More

    ವಿಐಎಸ್‌ಎಲ್ ಹೋರಾಟದ ಹಾದಿ ತೀವ್ರ; ಹೃದಯಾಘಾತದಿಂದ ಕಾರ್ಮಿಕ ಸಾವು

    ಭದ್ರಾವತಿ: ವಿಐಎಸ್‌ಎಲ್ ಕ್ಲೋಸರ್ ಆದೇಶದಿಂದ ಆಕ್ರೋಶಗೊಂಡಿರುವ ಗುತ್ತಿಗೆ ಕಾರ್ಮಿಕರು, ಎಐಟಿಯುಸಿ ಹಾಗೂ ಸಿಐಟಿಯುಸಿ ಸಂಘಟನೆಗಳು ಹೋರಾಟದ ಹಾದಿ ತೀವ್ರಗೊಳಿಸಲು ಮುಂದಾಗಿದ್ದು ವಿವಿಧ ಸಂಘ ಸಂಸ್ಥೆಗಳು ಹೋರಾಟಕ್ಕೆ ಬೆಂಬಲ ನೀಡಿವೆ. ಈ ಮಧ್ಯೆ ಗುತ್ತಿಗೆ ಕಾರ್ಮಿಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವುದು ಕಾರ್ಮಿಕರ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದೆ.
    ಪ್ರಾಣ ಕೊಟ್ಟರೂ ವಿಐಎಸ್‌ಎಲ್ ಮುಚ್ಚಲು ಬಿಡಲ್ಲ ಎಂಬ ಧ್ಯೆಯದೊಂದಿಗೆ ಗುತ್ತಿಗೆ ಕಾರ್ಮಿಕರ ಸಂಘಟನೆಗಳು ಹೋರಾಟಕ್ಕೆ ಮುಂದಾಗಿದ್ದರೆ, ಕಾರ್ಖಾನೆಯ ಉತ್ಪಾದನೆ ನಿಲ್ಲಬಾರದು, ಗುತ್ತಿಗೆ ಕಾರ್ಮಿಕರಿಗೆ ಸೇವಾ ಭದ್ರತೆ ನೀಡಬೇಕು. ಅಲ್ಲಿವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ತಾಲೂಕು ವಕೀಲರ ಸಂಘ ಘೋಷಣೆ ಮಾಡಿದೆ. ಶುಕ್ರವಾರ ಒಕ್ಕಲಿಗರ ಸಂಘ ಕೂಡ ಬೆಂಬಲ ಸೂಚಿಸಿತ್ತು.
    ವಿಮಾನ ನಿಲ್ದಾಣ ಉದ್ಘಾಟನೆಗೆ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಪ್ಟು ಬಟ್ಟೆ ಪ್ರದರ್ಶನಕ್ಕೂ ನಿರ್ಧರಿಸಲಾಗಿದ್ದು, ಆದಿಚುಂಚನಗಿರಿ ಶ್ರೀ ನಿರ್ಮಲಾನಂದಸ್ವಾಮೀಜಿ ಮತ್ತು ಮಾಜಿ ಪ್ರದಾನಿ ದೇವೇಗೌಡರನ್ನು ಭೇಟಿ ಮಾಡಿ ವಿಐಎಸ್‌ಎಲ್‌ಗೆ ಬಂಡವಾಳ ತೊಡಗಿಸುವಂತೆ ಪ್ರಧಾನಿ ಮೇಲೆ ಒತ್ತಡ ತರಬೇಕು ಎಂದು ಮನವಿ ಮಾಡಲು ತೀರ್ಮಾನಿಸಲಾಗಿದೆ.
    ಸಾವಿರಾರು ಕುಟುಂಬಗಳಿಗೆ ಅನ್ನ ನೀಡಿರುವ ನೂರು ವರ್ಷಗಳ ಇತಿಹಾಸ ಹೊಂದಿರುವ ವಿಐಎಸ್‌ಎಲ್ ಮುಚ್ಚಲು ಬಿಡುವುದಿಲ್ಲ. ಕಾರ್ಖಾನೆ ಮುಚ್ಚುವ ಆದೇಶವನ್ನು ಸರ್ಕಾರ ಕೂಡಲೆ ಹಿಂಪಡೆಯಬೇಕು. ಇಲ್ಲವಾದಲ್ಲಿ ಸ್ಥಳೀಯ ಎಲ್ಲ ನಾಗರಿಕರ ಸಹಕಾರ ಪಡೆದು ಮತದಾನ ಬಹಿಷ್ಕರಿಸಬೇಕಾಗುತ್ತದೆ ಎಂದು ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್.ಜಿ.ಸುರೇಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
    ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಸರ್‌ಎಂವಿ ಅವರ ಕನಸಿನ ಕೂಸು, ಇದು ಕರ್ನಾಟಕದ ಆಸ್ತಿ. ಇದನ್ನು ಮುಚ್ಚುವ ಅಧಿಕಾರ ಕೇಂದ್ರ ಸರ್ಕಾರದ ಸೈಲ್ ಮಂಡಳಿಗೆ ಇಲ್ಲ. ಬಂಡವಾಳ ತೊಡಗಿಸಿ ಕಾರ್ಖಾನೆ ಅಭಿವೃದ್ಧಿಪಡಿಸಿ ಎಂಬ ನಿಟ್ಟಿನಲ್ಲಿ ಮಾಜಿ ಪ್ರಧಾನಿಗಳಾದ ರಾಜೀವ್ ಗಾಂಧಿ ಹಾಗೂ ಎಚ್.ಡಿ.ದೇವೇಗೌಡರ ಕಾಲದಲ್ಲಿ ರಾಜ್ಯ ಸರ್ಕಾರದ ಅಧೀನದಲ್ಲಿದ್ದ ಕಾರ್ಖಾನೆಯನ್ನು ಕೇವಲ 1 ರೂ.ಗೆ ಹಸ್ತಾಂತರಿಸಲಾಗಿದೆ. ಕಾರ್ಖಾನೆಗೆ ಬಂಡವಾಳ ತೊಡಗಿಸದೆ ನಷ್ಟದ ಹೆಸರಿನಲ್ಲಿ ಕಾರ್ಖಾನೆ ಮುಚ್ಚುವ ನಾಟಕ ಆಡುವಾಡುತ್ತಿರುವುದು ಸರಿಯಲ್ಲ. ಕಾರ್ಖಾನೆ ರಾಜ್ಯಕ್ಕೆ ವಾಪಸ್ ನೀಡಿ ಇಲ್ಲವೆ ಕೂಡಲೆ ಮುಚ್ಚುವ ಆದೇಶ ಹಿಂಪಡೆದು ಕಾರ್ಖಾನೆಗೆ ಬಂಡವಾಳ ತೊಡಗಿಸಿ ಎಂದು ಹೇಳಿದರು.
    ಕೇಂದ್ರದ 5 ಜನ ಉಕ್ಕು ಸಚಿವರನ್ನು ನಗರಕ್ಕೆ ಕರೆತಂದು ಅವರಿಂದ ಭರವಸೆಗಳನ್ನು ನೀಡಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಗೆ ಗುತ್ತಿಗೆ ಕಾರ್ಮಿಕರ ಕುಟುಂಬ ಸದಸ್ಯರು ಮುತ್ತಿಗೆ ಹಾಕಿ ಹೋರಾಟ ಮಾಡುತ್ತೇನೆ. ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ಜಿಲ್ಲೆಗೆ ಆಗಮಿಸಲಿದ್ದು ಅಂದು ನಾವು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸುತ್ತೇವೆ. ದಯಾಮರಣ ಕೋರಿ ದೇಶದ ರಾಷ್ಟ್ರಪತಿಯವರಿಗೆ ಅರ್ಜಿ ಸಲ್ಲಿಸುತ್ತೇವೆ. ಜನಪರವಾಗಿರಬೇಕಾದ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ ಅವರು ಭಾನುವಾರ ಅಗಮುಡಿ ಸಮುದಾಯ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸರ್.ಎಂ.ವಿ ಪುತ್ಥಳಿ ಅನಾವರಣ ಮಾಡಲು ಬರುತ್ತಿದ್ದಾರೆ. ಅವರು ಕಾರ್ಯಕ್ರಮಕ್ಕೆ ಹೋಗುವ ಮುನ್ನ ರಂಗಪ್ಪ ವೃತ್ತದಲ್ಲಿಯೇ ಅವರಿಗೆ ೇರಾವ್ ಹಾಕಲಾಗುವುದು. 1500 ಜನ ಗುತ್ತಿಗೆ ಕಾರ್ಮಿಕರ ಜೀವನದೊಂದಿಗೆ ಆಟವಾಡುವುದನ್ನು ಬಿಟ್ಟು ಉದ್ಯೋಗ ನೀಡುವ ಮೂಲಕ ಬದುಕು ರೂಪಿಸಿಕೊಡಬೇಕು ಎಂದು ಒತ್ತಾಯಿಸಿದರು.
    ವಕೀಲರ ಪ್ರತಿಭಟನೆ: ವಿಐಎಸ್‌ಎಲ್ ತನ್ನ ಉತ್ಪಾದನೆಯನ್ನು ಎಂದಿಗೂ ನಿಲ್ಲಿಸಬಾರದು ಹಾಗೂ ನಿಲ್ಲಿಸಿದ್ದೇ ಆದಲ್ಲಿ ಗುತ್ತಿಗೆ ಕಾರ್ಮಿಕರಿಗೆ ಜೀವನದ ಭದ್ರತೆ ನೀಡಬೇಕು ಎಂದು ಆಗ್ರಹಿಸಿ ತಾಲೂಕು ವಕೀಲರ ಸಂಘ ತಾಲೂಕು ಕಚೇರಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿ ತಾಲೂಕು ದಂಡಾಧಿಕಾರಿಗಳ ಮೂಲಕ ಮುಖ್ಯಮಂತ್ರಿ, ಪ್ರಧಾನಮಂತ್ರಿ, ಕೇಂದ್ರ ಗೃಹಸಚಿವರು, ಹಣಕಾಸು ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿತು.
    ಹೃದಯಾಘಾತದಿಂದ ಕಾರ್ಮಿಕ ಸಾವು: ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಗುತ್ತಿಗೆ ಕಾರ್ಮಿಕರೊಬ್ಬರು ಶನಿವಾರ ಬೆಳಗ್ಗೆ ತೀವ್ರ ಅಘಾತಕ್ಕೆ ಒಳಗಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತಿಮ್ಲಾಪುರದ ನಿವಾಸಿ ಹೇಮಗಿರಿ (44) ಮೃತ ದುರ್ಧೈವಿಯಾಗಿದ್ದು ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ. ಎಂಎಂಡಿ ಕ್ರೇನ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೇಮಗಿರಿ ಅವರಿಗೆ ಬೆಳಗ್ಗೆ ಮನೆಯಲ್ಲಿದ್ದಾಗ ತೀವ್ರ ಎದೆನೋವು ಕಾಣಿಸಿಕೊಂಡಿದ್ದು ಕುಟುಂಬಸ್ಥರು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts