More

    ವಿದ್ಯಾರ್ಥಿಗಳಿಗೆ ಮೊದಲ ದಿನ ಸಿಹಿಯೂಟ, ಸಿಇಒ, ಇಒ, ಬಿಎಇಒಗಳೊಂದಿಗೆ ಸಾಮೂಹಿಕ ಭೋಜನ, ಮಕ್ಕಳಲ್ಲಿ ಇಮ್ಮಡಿಸಿದ ಸಂಭ್ರಮ

    ಬೆಂಗಳೂರು ಗ್ರಾಮಾಂತರ: ಒಂದೂವರೆ ವರ್ಷದಿಂದ ಶಿಕ್ಷಣದ ಜತೆಗೆ ಮಕ್ಕಳ ಬಿಸಿಯೂಟ ಕಸಿದಿದ್ದ ಕರೊನಾ ದೂರವಾಗಿದೆ. ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ ಆರಂಭವಾಗುವ ಜತೆಗೆ ಬಿಸಿಯೂಟ ಸವಿಯುವ ಭಾಗ್ಯ ಮರುಕಳಿಸಿದೆ. ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಗುರುವಾರದಿಂದ ಬಿಸಿಯೂಟ ಆರಂಭವಾಗಿದ್ದು, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಹಾಗೂ ಹೊಸಕೋಟೆಯ ಸರ್ಕಾರಿ ಶಾಲೆಗಳಲ್ಲಿ ವಾತಾವರಣ ಕಂಡುಬಂತು.

    ಕಳೆದ ಎರಡೂವರೆ ತಿಂಗಳಿಂದೀಚೆಗೆ 6ರಿಂದ 10ನೇ ತರಗತಿಗಳು ಪುನರಾರಂಭಗೊಂಡಿವೆ. ಏತನ್ಮಧ್ಯೆ ಮಕ್ಕಳಿಗೆ ಬಿಸಿಯೂಟ ಮುಂದುವರಿಸಬೇಕೆ ಬೇಡವೇ ಎಂಬ ಜಿಜ್ಞಾಸೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿತ್ತು. ಕಡೆಗೂ ಹಸಿರು ನಿಶಾನೆ ದೊರೆತಿದೆ.

    ಸಿಹಿ ಔತಣ: ಮೊದಲ ದಿನ ಬಿಸಿಯೂಟಕ್ಕೆ ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನ್ನ ಸಾಂಬಾರು, ಪಲ್ಯ, ಪಾಯಸ, ಮೈಸೂರು ಪಾಕು ಬಡಿಸುವ ಮೂಲಕ ಮಕ್ಕಳ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾದರು. ಹೊಸಕೋಟೆಯಲ್ಲಿ ಇಒ ಶ್ರೀನಾಥ್‌ಗೌಡ ಮಕ್ಕಳೊಂದಿಗೆ ಭೋಜನ ಸವಿದರು. ಅದೇ ರೀತಿ ಜಿಲ್ಲಾಮಟ್ಟದ ಹಲವು ಅಧಿಕಾರಿಗಳು ವಿವಿಧ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಆಹಾರ ಗುಣಮಟ್ಟ ಪರೀಕ್ಷೆ ನಡೆಸುವ ಜತೆಗೆ ಮಕ್ಕಳೊಂದಿಗೆ ಭೋಜನ ಸವಿದರು. ವಾರಕ್ಕೂ ಮೊದಲೆ ಬಿಸಿಯೂಟಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಇಲಾಖೆ, ಶಾಲೆಗಳಿಗೆ ಅಗತ್ಯವಿರುವ ದಾಸ್ತಾನು ಪೂರೈಸಿ, ಎಲ್ಲಿಯೂ ಸಮಸ್ಯೆ ಆಗದಂತೆ ಎಚ್ಚರವಹಿಸಿತ್ತು.

    ಹಾಜರಾತಿ ಹೆಚ್ಚಳ: ಬಹುತೇಕ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆ ಇತ್ತು. ಇದುವರೆಗೆ ಶೇ.85 ಮಕ್ಕಳ ದಾಖಲಾತಿ ಕಂಡುಬಂದಿತ್ತು. ಬಿಸಿಯೂಟ ಯೋಜನೆ ಜಾರಿಯಾದ ಬೆನ್ನಲ್ಲೇ ಗುರುವಾರ ಜಿಲ್ಲೆಯಲ್ಲಿ ಶೇ.95 ಮಕ್ಕಳ ಹಾಜರಾತಿ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿಇಒ ಭೇಟಿ: ಜಿಪಂ ಸಿಇಒ ಎಂ.ಆರ್.ರವಿಕುಮಾರ್ ಖುದ್ದು ಹಲವು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಆಹಾರದ ಗುಣಮಟ್ಟ, ಅಡುಗೆ ಮನೆಯ ನಿರ್ವಹಣೆ, ಸಿಬ್ಬಂದಿ ನಿಯೋಜನೆ ಸೇರಿ ಪರಿಕರಗಳ ದಾಸ್ತಾನುಗಳ ಬಗ್ಗೆ ಪರಿಶೀಲಿಸಿದರು. ಕರೊನಾ ನಿಯಮ ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಕ್ಕಳೊಂದಿಗೆ ಸಮಾಲೋಚನೆ ನಡೆಸಿ ಬಿಸಿಯೂಟ, ಪಾಠ ಪ್ರವಚನ ಮೂಲಸೌಕರ್ಯ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ಪಡೆದರು. ಮಕ್ಕಳಿಗೆ ಊಟ ಬಡಿಸುವ ಮೂಲಕ ಗಮಸೆಳೆದರು.

    ಕರೊನಾ ಮಹಾಮಾರಿ ಒಂದೂವರೆ ವರ್ಷದಿಂದ ಮಕ್ಕಳ ಭವಿಷ್ಯದ ಮೇಲೆ ಕತ್ತಲು ಮೂಡಿಸಿತ್ತು. ಬಿಸಿಯೂಟದ ಮೂಲಕ ಮಕ್ಕಳು ಮತ್ತೆ ಕತ್ತಲಿನಿಂದ ಬೆಳಕಿನ ಕಡೆಗೆ ಬಂದಂತಾಗಿದೆ. ಮಕ್ಕಳು ಸಂಭ್ರಮದಿಂದ ಬಿಸಿಯೂಟ ಸವಿದ ದೃಶ್ಯ ಸಂತಸ ತಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಆಹಾರದ ಗುಣಮಟ್ಟ ಹಾಗೂ ಶುಚಿತ್ವ ಕಾಪಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
    ಎಂ.ಆರ್.ರವಿಕುಮಾರ್, ಸಿಇಒ

    ನಿಜಕ್ಕೂ ಇದು ಹಬ್ಬದ ವಾತಾವರಣ. ಇತ್ತೀಚಿಗಷ್ಟೆ ವಿಜಯದಶಮಿ ಮುಗಿದಿದೆ. ದೀಪಾವಳಿ ಮುಂದಿದೆ. ಇಂಥ ಸುಸಂದರ್ಭದಲ್ಲಿ ಬಿಸಿಯೂಟ ಮತ್ತೆ ಆರಂಭವಾಗಿರುವುದು ಅತೀವ ಸಂತಸ ತಂದಿದೆ, ಮಕ್ಕಳು ಸಂಭ್ರಮದಿಂದ ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಹಾಜರಾತಿ ಸಂಖ್ಯೆಯಲ್ಲೂ ಹೆಚ್ಚಳ ಕಂಡಿದೆ.
    ಕನ್ನಯ್ಯ, ಬಿಇಒ ಹೊಸಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts