More

    ವಾರಾಂತ್ಯ ಕರ್ಫ್ಯೂಗೆ ಗಿರಿ ಜಿಲ್ಲೆ ಭಾಗಶಃ ಸ್ತಬ್ಧ

    ಯಾದಗಿರಿ: ಕೋವಿಡ್ 3ನೇ ಅಲೆ ನಿಯಂತ್ರಣಕ್ಕಾಗಿ ಸಕರ್ಾರ ಜಾರಿಗೆ ತಂದ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ಗಿರಿ ಜಿಲ್ಲೆ ಭಾಗಶಃ ಸ್ತಬ್ಧಗೊಂಡಿದೆ.

    ಸತತ ಎರಡು ವರ್ಷಗಳಿಂದ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಆಗಾಗ್ಗೆ ಜಾರಿಗೆ ತರುತ್ತಿರುವ ಕರ್ಫ್ಯೂ ಜಿಲ್ಲೆ ಜನರಿಗೆ ಹೊಸ ಅನುಭವವೇನಲ್ಲ. ಹೀಗಾಗಿ ಆದೇಶ ಹೊರಬೀಳುತ್ತಿದ್ದಂತೆ ಬಹುತೇಕ ಜನ ಮನೆಬಿಟ್ಟು ಹೊರಬಂದಿಲ್ಲ. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಎಲ್ಲೆಡೆ ಕರೊನಾ ರೂಪಾಂತರಿ ಒಮಿಕ್ರಾನ್ ಬಗ್ಗೆ ಚರ್ಚೆ ನಡೆಯುತ್ತಿರುವುದು ಕಂಡು ಬಂದಿತು.

    ಬೆಳಗಾಗುತ್ತಲೇ ಪ್ರಮುಖ ರಸ್ತೆಗಳಲ್ಲಿ ಲಾಠಿ ಹಿಡಿದು ರಸ್ತೆಗಿಳಿದ ಪೊಲೀಸರು, ಅನಗತ್ಯವಾಗಿ ಸಂಚರಿಸುವವರಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಸ್ವತಃ ಉಸ್ತುವಾರಿ ವಹಿಸುವ ಮೂಲಕ ಮಾಸ್ಕ್ ಇಲ್ಲದೆ ರಸ್ತೆಗಿಳಿದ ಸವಾರರಿಗೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದರ ಜತೆಗೆ ಸೋಂಕಿನ ಬಗ್ಗೆ ತಿಳಿವಳಿಕೆಯೂ ಮೂಡಿಸಿದರು.

    ತೆಲಂಗಾಣದ ಹೈದರಾಬಾದ್ ಜಿಲ್ಲೆಗೆ ಸಮೀಪವಿರುವ ಕಾರಣ ಈ ಭಾಗದಿಂದ ಪ್ರತಿನಿತ್ಯ ನೂರಾರು ಜನ ಶನಿವಾರ ಮತ್ತು ಭಾನುವಾರ ಕೆಲಸ ಕಾರ್ಯಗಳಿಗಾಗಿ ತೆರಳುವುದು ಸಾಮಾನ್ಯ. ಆದರೆ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ತಮ್ಮ ಪಾ್ಲೃನ್ ರದ್ದುಗೊಳಿಸಿದ್ದರಿಂದ ಬಸ್ ಮತ್ತು ರೈಲು ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಭಣಗುಡುತ್ತಿದ್ದವು.

    ಗ್ರಾಮೀಣ ಭಾಗದಿಂದಲೂ ನಗರದತ್ತ ಹೆಚ್ಚಿನ ಜನರು ಮುಖ ಮಾಡಲಿಲ್ಲ. ಒಟ್ಟಾರೆ, 3ನೇ ಅಲೆ ಮತ್ತೊಮ್ಮೆ ಜನಜೀವನದ ಮೇಲೆ ಪರಿಣಾಮ ಬೀರುತ್ತಿದ್ದು, ನಿಧಾನವಾಗಿ ಆರಂಭಗೊಂಡಿದ್ದ ಸಣ್ಣ-ಪುಟ್ಟ ಉದ್ಯಮಗಳು ಮತ್ತೆ ಹಳಿ ತಪ್ಪುವ ಆತಂಕ ವ್ಯಾಪಾರಸ್ಥರಿಗೆ ಕಾಡುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts