More

    ವಿಜೃಂಭಣೆಯಿಂದ ದಸರಾ ಆಚರಿಸಲು ಸಿದ್ಧತೆ

    ಶ್ರೀರಂಗಪಟ್ಟಣ: ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ಪಾರಂಪರಿಕ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗುವುದು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.

    ಪಟ್ಟಣದ ಶ್ರೀರಂಗನಾಥ ಕಲ್ಯಾಣ ಮಂಟಪದಲ್ಲಿ ಸೋಮವಾರ ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಡಿವೈಎಸ್ಪಿ ಸಂದೇಶ್ ಕುಮಾರ್, ತಾಲೂಕು ಆಡಳಿತ ಅಧಿಕಾರಿಗಳು ಹಾಗೂ ಕ್ಷೇತ್ರದ ಸಾರ್ವಜನಿಕರೊಂದಿಗೆ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಕಳೆದ 2 ವರ್ಷಗಳಿಂದ ಕರೊನಾ ಸೇರಿದಂತೆ ಕೆಲ ಕರಾಳತೆಯ ಕಾರಣದಿಂದ ದಸರಾವನ್ನು ಸರಳ ಹಾಗೂ ಸಂಪ್ರದಾಯಿಕವಾಗಿಆಚರಿಸಲಾಗಿತ್ತು. ಈ ಬಾರಿ ಸರ್ಕಾರ ಬಿಡುಗಡೆ ಮಾಡುವ ಅನುದಾನದ ಮೇಲೆ ಎಷ್ಟು ದಿನ ಹಾಗೂ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ಕೈಗೊಳ್ಳಲಾಗುವುದು. ಶ್ರೀರಂಗಪಟ್ಟಣ ದಸರಾ ಉತ್ಸವಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಂದ ಚಾಲನೆ ಕೊಡಿಸಲು ಚಿಂತಿಸಿದ್ದು, ಅವರ ಆರೋಗ್ಯ ವಿಚಾರಿಸಿ ಅನುಮತಿ ಪಡೆದು ಬಳಿಕ ತೀರ್ಮಾನಿಸಲಾಗುವುದು ಎಂದರು.
    ದಸರೆಯಲ್ಲಿ ಜಂಬೂಸವಾರಿ ಹೊರಲು ಆಗಮಿಸುವ ಆನೆಗಳಿಗೆ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಪ್ರತೀತಿಯಂತೆ ಪೂಜೆ ನೆರವೇರಿಸಿ ಬನ್ನಿಮಂಟಪಕ್ಕೆ ಕರೆತರಲಾಗುವುದು. ಬನ್ನಿಮಂಟಪ, ಶ್ರೀರಂಗಪಟ್ಟಣ ಪ್ರವೇಶ ದ್ವಾರ ಸೇರಿದಂತೆ ಸುತ್ತಲ ಕಂದಕಗಳಲ್ಲಿನ ಕಸ-ಕಡ್ಡಿ, ತ್ಯಾಜ್ಯ ತೆರವುಗೊಳಿಸಲಾಗುವುದು. ಹದಗೆಟ್ಟಿರುವ ರಸ್ತೆಗಳು ಮತ್ತು ಬೀದಿ ದೀಪಗಳನ್ನು ದುರಸ್ತಿಪಡಿಸಲಾಗುವುದು. ರಸ್ತೆಗಳಿಗೆ ದೀಪಾಲಂಕಾರ ಮಾಡಲಾಗುವುದು. ಮೆರವಣಿಗೆಯಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ವಿವರಿಸಿದರು.

    ಗಂಜಾಂ ಹಾಗೂ ಶ್ರೀರಂಗಪಟ್ಟಣದಲ್ಲಿ ಮಳೆ ನೀರು ಸುಗಮವಾಗಿ ಚರಂಡಿಗಳಲ್ಲಿ ಹರಿದು ಹೋಗಲು ಕ್ರಮವಹಿಸಲಾಗುವುದು. ಹದಗೆಟ್ಟಿರುವ ಶ್ರೀರಂಗಪಟ್ಟಣ -ಕೆಆರ್‌ಎಸ್ ರಸ್ತೆಯನ್ನು ದಸರಾ ಆಚರಣೆಗೂ ಮುನ್ನನ್ನೇ ಗುಣಮಟ್ಟದ ಕಾಮಗಾರಿ ಮೂಲಕ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

    ಉಪತಹಸೀಲ್ದಾರ್ ರೇಖಾ, ಬಿಇಒ ಅನಂತರಾಜು, ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ, ಶ್ರೀರಂಗನಾಥಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ವಿಜಯಸಾರಥಿ, ಪುರಸಭಾ ಅಧ್ಯಕ್ಷೆ ನಿರ್ಮಲಾ ವೇಣುಗೋಪಾಲ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಪುರಸಭಾ ಸದಸ್ಯರಾದ ಎಸ್.ಟಿ.ರಾಜು, ಗಂಜಾಂ ಶಿವು, ನರಸಿಂಹೇಗೌಡ, ನಿಂಗರಾಜು, ಶ್ರೀನಿಮಿಷಾಂಭ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಪಿಎಸ್‌ಎಸ್‌ಕೆ ಮಾಜಿ ನಿರ್ದೇಶಕ ಪಾಂಡು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts