More

    ವಿದೇಶಕ್ಕೆ ಹೋಗಿ ಬಂದವರಲ್ಲಿಲ್ಲ ಸೋಂಕು

    ಲಕ್ಷೆ್ಮೕಶ್ವರ: ಕರೊನಾ ವೈರಸ್​ನ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿದೇಶ ಪ್ರವಾಸ ಮುಗಿಸಿ ಪಟ್ಟಣಕ್ಕೆ ವಾಪಸಾದ 17 ಜನರ ತಂಡವನ್ನು ಬುಧವಾರ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಿದ್ದು, ಎಲ್ಲರೂ ಆರೋಗ್ಯದಿಂದಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

    ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಪ್ರೇಮಕ್ಕ ಬಿಂಕದಕಟ್ಟಿ ನೇತೃತ್ವದಲ್ಲಿ ಪಟ್ಟಣದಿಂದ ಮಾ. 2ರಂದು 19 ಜನರ ತಂಡ ಮಲೇಷಿಯಾ, ಸಿಂಗಾಪುರ ಮತ್ತು ಇಂಡೊನೇಷಿಯಾಕ್ಕೆ ಪ್ರಯಾಣ ಬೆಳೆಸಿದ್ದರು. 8 ದಿನಗಳ ಕಾಲ ಪ್ರವಾಸ ಕೈಗೊಂಡ ತಂಡ ಮಾ. 10 ರಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಎಲ್ಲರೂ ಚಿಕಿತ್ಸೆಗೊಳಗಾಗಿದ್ದರೂ ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಕರೊನಾ ವೈರಸ್ ಇರುವ ಬಗ್ಗೆ ದೃಢಪಟ್ಟಿದ್ದರಿಂದ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಮುಂಜಾಗ್ರತೆ ಕ್ರಮವಾಗಿ ಗದಗ ಜಿಲ್ಲಾಡಳಿತ ಇಲ್ಲಿನ ತಾಲೂಕಾಡಳಿತಕ್ಕೆ ವಿದೇಶದಿಂದ ಬಂದ ಪ್ರತಿಯೊಬ್ಬರನ್ನೂ ಮತ್ತೊಮ್ಮೆ ಪರೀಕ್ಷಿಸಿ ಅವರ ಆರೋಗ್ಯದ ಮೇಲೆ ನಿಗಾ ಇಡಬೇಕು ಎಂಬ ಸೂಚನೆ ನೀಡಿತ್ತು.

    ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಗಿರೀಶ ಮರಡ್ಡಿ ಅವರು ಮಂಗಳವಾರ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಸಿದ್ಧಪಡಿಸಿ ಬುಧವಾರ ಬೆಳಗ್ಗೆ 9ಗಂಟೆಗೆ ಯಲವಿಗಿ ನಿಲ್ದಾಣದಿಂದ ಆಸ್ಪತ್ರೆಯ ಆಂಬುಲೆನ್ಸ್ ಮೂಲಕ ಅವರನ್ನು ಕರೆ ತಂದು ಎಲ್ಲರಿಗೂ ಸಾಮಾನ್ಯ ಪರೀಕ್ಷೆಗೊಳಪಡಿಸಿ ಯಾವುದೇ ಸೋಂಕು ಮತ್ತು ಅನಾರೋಗ್ಯದ ಲಕ್ಷಣ ಕಂಡು ಬಾರದ ಹಿನ್ನೆಲೆಯಲ್ಲಿ ಎಲ್ಲರನ್ನೂ ಮನೆಗೆ ಕಳುಹಿಸಿದ್ದಾರೆ.

    ಮುಳಗುಂದದ ನಾಲ್ವರ ಪೈಕಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಹಾಗೂ ಲಕ್ಷೆ್ಮೕಶ್ವರದ 11 ಜನ ಮಹಿಳೆಯರು ಮತ್ತು ನಾಲ್ವರು ಪುರುಷರು ಸೇರಿ 19 ಜನರು ವಿದೇಶಕ್ಕೆ ತೆರಳಿದ್ದರು. ಅವರಲ್ಲಿ ಇಬ್ಬರು ಮಹಿಳೆಯರು ಬೆಂಗಳೂರಿನ ಅವರ ಸಂಬಂಧಿಕರ ಮನೆಯಲ್ಲಿಯೇ ಉಳಿದಿದ್ದು ಆರೋಗ್ಯದಿಂದಿದ್ದಾರೆ ಎಂಬುದನ್ನು ವೈದ್ಯರು ಸ್ಪಷ್ಟಪಡಿಸಿದ್ದಾರೆ.

    ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ವಿದೇಶದಲ್ಲಿ ನಮ್ಮನ್ನು ಎಲ್ಲಿಯೂ ಪರೀಕ್ಷೆಗೊಳಪಡಿಸಿಲ್ಲ. ಬೆಂಗಳೂರಿಗೆ ವಾಪಸ್ ಬಂದಾಗ ವಿಮಾನ ನಿಲ್ದಾಣದಲ್ಲಿ ಮತ್ತು ಲಕ್ಷೆ್ಮೕಶ್ವರ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲರನ್ನೂ ಪರೀಕ್ಷಿಸಲಾಗಿದೆ. ನಮ್ಮ ತಂಡದ ಎಲ್ಲರೂ ಆರೋಗ್ಯದಿಂದ ಇದ್ದೇವೆ. ಈ ಬಗ್ಗೆ ವೈದ್ಯರೂ ದೃಢಪಡಿಸಿದ್ದಾರೆ.

    | ಪ್ರೇಮಕ್ಕ ಬಿಂಕದಕಟ್ಟಿ, ವಿದೇಶದಿಂದ ವಾಪಸ್ ಬಂದವರು

    ವಿದೇಶ ಪ್ರವಾಸದಿಂದ ವಾಪಸ್ ಬಂದ 17 ಜನರನ್ನು ಪರೀಕ್ಷಿಸಲಾಗಿದೆ. ಎಲ್ಲರೂ ಆರೋಗ್ಯದಿಂದ ಇದ್ದು, ಜಿಲ್ಲಾ ವೈದ್ಯಾಧಿಕಾರಿ ಸತೀಶ ಬಸರಿಗಿಡದ ಅವರ ನಿರ್ದೇಶನದ ಹಿನ್ನ್ನೆಲೆಯಲ್ಲಿ 14 ದಿನಗಳ ಕಾಲ ನಿತ್ಯ ಎಲ್ಲರ ಮನೆಗೆ ತೆರಳಿ ಅವರ ಆರೋಗ್ಯ ಪರೀಕ್ಷಿಸಿ ವರದಿ ಸಲ್ಲಿಸಲಾಗುವುದು. ಈ ಬಗೆಗೆ ಸಾರ್ವಜನಿಕರಲ್ಲಿ ಯಾವುದೇ ಆತಂಕ ಬೇಡ ಎಲ್ಲರೂ ಮುಂಜಾಗ್ರತೆ ಕ್ರಮವಾಗಿ ಶುದ್ಧವಾದ ನೀರು, ಆಹಾರ, ಶುಚಿತ್ವದ ಕಡೆ ಗಮನ ಹರಿಸಬೇಕು.

    | ಡಾ. ಗಿರೀಶ ಮರಡ್ಡಿ, ಆಡಳಿತ ವೈದ್ಯಾಧಿಕಾರಿ, ಸರ್ಕಾರಿ ಆಸ್ಪತ್ರೆ, ಲಕ್ಷೆ್ಮೕಶ್ವರ

    ಕರೊನಾ ಜಾಗೃತಿ ಮೂಡಿಸಲು ಪಾದಯಾತ್ರೆ

    ಲಕ್ಷೆ್ಮೕಶ್ವರ: ಕರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬುಧವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿ ರೋಗ ಕುರಿತು ಮಾಹಿತಿ ಮತ್ತು ಮುಂಜಾಗ್ರತೆ ಕ್ರಮಗಳ ತಿಳಿವಳಿಕೆ ನೀಡಲಾಯಿತು.

    ಪುರಸಭೆಯ 23 ವಾರ್ಡ್​ಗಳ ಸದಸ್ಯರು, ಆರೋಗ್ಯ ಹಾಗೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು. ಮುಂದಿನ ದಿನಗಳಲ್ಲಿ ಪ್ರತಿಯೊಂದು ವಾರ್ಡ್​ಗಳ ಪ್ರತಿ ಮನೆಗೆ ತೆರಳಿ ಅರಿವು ಮೂಡಿಸುವುದಾಗಿ ಸದಸ್ಯರು ತಿಳಿಸಿದರು. ಶನಿವಾರ ನಡೆಯಲಿರುವ ರಂಗಪಂಚಮಿ ನಿಮಿತ್ತ ಹೋಳಿ ಹಬ್ಬದಲ್ಲಿ ಚೀನಾ ದೇಶದ ಬಣ್ಣಗಳನ್ನು ಬಳಸದಂತೆ ಸಲಹೆ ನೀಡಲಾಯಿತು. ಹಾಗೆಯೇ ರಾಸಾಯನಿಕ ಬಣ್ಣಗಳನ್ನು ಬಳಸುವುದು ಬೇಡ. ಯಾರಿಗಾದರೂ ಆರೋಗ್ಯದ ಸಮಸ್ಯೆ ಉಂಟಾದಲ್ಲಿ ಕೂಡಲೆ ಸಮೀಪದ ಆರೋಗ್ಯ ಕೇಂದ್ರಕ್ಕೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಪುರಸಭೆ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ, ಪರಿಸರ ಇಂಜಿನಿಯರ್ ಆನಂದ ಬದಿ, ಮಂಜುನಾಥ ಮುದಗಲ್, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts