More

    ವಿದ್ಯಾರ್ಥಿಗಳ ಸಮವಸ್ತ್ರಕ್ಕಾಗಿ ರೈತ ಸಂಘ, ಆಮ್ ಆದ್ಮಿಯಿಂದ ಭಿಕ್ಷಾಟನೆ; ಶೂ-ಸಾಕ್ಸ್ ವಿತರಿಸದಿದ್ದಕ್ಕೆ ಆಕ್ರೋಶ

    ಸಾಗರ: ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಹಾಗೂ ಪೂರ್ಣ ಪ್ರಮಾಣದಲ್ಲಿ ಸಮವಸ್ತ್ರ ಕೊಡದಿರುವುದನ್ನು ಖಂಡಿಸಿ ತಾಲೂಕು ರೈತ ಸಂಘ(ಡಾ. ಎಚ್.ಗಣಪತಿಯಪ್ಪ ಬಣ) ಗುರುವಾರ ಭಿಕ್ಷಾಟನೆ ಮಾಡಿ ಪ್ರತಿಭಟನೆ ನಡೆಸಿತು. ಈ ಹೋರಾಟಕ್ಕೆ ಆಮ್ ಆದ್ಮಿ ಪಕ್ಷ ಸಾಥ್ ನೀಡಿತು.
    ಗಣಪತಿ ದೇವಸ್ಥಾನದಿಂದ ಹೊರಟ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರ ಬಳಿ ತೆರಳಿ, ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ. ಶೈಕ್ಷಣಿಕ ಚಟುವಟಿಕೆಗೆ ಮೂಲ ಸೌಲಭ್ಯ ಒದಗಿಸಲು ಹಣದ ನೆರವು ನೀಡಿ ಎಂದು ಭಿಕ್ಷೆ ಬೇಡಿ ಹಣ ಸಂಗ್ರಹಿಸಿತು. ನಂತರ ಬಿಇಒ ಕಚೇರಿ ಎದುರು ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿತು.
    ಕಳೆದ ಮೂರು ವರ್ಷಗಳಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಶೂ, ಸಾಕ್ಸ್ ವಿತರಿಸಿಲ್ಲ. ಶಾಲೆ ಆರಂಭವಾಗಿ ಅರ್ಧ ವರ್ಷ ಕಳೆದರೂ ಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ಸಮವಸ್ತ್ರ ಕೊಟ್ಟಿಲ್ಲ. ಸರ್ಕಾರ ಆರ್ಥಿಕ ಸಂಕಷ್ಟದಲ್ಲಿರುವುದನ್ನು ಮನಗಂಡ ರೈತ ಸಂಘವು ಭಿಕ್ಷೆ ಎತ್ತಿ ಹಣ ಸಂಗ್ರಹಿಸಿದೆ ಎಂದು ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ ಲೇವಡಿ ಮಾಡಿದರು.
    ಒಂದು ವಾರದಲ್ಲಿ ಮಕ್ಕಳಿಗೆ ಶೂ, ಸಾಕ್ಸ್, ಸಮವಸ್ತ್ರ ಕೊಡದಿದ್ದರೆ ಭಿಕ್ಷೆ ಬೇಡಿದ ಹಣದಲ್ಲಿ ರಾಜ್ಯದ ಎಲ್ಲ ಸಚಿವರಿಗೆ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಮವಸ್ತ್ರ ಖರೀದಿಸಿ ಪೋಸ್ಟ್ ಮಾಡಲಾಗುತ್ತದೆ. ರೈತ ಸಂಘಟನೆಗಳು ಜನರ ಸಮಸ್ಯೆ ತೆಗೆದುಕೊಂಡು ಸಾಗರದ ಸರ್ಕಾರಿ ಕಚೇರಿ ಬಳಿಗೆ ತೆರಳಿದರೆ ಗೌರವ ಕೊಡುತ್ತಿಲ್ಲ. ಸತಾಯಿಸುವುದು, ಹಾರಿಕೆ ಉತ್ತರ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಕಚೇರಿಗಳ ಎದುರು ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
    ಮಾತಿನ ಚಕಮಕಿ: ಸಂಘಟನೆಗಳು ಸಂಗ್ರಹಿಸಿದ 3,210 ರೂ.ಗಳನ್ನು ಉಪವಿಭಾಗಾಧಿಕಾರಿಗಳಿಗೆ ನೀಡಲು ಮುಂದಾದಾಗ, ಅಧಿಕಾರಿಗಳು ನಾವು ಈ ಹಣವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದರು. ಈ ಸಂದರ್ಭದಲ್ಲಿ ಸಂಘಟನೆ ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ಉಪವಿಭಾಗಾಧಿಕಾರಿಗಳು ಸರ್ಕಾರದ ಖಾತೆಯ ನಂಬರ್ ನೀಡಿ ಅದಕ್ಕೆ ಹಣ ಜಮಾ ಮಾಡುವಂತೆ ಸೂಚಿಸಿದಾಗ ಪ್ರತಿಭಟನಕಾರರು ಸಮ್ಮತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts