More

    ವಾಹನ ಮರಳಿ ಪಡೆಯಲು ಪರದಾಟ

    ಬೆಳಗಾವಿ: ನಗರದಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಅನವಶ್ಯಕವಾಗಿ ಸಂಚರಿಸುತ್ತಿದ್ದ 1,600ಕ್ಕೂ ಅಧಿಕ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಬೈಕ್, ಆಟೋ, ಕಾರುಗಳೂ ಸೇರಿದ್ದು, ಇದೀಗ ತುರ್ತು ಅವಶ್ಯಕತೆಗೆ ಬೇಕಾದವರು ವಾಹನ ಇಲ್ಲದೆ ಪರದಾಡುವಂತಾಗಿದೆ.

    ವೈದ್ಯಕೀಯ ಸೇವೆ, ಬ್ಯಾಂಕ್ ಸೇವೆ, ಫುಡ್ ಡೆಲಿವರಿ ಸೇರಿ ಕೆಲವೇ ಕೆಲ ತುರ್ತು ಅವಶ್ಯಕ ಸೇವೆಗಳಿಗೆ ತೆರಳುವವರು ಸೂಕ್ತ ದಾಖಲೆ ತೋರಿಸಿದರೆ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಇನ್ನುಳಿದಂತೆ ಸಕಾರಣವಿಲ್ಲದೆ ತಿರುಗಾಡುವವರ ವಾಹನಗಳನ್ನು ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸರು ವಶಪಡಿಸಿಕೊಳ್ಳುತ್ತಿದ್ದಾರೆ.

    ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ಸಾಮಗ್ರಿ ಖರೀದಿಗೆ ವಾಹನ ಬಳಕೆಗೆ ಅವಕಾಶ ಇದೆ. ಅದರ ನಂತರ ಅನಗತ್ಯವಾಗಿ ಸಂಚರಿಸುವವರ ಬೈಕ್, ಆಟೋ, ಕಾರ್‌ಗಳನ್ನು ಪೊಲೀಸರು ಜಪ್ತಿ ಮಾಡುತ್ತಿದ್ದಾರೆ. ಮೊದಲ ದಿನ 140, ಮೇ 11ರಂದು 60, 12ರಂದು 50, 13ರಂದು 50, 14ರಂದು 52, 15ರಂದು 35 ಹಾಗೂ 16ರಂದು 9 ಹಾಗೂ ಸೋಮವಾರ 35 ಸೇರಿ ಒಟ್ಟು 1,635 ವಾಹನ ಜಪ್ತಿ ಮಾಡಿದ್ದು, ಈ ಪೈಕಿ 1,550ಕ್ಕೂ ಅಧಿಕ ದ್ವಿಚಕ್ರ ವಾಹನಗಳೇ ಇವೆ. ಇನ್ನುಳಿದಂತೆ ಕಾರು ಹಾಗೂ ಆಟೋಗಳು ಸೇರಿದ್ದು, ತುರ್ತು ಸೇವೆಗೆ ತೆರಳುವವರ ವಾಹನಗಳನ್ನು ಮಾತ್ರ ದಾಖಲೆ ಪರಿಶೀಲಿಸಿ, ದಂಡ ವಿಧಿಸಿ ವಾಪಸ್ ನೀಡಲಾಗುತ್ತಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಪಿ ವಿಕ್ರಂ ಆಮ್ಟೆ ಅವರು, ಅಗತ್ಯ ಸೇವೆಗೆ ತೆರಳುವವರು ಮಾಸ್ಕ್ ಧರಿಸದಿರುವುದು ಸೇರಿ ಕೆಲ ನಿಯಮ ಉಲ್ಲಂಘಿಸಿದಾಗ ಅಂಥವರಿಗೆ 1 ಸಾವಿರ ರೂ.ವರೆಗೆ ದಂಡ ವಿಧಿಸಿ ವಾಹನ ಬಿಡುಗಡೆ ಮಾಡಲಾಗುತ್ತಿದೆ. ಆದರೆ, ಯಾವುದೇ ಕಾರಣ ಇಲ್ಲದೆ, ಸೂಕ್ತ ದಾಖಲೆಯೂ ಇಲ್ಲದೆ ಸಂಚರಿಸುತ್ತಿದ್ದವರ ಬೈಕ್‌ಗಳನ್ನು ಲಾಕ್‌ಡೌನ್ ಮುಗಿಯುವವರೆಗೂ ವಾಪಸ್ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

    ಬಿಡುಗಡೆಗೆ ಮಾರ್ಗಸೂಚಿ ಬಂದಿಲ್ಲ: ವಶಪಡಿಸಿಕೊಳ್ಳಲಾದ ವಾಹನಗಳ ಬಿಡುಗಡೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಯಾವುದೇ ಮಾರ್ಗಸೂಚಿ ಬಂದಿಲ್ಲ. ವಾಹನಗಳ ಮಾಲೀಕರ ಹೆಸರು, ಊರು, ಮೊಬೈಲ್ ಸಂಖ್ಯೆ ಬರೆದುಕೊಳ್ಳಲಾಗಿದೆ. ಮೇಲಧಿಕಾರಿಗಳ ಆದೇಶ ಬಂದ ನಂತರ ಮಾಹಿತಿ ನೀಡಲಾಗುವುದು ಎಂದು ಠಾಣಾಧಿಕಾರಿಗಳು ಹೇಳುತ್ತಾರೆ.

    24 ಗಂಟೆಯೂ ಗಸ್ತು: ನಗರದಲ್ಲಿ ಪೊಲೀಸರು ದಿನದ 24 ಗಂಟೆಯೂ ಗಸ್ತು ತಿರುಗುತ್ತಿದ್ದಾರೆ. ನಗರದ ಪ್ರಮುಖ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ‘ಜನರ ಆರೋಗ್ಯದ ದೃಷ್ಟಿಯಿಂದ ವಾಹನಗಳ ತಪಾಸಣೆ ವೇಳೆ ಈಗಾಗಲೇ ಹಲವು ಪೊಲೀಸರಿಗೆ ಕರೊನಾ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಜನರು ಯಾವುದೇ ಕಾರಣಕ್ಕೂ ಅನಗತ್ಯವಾಗಿ ವಾಹನಗಳಲ್ಲಿ ಹೊರಗಡೆ ಸಂಚರಿಸಬಾರದು. ಸಾರ್ವಜನಿಕರು ಮನೆಗಳಲ್ಲೇ ಇದ್ದು, ಸಹಕರಿಸಬೇಕು’ ಎಂದು ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.

    ಮಾಸ್ಕ್ ಧರಿಸದವರಿಗೆ ದಂಡ: ನಗರ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದ 1,632 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಒಟ್ಟು 1,63,200 ರೂ. ವಸೂಲಿ ಮಾಡಿದ್ದಾರೆ. ಕರ್ನಾಟಕ ಎಪಿಡೆಮಿಕ್ ಡಿಸೀಸ್ ಆ್ಯಕ್ಟ್ 2020ರ ಅನ್ವಯ 2 ಪ್ರಕರಣ ದಾಖಲಿಸಿದ್ದಾರೆ.

    ಲಾಕ್‌ಡೌನ್ ತೆರವಿನ ಬಳಿಕ ನ್ಯಾಯಾಲಯದಿಂದ ಅನುಮತಿ ಪಡೆದು ಸೂಕ್ತ ದಾಖಲೆಗಳನ್ನು ಹಾಜರುಪಡಿಸಿ, ನಿಯಮ ಉಲ್ಲಂಘಿಸಿದ ಆಯಾ ಪ್ರಕರಣಗಳಿಗೆ ಸಂಬಂಧಿಸಿದಂತೆ ದಂಡ ಪಾವತಿಸುವ ಮೂಲಕ ವಾಹನ ಸವಾರರು ಹಾಗೂ ಮಾಲೀಕರು ತಮ್ಮ ವಾಹನಗಳನ್ನು ಪಡೆದುಕೊಳ್ಳಬಹುದು.
    | ವಿಕ್ರಂ ಆಮ್ಟೆ, ಡಿಸಿಪಿ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts