More

    ವಿದೇಶಿಗರ ಸೆರೆವಾಸಕ್ಕೆ ವ್ಯವಸ್ಥೆ

    ಕಾರವಾರ: ವೀಸಾ ಪೂರ್ಣವಾದ ವಿದೇಶಿ ಪ್ರವಾಸಿಗರನ್ನು ಪ್ರತ್ಯೇಕವಾಗಿ ಬಂಧನದಲ್ಲಿಡಲು ಡಿಟೆನ್ಶನ್ ಸೆಂಟರ್ ತೆರೆಯಲಾಗಿದೆ ಎಂದು ಡಿಜಿ ಐಜಿಪಿ ಪ್ರವೀಣ ಸೂದ್ ಹೇಳಿದರು. ನಗರದ ಎಸ್​ಪಿ ಕಚೇರಿಯಲ್ಲಿ ಸೋಮವಾರ ಸಭೆ ನಡೆಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ವೀಸಾ ಪೂರ್ಣವಾದವರನ್ನು ಗುರುತಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಿದ್ದೆವು. ಅವರು ಜಾಮೀನು ಪಡೆಯುವಾಗ ಪ್ರಕರಣದ ತನಿಖೆ ಪೂರ್ಣವಾಗುವವರೆಗೂ ದೇಶ ಬಿಟ್ಟು ತೆರಳಬಾರದು ಎಂದು ಷರತ್ತು ವಿಧಿಸಲಾಗುತ್ತಿತ್ತು. ಇದು ವಿದೇಶಿಗರಿಗೆ ದೇಶದಲ್ಲಿ ಉಳಿಯಲು ಅನುಕೂಲವಾಗುತ್ತಿತ್ತು. ಈ ಕಾನೂನಿನ ಗೊಂದಲ ಬಗೆಹರಿಸುವ ಸಲುವಾಗಿ ಬೆಂಗಳೂರಿನಲ್ಲಿ ಡಿಟೆನ್ಶನ್ ಸೆಂಟರ್ ತೆರೆಯಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಅಂಥವರನ್ನು ಗುರುತಿಸಿ ವಿಶೇಷ ಬಂಧನ ಕೇಂದ್ರಕ್ಕೆ ತೆರಳುವ ವ್ಯವಸ್ಥೆ ಮಾಡಲಾಗುವುದು ಎಂದರು.

    500 ಕ್ವಾರ್ಟರ್ಸ್: ಜಿಲ್ಲೆಯ ಪೊಲೀಸ್ ಇಲಾಖೆಯ ಸಮಸ್ಯೆಗಳ ಬಗ್ಗೆ ಅರಿತಿದ್ದೇನೆ. ಗೃಹ-2020 ಯೋಜನೆಯಲ್ಲಿ ಜಿಲ್ಲೆಯಲ್ಲಿ 219 ಮನೆ ನಿರ್ವಿುಸಲಾಗಿದೆ. ಗೃಹ-2025 ಯೋಜನೆಯಡಿ ಜಿಲ್ಲೆಯ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳಿಗೆ ಕನಿಷ್ಠ 500 ವಸತಿಗೃಹಗಳನ್ನು ನಿರ್ವಿುಸಿಕೊಡಲಾಗುವುದು ಎಂದರು. ಸಿವಿಲ್ ಪೊಲೀಸ್ ವಿಭಾಗದಲ್ಲಿ ಏಪ್ರಿಲ್ ವೇಳೆಗೆ ಶೇ. 100ರಷ್ಟು ಹುದ್ದೆಗಳನ್ನು ತುಂಬಲಾಗುವುದು. ಸಶಸ್ತ್ರ ಮೀಸಲು ಪಡೆಯಲ್ಲೂ ಖಾಲಿ ಹುದ್ದೆ ತುಂಬಲು ವ್ಯವಸ್ಥೆ ಮಾಡಲಾಗುವುದು ಎಂದರು. ಕರಾವಳಿ ಭಾಗದ ಜನ ಪೊಲೀಸ್ ಇಲಾಖೆಗೆ ಸೇರಲು ಹಿಂಜರಿಯುತ್ತಿದ್ದಾರೆ. ಇದರಿಂದ ಇಲ್ಲಿಗೆ ನೇಮಕವಾದ ಉತ್ತರ ಕರ್ನಾಟಕ ಭಾಗದವರು ಕೆಲ ವರ್ಷಗಳ ನಂತರ ಸ್ವಂತ ಜಿಲ್ಲೆಗೆ ತೆರಳುತ್ತಾರೆ. ಇದರಿಂದ ಇಲ್ಲಿನ ಹುದ್ದೆಗಳು ಖಾಲಿಯಾಗೇ ಇರುತ್ತವೆ. ಈ ಸಮಸ್ಯೆ ಬಗೆಹರಿಸಲು ಜಿಲ್ಲೆಯ ಯುವಜನರನ್ನು ಪೊಲೀಸ್ ಇಲಾಖೆ ಸೇರಿಸಲು ಪ್ರೇರೇಪಿಸಲಾಗುವುದು ಎಂದರು. ಅರ್ಹತೆ ಇದ್ದ ಎಲ್ಲ ಎಎಸ್​ಐಗಳಿಗೆ ಪಿಎಸ್​ಐ ಬಡ್ತಿ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರಾಯ್, ಎಸ್​ಪಿ ಶಿವಪ್ರಕಾಶ ದೇವರಾಜು ಇದ್ದರು.

    ಜಿಲ್ಲೆಗೆ ಶೀಘ್ರ ಕೆಎಸ್​ಐಎಸ್​ಎಫ್: ರಾಜ್ಯದಲ್ಲಿ ಪ್ರಾರಂಭವಾದ ಕೈಗಾರಿಕೆ ಭದ್ರತಾ ದಳದ ಘಟಕವನ್ನು ಶೀಘ್ರದಲ್ಲಿ ಜಿಲ್ಲೆಯಲ್ಲೂ ಪ್ರಾರಂಭಿಸಲು ಕ್ರಮ ವಹಿಸಲಾಗುವುದು ಎಂದ ಡಿಜಿ ಪ್ರವೀಣ ಸೂದ್, ಕರಾವಳಿ ಭದ್ರತೆಯ ಬಗ್ಗೆ ಕೈಗೊಂಡ ಕ್ರಮಗಳು ಬಗ್ಗೆ ಪರಿಶೀಲಿಸಲಾಗಿದೆ. ಭಯೋತ್ಪಾದನೆಯಂಥ ವಿಷಯಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಗಳ ಜತೆಗೆ ಸಂಪರ್ಕ ಸಾಧಿಸಿಕೊಂಡು ನಾವು ತನಿಖೆ ನಡೆಸುತ್ತಿದ್ದೇವೆ. ಸೆಟಲೈಟ್ ಕಾಲ್​ಗಳ ಮಾಹಿತಿಯನ್ನು ನಿರಂತರವಾಗಿ ಪಡೆದು ಅದರ ಆಧಾರದ ಮೇಲೆ ತನಿಖೆ ನಡೆದಿದೆ ಎಂದರು. ರಸ್ತೆ ಅಪಘಾತ ತಡೆಯಲು ಅಪಘಾತ ವಲಯ ಗುರುತಿಸುವುದು. ಅಪಾಯಕಾರಿ ತಿರುವುಗಳನ್ನು ಸರಿದೂಗಿಸಲು ಸಂಬಂಧಪಟ್ಟ ಇಲಾಖೆ ಜತೆ ಸಂವಹನ ನಡೆಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

    ಕರೊನಾ ಸಮಯದಲ್ಲಿ ದಿಟ್ಟತನದಿಂದ ಕಾರ್ಯನಿರ್ವಹಿಸಿದ ಜಿಲ್ಲೆಯ ಎಲ್ಲ ಪೊಲೀಸರಿಗೆ ಅಭಿನಂದನೆಗಳು. ಅಧಿಕಾರಿ, ನೌಕರರ ಕ್ಷೇಮದ ಬಗ್ಗೆ ಕ್ರಮ ವಹಿಸಿದ ಎಸ್​ಪಿ, ಎಎಸ್​ಪಿ ಕಾರ್ಯ ಶ್ಲಾಘನೀಯ. ಮಾದಕ ದ್ರವ್ಯ ಜಾಲ ಭೇದಿಸುವಲ್ಲಿ, ಅಪರಾಧ ತಡೆಯುವಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸಿದೆ.
    | ಪ್ರವೀಣ ಸೂದ್ ಡಿಜಿ ಐಜಿಪಿ, ಕರ್ನಾಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts