More

    ಒಡನಾಟದ ಕಲಿಕೆಯಿಂದ ಜೀವನಾನುಭವ : ಜಿಕೆವಿಕೆ ಡೀನ್ ಡಾ.ಪ್ರಕಾಶ್ ಅಭಿಪ್ರಾಯ

    ಶಿಡ್ಲಘಟ್ಟ: ನಾಲ್ಕು ಗೋಡೆಯ ಮಧ್ಯೆ ಕಲಿಯುವ ಕಲಿಕೆಯ ಜತೆಗೆ ರೈತರ ಒಡನಾಟದಿಂದ ಕಲಿಯುವ ಕಲಿಕೆ ವಿದ್ಯಾರ್ಥಿಗಳ ಬದುಕಿಗೆ ಸಾಕಷ್ಟು ಮೂಲ ದ್ರವ್ಯ ಒದಗಿಸುತ್ತದೆ ಎಂದು ಜಿಕೆವಿಕೆ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎನ್.ಬಿ.ಪ್ರಕಾಶ್ ಅಭಿಪ್ರಾಯಪಟ್ಟರು.

    ತಾಲೂಕಿನ ಬೋದಗೂರಿನಲ್ಲಿ ಬುಧವಾರ ಜಿಕೆವಿಕೆ ಅಂತಿಮ ವರ್ಷದ ಕೃಷಿ ಪದವಿ ವಿದ್ಯಾರ್ಥಿಗಳ 90 ದಿನಗಳ ಗ್ರಾಮೀಣ ಕಾರ್ಯಾನುಭವದ ಕೊನೇ ದಿನದ ಕೃಷಿ ವಸ್ತು ಪ್ರದರ್ಶನ ಮತ್ತು ‘ಬೋದಗೂರು ಕೃಷಿ ಕ್ರಾಂತಿ’ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರೊಂದಿಗೆ ಬೆರೆಯಬೇಕು, ಗ್ರಾಮೀಣ ಪರಿಸ್ಥಿತಿ ಹಾಗೂ ಕೃಷಿ ಸಮಸ್ಯೆಗಳನ್ನು ಅರಿತು ವಿಶ್ಲೇಷಿಸಬೇಕು ಮತ್ತು ಪರಿಹಾರ ಕಂಡುಹಿಡಿಯಲು ಕಾರ್ಯತತ್ಪರರಾಗಬೇಕು ಎಂದು ತಿಳಿಸಿದರು.
    ವಿದ್ಯಾರ್ಥಿಗಳ ಕಾರ್ಯಚಟುವಟಿಕೆಗಳ ಪುಸ್ತಕ ‘ರಾವೆ ದರ್ಪಣ’ ಬಿಡುಗಡೆ ಮಾಡಿದ ಶಿಡ್ಲಘಟ್ಟ ರೇಷ್ಮೆ ಉತ್ಪಾದಕ ಕಂಪೆನಿ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ, ‘ರೈತರಿಂದ ಕಲಿಯುವುದು ಮತ್ತು ಕಲಿಸುವುದು’ ಎಂಬ ೋಷವಾಕ್ಯದ ಕಾರ್ಯಾನುಭವದಲ್ಲಿ ಹಳ್ಳಿಯಲ್ಲೇ ವಾಸ್ತವ್ಯ ಹೂಡಿದ್ದ ವಿದ್ಯಾರ್ಥಿಗಳು ಇಲ್ಲಿನ ಮನೆಮಕ್ಕಳಾಗಿದ್ದಾರೆ.ವಿದ್ಯಾರ್ಥಿಗಳು ಕೇವಲ ಕೃಷಿಯ ಬಗ್ಗೆ ಕಲಿತರೆ ಸಾಲದು, ಗ್ರಾಮೀಣ ಜನರ ಅಂತಃಕರಣ, ವಾತ್ಸಲ್ಯ ಮನೋಭಾವ, ಶ್ರಮ ಜೀವನ ಅಳವಡಿಸಿಕೊಳ್ಳಬೇಕು ಎಂಬ ಸಲಹೆ ನೀಡಿದರು.
    ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು, ಪಶುವೈದ್ಯಾಧಿಕಾರಿ ಡಾ.ಬಿ.ಕೆ.ರಮೇಶ್, ಗ್ರಾಮ ಪಂಚಾಯಿತಿ ಪಿಡಿಒ ಕಾತ್ಯಾಯಿನಿ, ಸದಸ್ಯರಾದ ವಿಜಯೇಂದ್ರ, ವಿಶ್ವಾಸ್, ಸಂತೋಷ್, ಕೃಷಿ ವಿವಿಯ ಡಾ.ಕೆ.ಮುರಳಿಮೋಹನ್, ಡಾ.ಸಿ.ನಾರಾಯಣಸ್ವಾಮಿ, ಡಾ.ಎಸ್.ಗಣೇಶಮೂರ್ತಿ, ಡಾ.ಸಂದೀಪ್, ಡಾ.ಪುಷ್ಪಾ, ಡಾ.ಸವಿತಾ, ಶಿಬಿರಾಧಿಕಾರಿ ಡಾ.ವೈ.ಎನ್.ಶಿವಲಿಂಗಯ್ಯ ಇತರರಿದ್ದರು.

    ಗ್ರಾಮ ವಾಸ್ತವ್ಯದ ಅನುಭವ :90 ದಿನಗಳ ಗ್ರಾಮೀಣ ಕಾರ್ಯಾನುಭವದ ಕೊನೇ ದಿನ ಗ್ರಾಮ ವಾಸದ ಅನುಭವವನ್ನು ವೈವಿಧ್ಯಮಯ ಬೆಳೆ, ವಸ್ತು ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ಬಿತ್ತರಿಸಿದರು. ಬೀಜೋಪಚಾರ, ಎರೆಹುಳುಗೊಬ್ಬರ, ರಸಮೇವಿನ ತಯಾರಿಕೆ, ಕೃಷಿಹೊಂಡ, ನೀರಿನ ಸದ್ಬಳಕೆ ವಿಧಾನ, ಮಣ್ಣಿನ ಫಲವತ್ತತೆ ಕಾಪಾಡುವುದು, ಸೋಲಾರ್ ಶಕ್ತಿಯ ಬಳಕೆ ಕುರಿತು ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಗಿತ್ತು. ವಿದ್ಯಾರ್ಥಿಗಳ ವಿವಿಧ ಮಳಿಗೆಗಳ ಮೂಲಕವೂ ರೈತರಿಗೆ ಮಾಹಿತಿ ನೀಡುವ ಪ್ರಯತ್ನ ನಡೆಸಿದ್ದರು.

    ಕೃಷಿ ಪ್ರದರ್ಶನ: ಸಾಂಪ್ರದಾಯಿಕ ಕೃಷಿ ಉಪಕರಣಗಳ ಪ್ರದರ್ಶನ, ವಿವಿಧ ಬೆಳೆಗಳ ತಳಿಗಳು, ಸಾವಯವ ಉತ್ಪನ್ನಗಳು, ಬೋದಗೂರು ಗ್ರಾಮ ನಕ್ಷೆ, ಗ್ರೀನ್ ಹೌಸ್, ಕೃಷಿ ವಿಶ್ವವಿದ್ಯಾಲಯದ ಕುರಿತು ಮಾಹಿತಿ, ಮನೆಯಲ್ಲೇ ಕುಟುಂಬಕ್ಕೆ ಬೇಕಾದ ತರಕಾರಿ ಬೆಳೆಯುವ ಪ್ರಾತ್ಯಕ್ಷಿಕೆ, ರೋಗಗಳ ಹತೋಟಿ, ಕೃಷಿ ಉತ್ಪನ್ನಗಳಿಂದ ತಯಾರಿಸಬಹುದಾದ ಮೌಲ್ಯವರ್ಧಿತ ಪದಾರ್ಥಗಳು ಮುಂತಾದವುಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts