More

    ವಿಜಯನಗರೋತ್ತರ ಕಾಲದ ಸ್ತಂಭ ಶಾಸನ ಪತ್ತೆ

    ರಟ್ಟಿಹಳ್ಳಿ: ತಾಲೂಕಿನ ಹುಲ್ಲತ್ತಿ ಗ್ರಾಮದ ಭರಮಪ್ಪ ಭೀಮಪ್ಪ ಬೂದಿಹಾಳ ಅವರ ಜಮೀನಿನಲ್ಲಿ ಉದ್ಭವ ಅಡವಿಬಸವೇಶ್ವರ ದೇವಸ್ಥಾನದ ಎದುರು ನಿಲ್ಲಿಸಿರುವ ದೀಪಮಾಲಿ ಕಂಬದಲ್ಲಿ ಸ್ತಂಭಶಾಸನ ಪತ್ತೆಯಾಗಿದೆ.

    ಸಂಶೋಧಕ ಡಾ. ಚಾಮರಾಜ ಕಮ್ಮಾರ ಅವರು ಕ್ಷೇತ್ರ ಕಾರ್ಯ ನಿಮಿತ್ತ ಗ್ರಾಮಕ್ಕೆ ಬಂದಾಗ ಹಳ್ಳದ ಬಸವೇಶ್ವರ, ಅಡವಿ ಉದ್ಭವ ಬಸವೇಶ್ವರ, ಹಾಳಬಸಪ್ಪನ ಗುಡಿ, ಹಳ್ಳದ ಬಸಪ್ಪನ ಗುಡಿ ಹೀಗೆ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ದೇವಸ್ಥಾನದ ಎದುರಿನ 15 ಅಡಿ ಎತ್ತರದ ಅಷ್ಟಮುಖ ಹೊಂದಿದ ದೀಪಮಾಲಿ ಕಂಬ ಪರಿಶೀಲಿಸಿದಾಗ ಅದರಲ್ಲಿ 9 ಸಾಲಿನ ಶಾಸನ ಪತ್ತೆಯಾಗಿದೆ.

    ಈ ಶಾಸನವು ಕಂಬದ 6 ಅಡಿ ಎತ್ತರದ ಮೇಲ್ಭಾಗದಲಿ ಕಂಡು ಬಂದಿದೆ. ಶಾಸನದ ಮೇಲ್ಭಾಗದಲ್ಲಿ ಕೀರ್ತಿಮುಖ ರೇಖಾಶಿಲ್ಪ, ಮಧ್ಯಭಾಗದಲ್ಲಿ 9 ಸಾಲುಗಳು ಕಾಣುತ್ತವೆ. ಅವೆಂದೆರೆ ರಾತಕ್ಷಿಸಿನಂ, ಮಸಮಚರ, ದಕರ್ರಿತ್ತಿಕಸು, ಂದದಗೆ, ಹುಲ್ಲತ್ತಿ ಹಳ್ರದ, ಬಸಪ್ಪಗೆಮು, ದಿಗೌಡದಿಪ್ಪ, ಮಲ್ಲೆಕಬಾನಿ, ಲ್ಲಿಸಿದು. ಶಾಸನ ಕೆಳಗೆ ಗರುಡನ ರೇಖಾಶಿಲ್ಪವಿದೆ. ಇದು ರಕ್ತಾಕ್ಷಿ ನಾಮ ಸಂವತ್ಸರದ ಕಾರ್ತಿಕ ಶುದ್ಧ ದಶಮಿಯಂದು ಹುಲ್ಲತ್ತಿಯ ಹಳ್ಳದ ಬಸಪ್ಪನಿಗೆ ಮುದಿಗೌಡ ಎಂಬುವರು ದೀಪಮಾಲಿ ಕಂಬವನ್ನು ನಿಲ್ಲಿಸಿರುವುದರ ಬಗ್ಗೆ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಇದರ ಕಾಲ ಕ್ರಿ.ಶ. 1665ರ ನವೆಂಬರ್ 10 ಸೋಮವಾರಕ್ಕೆ ಸರಿ ಹೊಂದಬಹುದಾಗಿದೆ ಎಂದು ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕಲವೀರ ಮನ್ವಾಚಾರ ತಿಳಿಸಿದ್ದಾರೆ.

    ಹುಲ್ಲತ್ತಿ ಮತ್ತು ಹಳ್ಳದ ಬಸಪ್ಪನ ದೇವಾಲಯ ಎಂದು ಶಾಸನೋಕ್ತ ಗ್ರಾಮವಾಗಿರುವ ಬಗ್ಗೆ ಮಾಹಿತಿ ಲಭಿಸಿರುವುದರಿಂದ ಈ ಶಾಸನ ಮಹತ್ವ ಪಡೆದಿದೆ. ಶಾಸನ ಪತ್ತೆ ಮಾಡುವಲ್ಲಿ ಗ್ರಾಮದ ಹಿರಿಯ ತಿರಕಪ್ಪ ಉಜಗೋಳ, ಸಿದ್ಧನಗೌಡ ಪಾಟೀಲ, ಪರಮೇಶಪ್ಪ ಕಿಟ್ಟದ, ಚಂದ್ರಪ್ಪ ಕಮ್ಮಾರ, ತಿಮ್ಮಣ್ಣ ಹಾದ್ರಿಹಳ್ಳಿ ಮತ್ತು ಹನುಮಂತಪ್ಪ ಬೆನ್ನೂರ ಇತರರು ಸಹಕರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts