More

    ವಾರದಲ್ಲಿ ಒಂದು ದಿನ ಲಸಿಕಾ ಉತ್ಸವ, 5 ಲಕ್ಷ ಲಸಿಕೆ ನೀಡಲು ಕೇಂದ್ರಕ್ಕೆ ಮನವಿ, ಆರೋಗ್ಯ ಸಚಿವ ಸುಧಾಕರ್ ಹೇಳಿಕೆ

    ಶಿಡ್ಲಘಟ್ಟ: ರಾಜ್ಯದಲ್ಲಿ ಈವರೆಗೂ 4 ಕೋಟಿ ಲಸಿಕೆ ನೀಡಲಾಗಿದೆ, ಮುಂದಿನ ದಿನಗಳಲ್ಲಿ ಪ್ರತಿ ದಿನ 5 ಲಕ್ಷ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

    ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದಿನಕ್ಕೆ 5 ಲಕ್ಷದಂತೆ ತಿಂಗಳಲ್ಲಿ ಒಂದೂವರೆ ಕೋಟಿ ಲಸಿಕೆ ನೀಡಲಾಗುವುದು. ಇದಕ್ಕಾಗಿ ಮುಖ್ಯಮಂತ್ರಿ ಹಾಗೂ ನಾನು ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಪ್ರತಿ ದಿನ 5 ಲಕ್ಷಕ್ಕೂ ಹೆಚ್ಚು ಲಸಿಕೆ ನೀಡಲು ಮನವಿ ಮಾಡಿದ್ದೇವೆ ಎಂದರು.

    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದೇ ದಿನ 30 ಸಾವಿರ ಲಸಿಕೆ ನೀಡಲಾಗಿದೆ. ಇನ್ನು ಮುಂದೆ 50 ಸಾವಿರ ಗುರಿ ನೀಡಲಾಗಿದೆ. ಪ್ರತಿವಾರದ ಒಂದು ಲಸಿಕಾ ಉತ್ಸವ ನಡೆಯಲಿದ್ದು ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಕೊಳೆಗೇರಿಗಳಲ್ಲಿ ಇರುವವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು.

    ಬೆಂಗಳೂರು ಕರೊನಾ ವೇಗವಾಗಿ ಹರಡುವ ಸ್ಥಳವಾಗಿದೆ, ಇಲ್ಲಿ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತಿದೆ. 3ನೇ ಅಲೆಗೆ ಸಿದ್ಧತೆಯಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಕ್ಕಳ ನಿಗಾ ಘಟಕವನ್ನು 60-70 ಹಾಸಿಗೆ ಸಹಿತ ಅಭಿವೃದ್ಧಿಪಡಿಸಲಾಗಿದೆ ಎಂದು ಸುಧಾಕರ್ ಮಾಹಿತಿ ನೀಡಿದರು.

    ಎತ್ತಿನಹೊಳೆ ಯೋಜನೆಗೆ ಸ್ಪಷ್ಟತೆ: ಎತ್ತಿನಹೊಳೆ ಯೋಜನೆಯಲ್ಲಿ ಭೂಸ್ವಾಧೀನ ವಿಳಂಬವಾಗುತ್ತಿದೆ, ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗಿದೆ. ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ ಜಿಲ್ಲೆಗಳಿಗೆ ಆದ್ಯತೆ ಮೇರೆಗೆ ನೀರು ದೊರೆಯಲಿದೆ. ಕೃಷ್ಣಾ ಮೇಲ್ದಂಡೆಯಿಂದ 156 ಟಿಎಂಸಿ ನೀರು ಪಡೆಯಬೇಕಿದ್ದು, ತಕರಾರು ನಡೆಯುತ್ತಿದೆ, ವಕೀಲರೊಂದಿಗೆ ಮುಖ್ಯಮಂತ್ರಿಗಳು ಚರ್ಚಿಸಿದ್ದಾರೆ. ಶೀಘ್ರ ತಡೆಯಾಜ್ಞೆ ತೆರವುಗೊಳಿಸಿ ನೀರು ಕೊಡಿಸುವ ಕೆಲಸವಾಗಬೇಕು ಎಂದು ಸಿಎಂ ಸೂಚಿಸಿದ್ದಾರೆ ಎಂದರು.

    ಶಾಸಕ ವಿ.ಮುನಿಯಪ್ಪ, ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಒ ಶಿವಶಂಕರ್, ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ತಹಸೀಲ್ದಾರ್ ರಾಜೀವ್, ನಗರಸಭೆ ಆಯುಕ್ತ ಶ್ರೀಕಾಂತ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts