More

    ವಾರದೊಳಗೆ ಅಕ್ರಮ ದಂಧೆಗೆ ಕಡಿವಾಣ ಹಾಕಿ

    ಬೆಳಗಾವಿ: ಮುಂದಿನ ವಾರದೊಳಗೆ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗಾಂಜಾ ಮಾರಾಟ, ಜೂಜಾಟ ದಂಧೆ ನಿಲ್ಲಬೇಕು. ನಿಯಂತ್ರಣಕ್ಕೆ ಬರದಿದ್ದಲ್ಲಿ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಜಿಲ್ಲಾಡಳಿತಕ್ಕೆ ಖಡಕ್ ಸೂಚನೆ ನೀಡಿದರು.

    ನಗರದ ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದದ್ದ 2021-22ನೇ ಸಾಲಿನ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿ, ಬೆಳಗಾವಿ ನಗರ ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಗಾಂಜಾ ಮಾರಾಟ ಹಾಗೂ ಮಟ್ಕಾ ದಂಧೆ ವಿರುದ್ಧ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಬೇಕು. ಗಾಂಜಾ ಮಾರಾಟ ಮತ್ತು ಪೂರೈಕೆ ಮಾಡುವವರನ್ನು ಯಾರ ಮುಲಾಜಿಲ್ಲದೆ ಬಂಧಿಸಬೇಕು ಎಂದು ಆದೇಶಿಸಿದರು.

    ನಗರವಾಗಿದೆ ಮಟ್ಕಾ ಅಡ್ಡೆ: ಶಾಸಕ ಅಭಯ ಪಾಟೀಲ ಮಾತನಾಡಿ, ಬೆಳಗಾವಿ ನಗರ ದಿನದಿಂದ ದಿನಕ್ಕೆ ಗಾಂಜಾ, ಮಟ್ಕಾ ಅಡ್ಡೆಗಳ ನಗರವಾಗುತ್ತಿದೆ. ಈ ದಂಧೆಯಲ್ಲಿ ಪೊಲೀಸ್ ಅಧಿಕಾರಿಗಳೂ ಭಾಗಿಯಾಗಿದ್ದಾರೆ. ನಗರದ ಬಿ.ಎಸ್. ಯಡಿಯೂರಪ್ಪ ಮಾರ್ಗದಲ್ಲಿ ಅನಧಿಕೃತ ಮದ್ಯದ ಅಂಗಡಿಗಳಿಂದ ಸುತ್ತಮುತ್ತಲಿನ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಕಠಿಣ ಕ್ರಮ ಕೈಗೊಳ್ಳದಿದ್ದರೆ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಕಾಲ್ ಮಾಹಿತಿ ಸಂಗ್ರಹಿಸಿ: ಬಳಿಕ ಸಚಿವ ಕಾರಜೋಳ ಮಾತನಾಡಿ, ಜೂಜಾಟ ಅಡ್ಡೆಗಳು, ಅನಧಿಕೃತ ಕ್ಲಬ್‌ಗಳು, ಕಾನೂನು ಬಾಹಿರ ಚಟುವಟಿಕೆಗಳು ವಾರದೊಳಗಾಗಿ ಸಂಪೂರ್ಣ ನಿಲ್ಲಬೇಕು. ಅಲ್ಲದೆ, ಬಂಧಿತ ವ್ಯಕ್ತಿಗಳ ಮೊಬೈಲ್ ಕಾಲ್‌ನ ಮಾಹಿತಿ ಸಂಗ್ರಹಿಸಬೇಕು. ಅದರಲ್ಲಿ ಪೊಲೀಸರು ಭಾಗಿಯಾಗಿದ್ದರೆ ತಕ್ಷಣವೇ ವರದಿ ಮಾಡಬೇಕು ಎಂದು ನಗರ ಪೊಲೀಸ್ ಆಯುಕ್ತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಆದೇಶಿಸಿದರು.

    ಅಗತ್ಯ ಸಿದ್ಧತೆ: ನಗರದ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ, ಎಸ್ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಈಗಾಗಲೇ ನಗರದಲ್ಲಿ ಜೂಜಾಟ ಅಡ್ಡೆಗಳ ಮೇಲೆ ದಾಳಿ ನಡೆಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಎಲ್ಲ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಗಾಂಜಾ ಮಾರಾಟ ಮತ್ತು ಪೂರೈಕೆದಾರರ ತಂಡಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಿಜಾಬ್ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರಿಗೆ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ. ವಾರದಲ್ಲಿ ಅಕ್ರಮ ದಂಧೆಗೆ ಕಡಿವಾಣ ಹಾಕುತ್ತೇವೆ ಎಂದರು.

    ಖುದ್ದು ಪರಿಶೀಲಿಸಿ: 2019ರಲ್ಲಿ ಸಂಭವಿಸಿದ ನೆರೆ ಹಾವಳಿಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ನೀಡುವ ಮುನ್ನ ತಾಲೂಕು ತಹಸೀಲ್ದಾರ್, ಗ್ರಾಪಂ ಪಿಡಿಒಗಳು ಖುದ್ದು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ಮುಖ್ಯಮಂತ್ರಿ ಬೊಮ್ಮಾಯಿ ಅವರು ಬೆಳಗಾವಿ ಜಿಲ್ಲೆಗೆ ಹೆಚ್ಚುವರಿಯಾಗಿ 7,600 ಮನೆ ಮಂಜೂರು ಮಾಡಿದ್ದು, 183 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಪರಿಹಾರ ಪಟ್ಟಿಯಿಂದ ಕೈಬಿಟ್ಟಿರುವ ಅರ್ಹ ಫಲಾನುಭವಿಗಳನ್ನು ಕೂಡಲೇ ಆಯ್ಕೆ ಮಾಡಬೇಕು ಎಂದು ಸಚಿವ ಕಾರಜೋಳ ಅವರು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜೆಜೆಎಂಗೆ 578 ಕೋಟಿ ರೂ.: ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗಗಳ ವ್ಯಾಪ್ತಿಯಲ್ಲಿ ಜಲ ಜೀವನ ಮಿಷನ್ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಲು 2020-21ನೇ ಸಾಲಿನಲ್ಲಿ 578 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಅದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ 248 ಕೋಟಿ ರೂ. ಬಿಡುಗಡೆ ಮಾಡಿದೆ. ಆ ಪೈಕಿ 216 ಕೋಟಿ ರೂ. ಖರ್ಚು ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಹೀಗಾಗಿ ಮಾರ್ಚ್ ಅಂತ್ಯದೊಳಗೆ ಪ್ರಸಕ್ತ ವರ್ಷದಲ್ಲಿ ನಿಗದಿತ ಗುರಿ ಸಾಧಿಸಬೇಕು. ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳಿದ್ದರೆ ಹೇಳಿ ಎಂದು ಸಚಿವರು ತಿಳಿಸಿದರು.

    ಶೇ. 101 ಸಾಧನೆ: ಆರೋಗ್ಯ ಇಲಾಖೆ ಅಧಿಕಾರಿಗಳು ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಮೂರನೇ ಅಲೆಯಲ್ಲಿ 2.13 ಲಕ್ಷ ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ತಪಾಸಣೆ ನಡೆಸಲಾಗಿದೆ. 18 ವರ್ಷ ಮೇಲ್ಪಟ್ಟ 36.27 ಲಕ್ಷ ಜನರಿಗೆ ಮೊದಲ ಡೋಸ್ ನೀಡಲಾಗಿದ್ದು, ಶೇ. 101 ಸಾಧನೆಯಾಗಿದೆ. ನೆರೆಯ ರಾಜ್ಯ ಹಾಗೂ ಜಿಲ್ಲೆಯ ಅನೇಕ ಜನರೂ ಸಹ ಲಸಿಕೆ ಪಡೆದುಕೊಂಡಿದ್ದಾರೆ. 34.48 ಲಕ್ಷ ಜನರಿಗೆ ಎರಡನೇ ಡೋಸ್ ನೀಡಲಾಗಿದೆ ಎಂದುತಿಳಿಸಿದರು.

    ಸಂಸದೆ ಮಂಗಲ ಅಂಗಡಿ, ವಿಧಾನಸಭಾ ಉಪಸಬಾಧ್ಯಕ್ಷ ಆನಂದ ಮಾಮನಿ, ಶಾಸಕರಾದ ಮಹಾಂತೇಶ ಕೌಜಲಗಿ, ದುಯೋರ್ಧನ ಐಹೊಳೆ, ಮಹಾಂತೇಶ ದೊಡಗೌಡರ, ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಪಂ ಸಿಇಒ ದರ್ಶನ ಎಚ್.ವಿ. ಇತರರಿದ್ದರು.

    ಜಿಲ್ಲಾ ವೈದ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ

    ರಾಮದುರ್ಗ ತಾಲೂಕಿನ ಸಿಬ್ಬಂದಿ ನಿರ್ಲಕ್ಷೃದಿಂದ ಮೂರು ಮಕ್ಕಳು ಸಾವನ್ನಪ್ಪಿರುವ ಘಟನೆಗೆ ಕಾರಣರಾದ ವೈದ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೆಳ ಮಟ್ಟದ ಅಧಿಕಾರಿಗಳನ್ನು ಬಲಿಪಶು ಮಾಡಿ ಹಿರಿಯ ಅಧಿಕಾರಿಗಳನ್ನು ರಕ್ಷಿಸಲು ಹೋಗಬೇಡಿ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಈ ಬಗ್ಗೆ ಮೂರು ದಿನಗಳಲ್ಲಿ ಸೂಕ್ತ ಕ್ರಮ ಕೈಗೊಂಡು ನನಗೆ ವರದಿ ನೀಡಬೇಕು. ಆರೋಗ್ಯ ಇಲಾಖೆಯ ಬಗ್ಗೆ ನಿರ್ಲಕ್ಷೃ ಮಾಡುತ್ತಿರುವ ಜಿಲ್ಲಾ ವೈದ್ಯಾಧಿಕಾರಿ ವಿರುದ್ಧ ಆರೋಗ್ಯ ಇಲಾಖೆಯ ಆಯುಕ್ತರಿಗೆ ಮೊಬೈಲ್ ಮೂಲಕ ಮಾತನಾಡಿ, ಬೇರೆ ಡಿಎಚ್‌ಒ ನಿಯೋಜಿಸಿ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.

    ವೈದ್ಯರು ತಾಲೂಕು ಆಸ್ಪತ್ರೆಗೆ ಬರದಿದ್ದರೆ ವೇತನ ಕೊಡಬೇಡಿ

    ತಾಲೂಕು ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರನ್ನು ಜಿಲ್ಲಾ ಆಸ್ಪತ್ರೆಗೆ ನಿಯೋಜಿಸಲಾಗುತ್ತಿದೆ. ಇದರಿಂದ ತಾಲೂಕು ಆಸ್ಪತ್ರೆಗಳಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯ ದೊರಕುತ್ತಿಲ್ಲ ಎಂದು ಶಾಸಕರಾದ ಮಹಾಂತೇಶ ಕೌಜಲಗಿ, ಮಹಾದೇವಪ್ಪ ಯಾದವಾಡ, ಮಹಾಂತೇಶ ದೊಡಗೌಡರ, ಆನಂದ ಮಾಮನಿ ಅವರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಸಚಿವ ಗೋವಿಂದ ಕಾರಜೋಳ, ಆರೋಗ್ಯ ಇಲಾಖೆಯಲ್ಲಿನ ಎಲ್ಲ ನಿಯೋಜನೆಗಳನ್ನು ಕೂಡಲೇ ರದ್ದುಪಡಿಸಿ ವರದಿ ನೀಡಬೇಕು. ಮಾ. 1ರ ಒಳಗಾಗಿ ಅಧಿಕಾರಿಗಳು ತಮ್ಮ ಮೂಲ ಜಾಗಕ್ಕೆ ಹಾಜರಾಗದಿದ್ದರೆ ಅವರ ವೇತನ ತಡೆ ಹಿಡಿಯಬೇಕು ಎಂದು ಜಿಪಂ ಸಿಇಒಗೆ ಸಚಿವ ಗೋವಿಂದ ಕಾರಜೋಳ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts