More

    ವಸೂಲಾಗದ ಪಾಲಿಕೆ ತೆರಿಗೆ

    ಬೆಳಗಾವಿ: ಸಿಬ್ಬಂದಿ ಕೊರತೆ, ಆರ್ಥಿಕ ಸಮಸ್ಯೆ, ಚುನಾಯಿತ ಸದಸ್ಯರಿಲ್ಲದೆ ಆಡಳಿತಾತ್ಮಕ ಸಮಸ್ಯೆಗಳಿಂದ ತತ್ತರಿಸಿರುವ ಮಹಾನಗರ ಪಾಲಿಕೆ ಇದೀಗ ತೆರಿಗೆ ವಸೂಲಿ ಆಗದೆ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದೆ. ಕರೊನಾ 2ನೇ ಅಲೆ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರವು ಏಪ್ರಿಲ್ 27 ರಿಂದ ಜೂ.14 ರವರೆಗೆ
    ಲಾಕ್‌ಡೌನ್ ಘೋಷಣೆ ಮಾಡಿದೆ. ಇತ್ತ ಪಾಲಿಕೆ ಸಿಬ್ಬಂದಿ, ಅಧಿಕಾರಿಗಳು ಕರೊನಾ ನಿಯಂತ್ರಣ ಕೆಲಸದಲ್ಲಿ ತೊಡಗಿಸಿಕೊಂಡಿದ್ದರಿಂದ ಮೇ 1ರಿಂದಲೇ ವಿವಿಧ ರೀತಿಯ ತೆರಿಗೆ ವಸೂಲಿ
    ಅರ್ಧದಲ್ಲಿಯೇ ಮೊಟಕುಗೊಂಡಿದೆ.

    ಲಾಕ್‌ಡೌನ್‌ನಿಂದ ಹೊಡೆತ: 2020-21ನೇ ಸಾಲಿನ ಅವಧಿಯಲ್ಲಿ 4.5 ಕೋಟಿ ರೂ. ಹಾಗೂ 2021-22ನೇ ಸಾಲಿನ ಹಣಕಾಸು ವರ್ಷದ ಆರಂಭದ ಏಪ್ರಿಲ್, ಮೇ ನಲ್ಲಿ ವಸೂಲಿ ಮಾಡಬೇಕಿದ್ದ ಸುಮಾರು 3.5 ಕೋಟಿ ರೂ.ತೆರಿಗೆ ವಸೂಲಿ ಬಾಕಿ ಉಳಿದುಕೊಂಡಿದೆ.

    2021-22ನೇ ಸಾಲಿನ ಆರ್ಥಿಕ ವರ್ಷದ ಆಸ್ತಿ ತೆರಿಗೆಯನ್ನು ಏಪ್ರಿಲ್ ತಿಂಗಳಿನಲ್ಲಿ ಪಾವತಿಸಬೇಕಾಗಿರುವವರಿಗೆ ಪಾಲಿಕೆಯು ಶೇ.5 ರಿಯಾಯಿತಿ ನೀಡಿದೆ. ಆದರೂ, ತೆರಿಗೆ ಕಟ್ಟುತ್ತಿಲ್ಲ. ಮಹಾನಗರ ಪಾಲಿಕೆಯು 1.35 ಲಕ್ಷ ಆಸ್ತಿಗಳಿಂದ 2021-22ನೇ ಸಾಲಿನಲ್ಲಿ ಬರೋಬ್ಬರಿ 50 ಕೋಟಿ ರೂ. ತೆರಿಗೆ ವಸೂಲಿ ಗುರಿ ಹಾಕಿಕೊಂಡಿದೆ. ಆದರೆ, ಆರ್ಥಿಕ ವರ್ಷ ಆರಂಭದಲ್ಲಿಯೇ ಕರೊನಾ ಲಾಕ್‌ಡೌನ್‌ನಿಂದಾಗಿ ತೆರಿಗೆ ವಸೂಲಿಗೆ ಭಾರಿ ಹೊಡೆತ ಬಿದ್ದಿದೆ. 2021-22ನೇ ಸಾಲಿನ ಏಪ್ರಿಲ್ ಮತ್ತು ಮೇ ನಲ್ಲಿ 13 ಕೋಟಿ ರೂ. ತೆರಿಗೆ ವಸೂಲಿ ಆಗಿದೆ. ಇನ್ನೂ 3.5 ಕೋಟಿ ರೂ.ತೆರಿಗೆ ವಸೂಲಿ ಬಾಕಿ ಉಳಿದುಕೊಂಡಿದೆ.

    ಆಗ ನೆರೆ, ಈಗ ಕರೊನಾ: 2019ರಲ್ಲಿ ಅತಿವೃಷ್ಟಿ, 2020 ಮತ್ತು 2021 ಕರೊನಾ ಲಾಕ್‌ಡೌನ್‌ನಿಂದಾಗಿ ಮಹಾನಗರ ಪಾಲಿಕೆಗೆ ಕೋಟ್ಯಂತರ ರೂ. ಆರ್ಥಿಕ ನಷ್ಟ ಉಂಟಾಗಿದೆ. 2019-20ನೇ ಸಾಲಿನಲ್ಲಿ 40 ಕೋಟಿ ರೂ. ಆದಾಯ ಸಂಗ್ರಹ ಗುರಿ ಹಾಕಿಕೊಂಡಿತ್ತು. ಆದರೆ, 2019 ಅಕ್ಟೋಬರ್, ನವೆಂಬರ್‌ನಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಬಳ್ಳಾರಿ ನಾಲಾ ಪ್ರವಾಹದಿಂದ ಇದೀಗ ಕರೊನಾ ವೈರಸ್ ಲಾಕ್‌ಡೌನ್‌ನಿಂದಾಗಿ 10 ಕೋಟಿ ರೂ. ವರೆಗೆ ತೆರಿಗೆ ವಸೂಲಿಗೆ ಭಾರಿ ಹೊಡೆತ ಬಿದ್ದಿತ್ತು. ಈ ವರ್ಷ 50 ಕೋಟಿ ರೂ. ತೆರಿಗೆ ವಸೂಲಿ ಗುರಿ ಹಾಕಿಕೊಳ್ಳಲಾಗಿದೆ. ಆದರೆ, ಆರಂಭದಲ್ಲಿಯೇ ತೆರಿಗೆ ವಸೂಲಿಗೆ ಹಿನ್ನಡೆ ಉಂಟಾಗಿದೆ.

    ಪಾಲಿಕೆಗೂ ಗೊಂದಲ: ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿರುವುದರಿಂದ ಎಲ್ಲ ರೀತಿಯ ವ್ಯಾಪಾರ-ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. ತೆರಿಗೆ ಕಟ್ಟಲು ಆನ್‌ಲೈನ್ ಸೌಲಭ್ಯ ಕಲ್ಪಿಸಿದರೂ ತೆರಿಗೆ ಕಟ್ಟಿಲ್ಲ. ತೆರಿಗೆ ಬಾಕಿ ಉಳಿಸಿಕೊಂಡಿರುವವರು ಇದೀಗ ಕರೊನಾ ವೈರಸ್ ಲಾಕ್‌ಡೌನ್ ನೆಪ ಹೇಳುತ್ತಿದ್ದಾರೆ. ಹಾಗಾಗಿ ಅವರಿಗೆಲ್ಲ ಕಾಲಾವಕಾಶ ನೀಡಬೇಕೇ ಅಥವಾ ವಸೂಲಿ ಮಾಡಬೇಕೇ ಎಂಬುದರ ಕುರಿತು ಚರ್ಚಿಸಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

    ಲಾಕ್‌ಡೌನ್ ಘೋಷಿಸಿದ್ದರಿಂದ ವ್ಯಾಪಾರ-ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. ಅಲ್ಲದೆ, ಬೆಳಗಾವಿ ಒನ್ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ಹಾಗಾಗಿ ತೆರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸಂಗ್ರಹವಾಗಿಲ್ಲ. ಕರೊನಾ ನೆಪದಲ್ಲಿ ಜನರು ತೆರಿಗೆ ಕಟ್ಟುತ್ತಿಲ್ಲ.
    | ಎಸ್.ಬಿ.ದೊಡ್ಡಗೌಡರ, ಉಪ ಆಯುಕ್ತ (ಕಂದಾಯ )

    ಕರೊನಾ ಲಾಕ್‌ಡೌನ್ ಹಿನ್ನೆಲೆ ಪಾಲಿಕೆಯ ಕಚೇರಿಗೆ ಬಂದು ಜನರಿಗೆ ತೆರಿಗೆ ಕಟ್ಟಲು ಸಮಸ್ಯೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್ ಸೌಲಭ್ಯದ ಜತೆಗೆ ಶೇ.5 ರಿಯಾಯಿತಿ ನೀಡಲಾಗಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ವಸೂಲಿ ಆಗುತ್ತಿಲ್ಲ.
    | ಜಗದೀಶ ಕೆ.ಎಚ್. ಮಹಾನಗರ ಪಾಲಿಕೆ ಆಯುಕ್ತ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts