲೇಜಿನಲ್ಲಿ ಕನ್ನಡ ಧ್ವಜ ಹಿಡಿದು ಕುಣಿಯುವುದರಲ್ಲಿ ತಪ್ಪೇನಿದೆ? ಈ ನಾಡಿನ ಧ್ವಜವನ್ನು ಎಲ್ಲ ಕಾಲೇಜಿನಲ್ಲಿ, ಎಲ್ಲಿ ಬೇಕಾದರೂ ಹಾರಿಸುತ್ತೇವೆ. ಅದನ್ನು ಸಹಿಸದ ಮರಾಠಿ ಹುಡುಗರ ಮೇಲೆ ಕ್ರಮ ಕೈಗೊಳ್ಳಬೇಕು. ಹಲ್ಲೆಕೋರರನ್ನು ಕಾಲೇಜಿನಿಂದ ಹೊರಹಾಕಬೇಕು. ಅವರಿಗೆ ಕರ್ನಾಟಕದಲ್ಲಿ ಶಿಕ್ಷಣ ಪಡೆಯಲು ಅವಕಾಶ ನೀಡಬಾರದು. ಹುಡುಗರು ಅಪ್ರಾಪ್ತರಾಗಿದ್ದರೆ, ಕಾನೂನು ಸಂಘರ್ಷಕ್ಕೆ ಒಳಪಟ್ಟವರು ಎಂದು ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
    ಕರವೇ ನಾರಾಯಣಗೌಡ ಬಣದ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಸುರೇಶ ಗವನ್ನವರ, ಸುಧೀರ ರೋಖಡೆ, ಜಿಲ್ಲಾ ಘಟಕದ ಅಧ್ಯಕ್ಷ ಈಶ್ವರಗೌಡ ಪಾಟೀಲ, ಉಪಾಧ್ಯಕ್ಷ ರಾಜು ಯರಗಾಣಿ ಇತರರಿದ್ದರು.

    ವಿಚಾರಣೆಗೆ ಸಂಜಯ ರಾವುತ್ ಗೈರು

    ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯ ಹಾಗೂ ಶಿವಸೇನೆ ರಾಜ್ಯ ವಕ್ತಾರ ಸಂಜಯ ರಾವುತ್ ಸೇರಿ ನಾಲ್ವರ ಮೇಲಿನ ವಿಚಾರಣೆಯನ್ನು ಜಿಲ್ಲಾ ನಾಲ್ಕನೆ ಜೆಎಂಎಫ್ ನ್ಯಾಯಾಲಯ 2023ರ ಫೆ.7ಕ್ಕೆ ಮುಂದೂಡಿದೆ. ಬೆಳಗಾವಿ ಭಾಗ್ಯ ನಗರದ ರಾಮನಾಥ ಮಂಗಲ ಕಾರ್ಯಾಲಯದಲ್ಲಿ 2018 ಮಾರ್ಚ್ 30ರಂದು ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಸಂಜಯ ರಾವುತ್ ಕನ್ನಡಿಗರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಟಿಳಕವಾಡಿ ಠಾಣೆ ಪೊಲೀಸರು ಸಂಜಯ ರಾವುತ್, ಕಿರಣ್ ಠಾಕೂರ್, ಪ್ರಕಾಶ ಬಿಳಗೋಜಿ, ರಾಮನಾಥ ಮಂಗಲ ಕಾರ್ಯಾಲಯದ ಮಾಲೀಕ ಸುರೇಂದ್ರ ನಾಯಿಕ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಿಸಿದ್ದರು. 2022 ಡಿ.1ರಂದು ವಿಚಾರಣೆಗೆ ಹಾಜರಾಗುವಂತೆ ನಾಲ್ವರಿಗೂ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿತ್ತು. ಆರೋಪಿತರ ಪರ ವಕಾಲತು ವಹಿಸಿದ ವಕೀಲರು ವೈಯಕ್ತಿಕ ಕಾರಣದಿಂದ ನಮ್ಮ ಕಕ್ಷಿದಾರರಿಗೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ವಿಚಾರಣೆಗೆ ಹಾಜರಾಗಲು ಮತ್ತೆ ಕಾಲಾವಕಾಶ ಕೊಡಬೇಕು ಎಂದು ಗುರುವಾರ ಅರ್ಜಿ ಸಲ್ಲಿಸಿದರು. ಅದಕ್ಕೆ ನ್ಯಾಯಾಧೀಶರು ಸಮ್ಮತಿ ನೀಡಿ ಮುಂದಿನ ವಿಚಾರಣೆ ದಿನಾಂಕ ನಿಗದಿಗೊಳಿಸಿ ಆದೇಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts