More

    ವಾಕರಸಾ ಸಂಸ್ಥೆಯಲ್ಲಿ ಆನ್​ಲೈನ್ ಮೂಲಕ ರಜೆ; ಚಾಲಕ, ನಿರ್ವಾಹಕರಿಗೆ ಸಜೆ

    ರಾಜೇಂದ್ರ ಶಿಂಗನಮನೆ ಶಿರಸಿ: ತಂತ್ರಾಂಶ ಆಧಾರಿತ ರಜೆ ಅರ್ಜಿ ನಿರ್ವಹಣಾ ವ್ಯವಸ್ಥೆ (ಎಲ್​ಎಂಎಸ್) ಅನುಷ್ಠಾನದ ಬಳಿಕ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ (ವಾಕರಸಾಸಂ) ಬಸ್ ಚಾಲಕರು, ನಿರ್ವಾಹಕರು ರಜೆಗಾಗಿ ಕಿರುಕುಳ ಅನುಭವಿಸುತ್ತಿದ್ದಾರೆ. ಆನ್​ಲೈನ್ ಮೂಲಕ ರಜೆ ಕೋರಿಕೆ ಸಲ್ಲಿಸಿದರೆ ರಜೆ ಮಂಜೂರಾತಿ ಸಿಗುತ್ತಿಲ್ಲ. ಇದರಿಂದಾಗಿ ನೌಕರರು ಕಂಗಾಲಾಗಿದ್ದಾರೆ.

    ವಾಕರಸಾ ಸಂಸ್ಥೆ ವ್ಯಾಪ್ತಿಯ ಎಲ್ಲ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲಕ, ನಿರ್ವಾಹಕರಿಗೆ ರಜೆ ಸುಲಭವಾಗಿ ದೊರೆಯುವ ಉದ್ದೇಶದಿಂದ ಕಳೆದ ಮೂರ್ನಾಲ್ಕು ತಿಂಗಳಿನಿಂದ ಎಲ್​ಎಂಎಸ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ನೂತನ ವ್ಯವಸ್ಥೆಯು ಚಾಲಕ, ನಿರ್ವಾಹಕರಿಗೆ ಅನುಕೂಲವಾಗುವ ಬದಲು ಇನ್ನಷ್ಟು ಸಮಸ್ಯೆಗೆ ಕಾರಣವಾಗಿದೆ. ರಜೆಗಾಗಿ ಆನ್​ಲೈನ್ ಮೂಲಕ ಕೋರಿಕೆ ಸಲ್ಲಿಸಿದರೆ, ಸ್ಥಳ ಭರ್ತಿಯಾಗಿದೆ ಎಂದು ಮೊಬೈಲ್​ಫೋನ್​ಗೆ ಸಂದೇಶ ಬರುತ್ತಿದೆ. ಇದರಿಂದ ಅನಾರೋಗ್ಯ ಸೇರಿ ಇತರ ಅನಿವಾರ್ಯ ಕಾರಣಗಳಿಂದ ರಜೆಗಾಗಿ ಕಾದು ಕುಳಿತವರು ಪರಿತಪಿಸುವಂತಾಗಿದೆ.

    ಹಲವರಲ್ಲಿ ಆಂಡ್ರಾಯ್್ಡ ಫೋನ್ ಇಲ್ಲ: ಸಂಸ್ಥೆಯ ಪ್ರತಿಯೊಬ್ಬ ಚಾಲಕ ಹಾಗೂ ನಿರ್ವಾಹಕರಿಗೆ ಪ್ರತ್ಯೇಕ ಆನ್​ಲೈನ್ ಅಕೌಂಟ್ ತೆರೆದು ಅವರ ಪಿಎಫ್ ಸಂಖ್ಯೆಯನ್ನೇ ಯೂಸರ್ ಐಡಿ ಮಾಡಿ ಎಲ್ಲರಿಗೂ ಪಾಸ್​ವರ್ಡ್ ಕೊಡಲಾಗಿದೆ. ಈ ಐಡಿ ಬಳಸಿ ಆಂಡ್ರಾಯ್್ಡ ಮೊಬೈಲ್​ಫೋನ್ ಮೂಲಕ ವೆಬ್​ಸೈಟ್ ಆಥವಾ ಕ್ಯೂಎಸ್​ಕೆ ಯಂತ್ರದಲ್ಲಿ ಖಾತೆ ತೆರೆದರೆ ಸಿಎಲ್, ಪಿಎಲ್, ಇಎಲ್ ಹೀಗೆ ವಿವಿಧ ಮಾದರಿಯ ರಜಾ ಸೌಲಭ್ಯಗಳ ಪಟ್ಟಿ ಕಾಣಿಸುತ್ತದೆ. ಬೇಕಾದದ್ದನ್ನು ಆಯ್ಕೆ ಮಾಡಿದ ಬಳಿಕ ದಿನಾಂಕಗಳ ಪಟ್ಟಿ ತೆರೆಯುತ್ತದೆ. ಅಲ್ಲಿ ರಜೆ ದಿನಾಂಕವನ್ನು ನಮೂದಿಸಿ ರಜೆ ಮಂಜೂರಾದರೆ ತಕ್ಷಣ ಅವರ ಮೊಬೈಲ್​ಫೋನ್ ಸಂಖ್ಯೆಗೆ ಸಂಬಂಧಪಟ್ಟ ಸಂದೇಶ ಬರುತ್ತದೆ.

    ಹಿರಿಯ ಅಧಿಕಾರಿಗಳಿಗೂ ಈ ಮಾಹಿತಿ ಹೋಗುತ್ತದೆ. ಆದರೆ, ನಿಗಮ ವ್ಯಾಪ್ತಿಯ ಶೇ. 25ಕ್ಕೂ ಹೆಚ್ಚು ಚಾಲಕ, ನಿರ್ವಾಹಕರರಲ್ಲಿ ಆಂಡ್ರಾಯ್್ಡ ಮೊಬೈಲ್​ಫೋನ್ ಇಲ್ಲ. ಕೆಲವರಿಗೆ ಆಂಡ್ರಾಯ್್ಡ ಫೋನ್ ಬಳಸುವುದು ತಿಳಿದಿಲ್ಲ. ಹೀಗಾಗಿ, ಈ ಸಿಬ್ಬಂದಿಗೆ ರಜೆ ಬೇಕಾದಲ್ಲಿ ತೀವ್ರ ಸಮಸ್ಯೆ ಉಂಟಾಗುತ್ತಿದೆ.

    ಎಲ್​ಎಂಎಸ್ ವ್ಯವಸ್ಥೆಯನ್ನು ನಿಗಮದ ಚಾಲಕ, ನಿರ್ವಾಹಕರಿಗೆ ಮಾತ್ರ ಅನುಷ್ಠಾನಗೊಳಿಸಿದ್ದು, ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಈ ವ್ಯವಸ್ಥೆ ಅನ್ವಯಿಸುವುದಿಲ್ಲ. ರಜೆ ಮಂಜೂರು ವಿಷಯದಲ್ಲಿ ತಾರತಮ್ಯ ಮಾಡುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂಬುದು ನೊಂದ ಚಾಲಕ, ನಿರ್ವಾಹಕರು ದೂರುತ್ತಾರೆ.

    ಒಂದು ದಿನಕ್ಕೆ ನಿಗದಿತ ಸಂಖ್ಯೆಯ ಸಿಬ್ಬಂದಿಗೆ ಮಾತ್ರ ರಜೆ ಕೊಡಲು ವೆಬ್​ಸೈಟ್​ನಲ್ಲಿ ವ್ಯವಸ್ಥೆ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ರಜೆ ನೀಡಲು ಘಟಕ ವ್ಯವಸ್ಥಾಪಕರಿಗೆ ಅವಕಾಶ ಇದೆ. ಆದರೆ, ಪ್ರತಿ ಬಾರಿ ಕೆಲವೇ ಸಿಬ್ಬಂದಿಗೆ ರಜೆ ಸಿಗುತ್ತದೆ. ಉಳಿದಂತೆ ಘಟಕ ವ್ಯವಸ್ಥಾಪಕರ ವಿವೇಚನೆಯ ರಜೆಗಾಗಿ ಕೋರಿಕೆ ಸಲ್ಲಿಸಿದರೆ ಸ್ಪಂದನೆ ಸಿಗುತ್ತಿಲ್ಲ. ಮನೆಯಲ್ಲಿ ಯಾರಾದರೂ ಮರಣ ಹೊಂದಿದ್ದಾರೆಂದು ರಜೆ ಕೋರಿಕೆ ನೀಡಿದರೂ ರಜೆ ಮಂಜೂರಾತಿ ಸಿಗದಂಥ ವ್ಯವಸ್ಥೆಗೆ ಎಲ್​ಎಂಎಸ್ ಕಾರಣವಾಗಿದೆ. ಜತೆಗೆ ಅನಿವಾರ್ಯ ಸಂದರ್ಭಗಳಲ್ಲಿ ರಜೆ ಮಂಜೂರಾತಿ ಸಿಗದಿದ್ದರೂ ಚಾಲಕ, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಗೈರು ಹಾಜರಾತಿ ಎಂದು ಪರಿಗಣಿಸಿ ವೇತನ ಕಡಿತ ಗೊಳಿಸಲಾಗುತ್ತದೆ. ಹೀಗೆ ಕಡಿತಗೊಳಿಸಿದ ಲಕ್ಷಾಂತರ ರೂಪಾಯಿ ಹಣ ಎಲ್ಲಿ ಬಳಕೆಯಾಗುತ್ತಿದೆ? ಯಾರ ಖಾತೆಗೆ ಹಣ ಸೇರುತ್ತಿದೆ? ಎನ್ನುವ ಬಗ್ಗೆ ಸಿಬ್ಬಂದಿಗೆ ಈವರೆಗೂ ಸ್ಪಷ್ಟವಾದ ಮಾಹಿತಿಯಿಲ್ಲ. | ಹೆಸರು ಹೇಳಲಿಚ್ಛಿಸದ ನೊಂದ ನಿರ್ವಾಹಕ

    ಉತ್ತಮ ಕೆಲಸ ಮಾಡುವವರು, ನಿಜವಾಗಿ ಅನಾರೋಗ್ಯಕ್ಕೆ ಒಳಗಾದವರಿಗೆ ನಿಶ್ಚಿತವಾಗಿ ರಜೆ ಮಂಜೂರಾತಿ ಮಾಡಬೇಕು. ಈ ವ್ಯವಸ್ಥೆಯಿಂದ ಹಿರಿಯ ಸಿಬ್ಬಂದಿ ಸೇರಿದಂತೆ ಕೆಲವರಿಗೆ ತೊಂದರೆ ಆಗುತ್ತಿದೆ. ಈ ಬಗ್ಗೆ ಘಟಕ ವ್ಯವಸ್ಥಾಪಕರು ಮಾನವೀಯತೆ ದೃಷ್ಟಿಯಿಂದ ನೋಡಬೇಕು. ರಜೆ ಮಂಜೂರಾತಿಯಲ್ಲಿ ಆಗುತ್ತಿರುವ ತೊಂದರೆ, ಅಧಿಕಾರಿಗಳ ಅಮಾನವೀಯತೆ ಬಗ್ಗೆ ಲಿಖಿತ ದೂರು ನೀಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. | ವಿ.ಎಸ್. ಪಾಟೀಲ ವಾಕರಸಾ ಸಂಸ್ಥೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts