More

    ವಾಹನ ವ್ಯವಸ್ಥೆಗೆ ಒತ್ತಾಯಿಸಿ ಪ್ರತಿಭಟನೆ

    ಕಾರವಾರ: ವೇತನ ಪಾವತಿ ಹಾಗೂ ಓಡಾಟಕ್ಕೆ ವಾಹನ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಕೈಗಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ 2 ಸಾವಿರಕ್ಕೂ ಅಧಿಕ ಕಾರ್ವಿುಕರು ಬುಧವಾರ ಮಲ್ಲಾಪುರ ಟೌನ್​ಶಿಪ್​ನಲ್ಲಿ ಪ್ರತಿಭಟನೆ ನಡೆಸಿದರು.

    ಕೈಗಾ ಅಣು ವಿದ್ಯುತ್ ಸ್ಥಾವರ ಹಾಗೂ ಮಲ್ಲಾಪುರ ಟೌನ್​ಶಿಪ್ ನಲ್ಲಿ ಗುತ್ತಿಗೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಕಾರ್ವಿುಕರನ್ನು ಲಾಕ್​ಡೌನ್ ವೇಳೆ ಕರೆದೊಯ್ಯಲು ಎನ್​ಪಿಸಿಐಎಲ್ ಬಸ್​ನ ವ್ಯವಸ್ಥೆ ಮಾಡಿತ್ತು. ಈಗ ಇದ್ದಕ್ಕಿದ್ದಂತೆ ನಿಲ್ಲಿಸಿ ಕೆಲಸದ ಸ್ಥಳ ತಲುಪಲು ವೈಯಕ್ತಿಕವಾಗಿ ವ್ಯವಸ್ಥೆ ಮಾಡಿಕೊಳ್ಳುವಂತೆ ಹೇಳಲಾಗುತ್ತಿದೆ. ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಪ್ರಾರಂಭವಾಗಿಲ್ಲ. ಕೆಲಸಕ್ಕೆ ತಲುಪುವುದು ಹೇಗೆ ಎಂದು ಪ್ರಶ್ನಿಸಿದರು.

    ಇನ್ನು ಲಾಕ್​ಡೌನ್ ಅವಧಿಯ ಎರಡು ತಿಂಗಳ ವೇತನ ಪಾವತಿಯಾಗಿಲ್ಲ. ಎನ್​ಪಿಸಿಐಎಲ್ ಅಧಿಕಾರಿಗಳನ್ನು ಕೇಳಿದರೆ ನಾವು ಗುತ್ತಿಗೆದಾರರಿಗೆ ವೇತನ ಪಾವತಿಗೆ ಸೂಚಿಸಿದ್ದೇವೆ ಎನ್ನುತ್ತಿದ್ದಾರೆ. ಗುತ್ತಿಗೆದಾರ ನಮಗೆ ಎನ್​ಪಿಸಿಐಎಲ್ ಅಧಿಕೃತ ಆದೇಶ ನೀಡಿಲ್ಲ ಎನ್ನುತ್ತಿದ್ದಾರೆ. ಯಾವುದೇ ಕಾರ್ವಿುಕರ ವೇತನ ಕಡಿತ ಮಾಡದಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಆದರೆ, ಕೇಂದ್ರ ಸರ್ಕಾರದ ಒಂದು ಸಂಸ್ಥೆಯಲ್ಲಿಯೇ ಈ ರೀತಿ ಅನ್ಯಾಯ ನಡೆಯುತ್ತಿದೆ ಎಂದು ದೂರಿದರು.

    ಮಾಜಿ ಸಚಿವ ಆನಂದ ಅಸ್ನೋಟಿಕರ್, ಮಾಜಿ ಶಾಸಕ ಸತೀಶ ಸೈಲ್ ಸ್ಥಳಕ್ಕೆ ತೆರಳಿ ಕಾರ್ವಿುಕರಿಗೆ ಬೆಂಬಲ ನೀಡಿದರು. ಸತೀಶ ಸೈಲ್ ಮಾತನಾಡಿ, ಲಾಕ್​ಡೌನ್ ಸಮಯದಲ್ಲಿ ಕೈಗಾವನ್ನು ತುರ್ತು ಸೇವೆ ಎಂದು ಪರಿಗಣಿಸಿ ಕಾರ್ವಿುಕರನ್ನು ಕರೆದೊಯ್ಯಲಾಯಿತು. ತುರ್ತು ಸೇವೆಯಲ್ಲಿ ಗುತ್ತಿಗೆ ಕಾರ್ವಿುಕರಿಗೊಂದು, ಕಾಯಂ ಕಾರ್ವಿುಕರಿಗೊಂದು ನ್ಯಾಯ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಡಿವೈಎಸ್​ಪಿ ಅರವಿಂದ ಕಲಗುಜ್ಜಿ ಸ್ಥಳಕ್ಕೆ ತೆರಳಿ ಕಾರ್ವಿುಕರ ಜತೆ ಮಾತುಕತೆ ನಡೆಸಿದರು. ಎಲ್ಲರ ಕೋರಿಕೆಯ ನಂತರ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಕಾರ್ವಿುಕರನ್ನು ಕರೆದೊಯ್ಯಲು ಬಸ್ ವ್ಯವಸ್ಥೆ ಮುಂದುವರಿಸುವ ಭರವಸೆ ನೀಡಿದರು. ಇನ್ನು ವೇತನ ನೀಡುವ ಸಂಬಂಧ ಮೇ 30ರಂದು ಗುತ್ತಿಗೆದಾರರು ಕಾರ್ವಿುಕ ಮುಖಂಡರ ಸಭೆ ನಡೆಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts