More

    ವಿಜೃಂಭಣೆಯ ದೀಪಾವಳಿ ಮಹಾರಥೋತ್ಸವ


    ಲಕ್ಷಾಂತರ ಭಕ್ತರು ಭಾಗಿ * ಮಾದಪ್ಪನಿಗೆ ವಿಶೇಷ ಪೂಜೆ


    ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಬುಧವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ದೀಪಾವಳಿಯ ಮಹಾ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

    ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ 9.21ಕ್ಕೆ ಚಾಲನೆ ನೀಡಲಾಯಿತು.
    ಮಹಾ ರಥೋತ್ಸವದ ಅಂಗವಾಗಿ ದೇಗುಲವನ್ನು ವಿವಿಧ ಪುಷ್ಪ ಹಾಗೂ ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಜಾತ್ರೆಯ ಕೇಂದ್ರ ಬಿಂದುವಾದ ತೇರನ್ನು ವಿವಿಧ ಪುಷ್ಪಗಳು, ಬಣ್ಣಬಣ್ಣದ ಬಟ್ಟೆಗಳಿಂದ ಸಿಂಗಾರಿಸಲಾಗಿತ್ತು. ಬೆಳಗ್ಗೆ 9ಗಂಟೆಯಲ್ಲಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಮಲೆ ಮಾದಪ್ಪನಿಗೆ ಬೇಡಗಂಪಣ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು.

    ದೇವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಪೂಜೆ ಸಲ್ಲಿಸಿ, ಸತ್ತಿಗೆ, ಸೂರಿಪಾನಿ, ನಂದಿಧ್ವಜಕಂಬ ಹಾಗೂ ವಾದ್ಯಮೇಳದೊಂದಿಗೆ ಗರ್ಭಗುಡಿಯ ಸುತ್ತ 3 ಬಾರಿ ಪ್ರದಕ್ಷಿಣೆ ಹಾಕಲಾಯಿತು. ಬಳಿಕ ದೇಗುಲದ ಮುಂಭಾಗದಲ್ಲಿದ್ದ ತೇರಿನ ಬಳಿ ತೆರಳಿ ಸ್ವಾಮಿಯ ಮೂರ್ತಿಯನ್ನು ತೇರಿನಲ್ಲಿ ಕುಳ್ಳರಿಸಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು. ಈ ವೇಳೆ ಹಾಲರವಿ ಮಜ್ಜನವನ್ನು ತಂದಿದ್ದ, ಹಸಿರು ಉಡುಗೆಯನ್ನು ತೊಟ್ಟಿದ್ದ ಬೇಡಗಂಪಣ ಸಮುದಾಯದ 101 ಹೆಣ್ಣು ಮಕ್ಕಳು ಬೆಲ್ಲದ ಆರತಿ ಬೆಳಗಿಸಿದರು. ಈ ಸಂದರ್ಭದಲ್ಲಿ ಭಕ್ತರು ಮೊಳಗಿಸಿದ ಜಯಘೋಷ ಮುಗಿಲು ಮುಟ್ಟಿತು.

    ರಥೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಸತ್ತಿಗೆ, ಸೂರಿಪಾನಿ, ಛತ್ರಿ ಚಾಮರ, ನಂದಿಧ್ವಜ ಹಾಗೂ ಮಂಗಳವಾದ್ಯದೊಂದಿಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸುಮಾರು 15 ನಿಮಿಷ ತೇರನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸಲಾಯಿತು. ವೀರಗಾಸೆಯ ನೃತ್ಯ ಪ್ರದರ್ಶನ, ಮ.ಬೆಟ್ಟದ ಸಾಕಾನೆ ಉಮಾ ಭಾಗಿಯಾಗಿ ಎಲ್ಲರ ಗಮನ ಸೆಳೆಯಿತು. ಈ ವೇಳೆ ಭಕ್ತರು ತೇರಿಗೆ ಹಣ್ಣು ಧವನ ಎಸೆದರು.

    ಗುರು ಬ್ರಹ್ಮೋತ್ಸವ: ರಥೋತ್ಸವ ಮುಗಿದ ಬಳಿಕ ದೇವರ ಮೂರ್ತಿಯನ್ನು ಟ್ರಾೃಕ್ಟರ್‌ನಲ್ಲಿ ಕೂರಿಸಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯದಲ್ಲಿ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಈ ಮೂಲಕ ಗುರು ಬ್ರಹ್ಮೋತ್ಸವವೂ ಸಾಂಪ್ರದಾಯಿಕವಾಗಿ ನೆರವೇರಿತು. ಬಳಿಕ ದೇಗುಲದ ಒಳಾಂಗಣದಲ್ಲಿ ಬೇಡಗಂಪಣ ಅರ್ಚಕರು ಅನ್ನಬ್ರಹ್ಮೋತ್ಸವವನ್ನು ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದರು.

    ಹರಸಾಹಸಪಟ್ಟ ಪೊಲೀಸರು: ರಥೋತ್ಸವದ ವೇಳೆ ಭಕ್ತರು ತೇರನ್ನು ಎಳೆಯಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದರು. ಈ ಸಂದರ್ಭದಲ್ಲಿ ಎಎಸ್ಪಿ ಸುಂದರ್‌ರಾಜ್ ಹಾಗೂ ಡಿವೈಎಸ್ಪಿ ನಾಗರಾಜು ನೇತೃತ್ವದಲ್ಲಿ ಪೊಲೀಸರು ಭಕ್ತರನ್ನು ನಿಯಂತ್ರಿಸಲು ಹರಸಾಹಸಪಟ್ಟರು.

    ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಸ್.ಕಾತ್ಯಾಯಿನಿ ದೇವಿ, ಉಪ ಕಾರ್ಯದರ್ಶಿ ಬಸವರಾಜು, ಲೆಕ್ಕಾಧೀಕ್ಷಕ ಪ್ರವೀಣ್ ಪಟೇಲ್, ಬೇಡಗಂಪಣ ಅರ್ಚಕ ವೃಂದ, ಪ್ರಾಧಿಕಾರದ ನೌಕರರು ಪಾಲ್ಗೊಂಡಿದ್ದರು.

    ಕ್ಷಾಂತರ ಭಕ್ತರು ಭಾಗಿ: ಕೋವಿಡ್‌ನಿಂದಾಗಿ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಪಾಲ್ಗೊಳ್ಳಲು ಅವಕಾಶ ಇರಲಿಲ್ಲ. ಇದೀಗ ದೀಪಾವಳಿ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿದ್ದು, ಮಹಾ ರಥೋತ್ಸವವು ವಿಜೃಂಭಣೆಯಿಂದ ಜರುಗಿದೆ. ಭಕ್ತರಿಗೆ ಪ್ರಾಧಿಕಾರದ ಅಡಳಿತ ಅಗತ್ಯ ಮೂಲಸೌಕರ್ಯ ಕಲ್ಪಿಸಿದೆ ಎಂದು ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸುದ್ದಿಗಾರರಿಗೆ ತಿಳಿಸಿದರು.

    ಸೂರ್ಯ ಗ್ರಹಣದ ವೇಳೆ ಮೌಢ್ಯತೆಯ ಮೊರೆ ಹೋಗದೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಜಾತ್ರಾ ಮಹೋತ್ಸವವು ಸಂಪನ್ನಗೊಂಡಿದೆ. ಬೇಡಗಂಪಣ ಅರ್ಚಕ ವೃಂದ ಧಾರ್ಮಿಕ ಕಾರ್ಯಗಳಿಗೆ ಯಾವುದೇ ಚ್ಯುತಿ ಬಾರದಂತೆ ಪೂಜಾ ಕೈಂಕರ್ಯ ನೆರವೇರಿಸಿದೆ ಎಂದರು.


    ದೀಪಾವಳಿ ಜಾತ್ರೆಯನ್ನು ಸಂಪ್ರದಾಯದಂತೆ ವಿಜೃಂಭಣೆಯಿಂದ ನೆರವೇರಿಸಲಾಗಿದ್ದು, ಸುಮಾರು 6 ಲಕ್ಷ ಜನರು ಪಾಲ್ಗೊಂಡಿದ್ದರು. ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಿ, ಕಿಂಚಿತ್ತೂ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. 2.5 ಲಕ್ಷ ಲಾಡು ಮಾರಾಟವಾಗಿದ್ದು, 2 ಸಾವಿರ ಭಕ್ತರು ಚಿನ್ನದ ತೇರಿನ ಉತ್ಸವ ಹಾಗೂ ವಿವಿಧ ಉತ್ಸವಗಳಲ್ಲಿ ಭಾಗಿಯಾಗಿದ್ದಾರೆ.
    ಎಸ್.ಕಾತ್ಯಾಯಿನಿದೇವಿ, ಕಾರ್ಯದರ್ಶಿ, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಮ.ಬೆಟ್ಟ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts