More

    ವಸತಿ ಸೌಲಭ್ಯ ಕಲ್ಪಿಸಿ

    ಬೆಳಗಾವಿ: ನದಿಗಳ ಪ್ರವಾಹ, ಧಾರಾಕಾರ ಮಳೆಯಿಂದ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗೋಕಾಕ, ಮೂಡಲಗಿ ತಾಲೂಕಿನ ವಿವಿಧ ಗ್ರಾಮಸ್ಥರು ಸೋಮವಾರ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಘಟಪ್ರಭಾ ನದಿಯ ಪ್ರವಾಹದಿಂದಾಗಿ 2019ರಲ್ಲಿ ನದಿ ದಡದ ಗ್ರಾಮಗಳಲ್ಲಿ ಬಡವರು, ಕೂಲಿ ಕಾರ್ಮಿಕರು ವಾಸಿಸುವ ಮನೆಗಳು ಸಂಪೂರ್ಣ ಕುಸಿದು ಬಿದ್ದಿವೆ. ಕೆಲ ಮನೆಗಳು ಹಾನಿಯಾಗಿವೆ. ಆದರೆ, ಮನೆ ಕಳೆದುಕೊಂಡ ಸಂತ್ರಸ್ತರಿಗೆ ಎರಡು ವರ್ಷ ಕಳೆದರೂ ಪರಿಹಾರ ಧನ ನೀಡಿಲ್ಲ. ಅನರ್ಹ ಸಂತ್ರಸ್ತರಿಗೆ ಸರ್ಕಾರಿ ಮನೆಗಳನ್ನು ಮತ್ತು ಪರಿಹಾರ ಹಂಚಿಕೆ ಮಾಡಲಾಗಿದೆ ಎಂದು ಗ್ರಾಮಸ್ಥರು ದೂರಿದರು.

    ಗೋಕಾಕ, ಮೂಡಲಗಿ ತಾಲೂಕು ತಹಸೀಲ್ದಾರ್, ಗ್ರಾಮ ಲೆಕ್ಕಾಧಿಕಾರಿ, ಗ್ರಾಪಂ ಅಧಿಕಾರಿಗಳು ಹಾನಿಯಾದ ಮನೆಗಳಿಗೆ ಪರಿಹಾರ ನೀಡಿಲ್ಲ. ಬದಲಾಗಿ ಹಾನಿ ಹಣ ಕೊಟ್ಟವರಿಗೆ, ಪ್ರಭಾವಿ ವ್ಯಕ್ತಿಗಳಿಗೆ ಮನೆಗಳನ್ನು ಹಂಚಿಕೆ ಮಾಡಿದ್ದಾರೆ. ಇದರಿಂದಾಗಿ ಮನೆ ಕಳೆದುಕೊಂಡಿರುವ ಅರ್ಹ ಸಂತ್ರಸ್ತರಿಗೆ ಇಲ್ಲಿಯವರೆಗೆ ಪರಿಹಾರ ಸಿಕ್ಕಿಲ್ಲ. ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ವಾಸಿಸುವ ವ್ಯಕ್ತಿಗಳ ಹೆಸರಿನಲ್ಲಿ ಮನೆಗಳನ್ನು ಹಂಚಿಕೆ ಮಾಡಿದ್ದಾರೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಹಾಗಾಗಿ, ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    2019ರ ಪ್ರವಾಹ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಸಂತ್ರಸ್ತರ ಹೆಸರಿನಲ್ಲಿ ರಾಜಕೀಯ ಪಕ್ಷದ ಕಾರ್ಯಕರ್ತರಿಗೆ, ಗ್ರಾಪಂ ಸದಸ್ಯರಿಗೆ, ಶಾಸಕರ ಬೆಂಬಲಿಗರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿದ್ದಾರೆ. ಅಲ್ಲದೆ, ನೆರೆ ಪರಿಹಾರ ವಿತರಣೆಯಲ್ಲಿಯೂ ಕಮಿಷನ್ ಪಡೆದು ಸೌಲಭ್ಯ ಕಲ್ಪಿಸಲಾಗುತ್ತಿದೆ. ಹಾಗಾಗಿ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ತನಿಖೆ ನಡೆಸಿ ಅರ್ಹ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ತುಕ್ಕಾನಟ್ಟಿ, ತಳಕಟ್ಟನಾಳ, ಅವರಾದಿ, ಯಾದವಾಡ, ಅರಳಿಮಟ್ಟಿ, ಢವಳೇಶ್ವರ, ಪಿ.ಜಿ.ಹುಣಶ್ಯಾಳ, ತಿಗಡಿ, ಸುಣಧೋಳಿ, ಮಸಗುಪ್ಪಿ, ಬಳೋಬಾಳ, ಮಾಲದಿನ್ನಿ ಸೇರಿ ವಿವಿಧ ಗ್ರಾಮಗಳ ಸಂತ್ರಸ್ತರು ವಿನಂತಿಸಿದರು. ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ, ಸಂಜು ಬಾಗೇವಾಡಿ, ರುದ್ರಗೌಡ ಪಾಟೀಲ, ಅಲ್ಲಪ್ಪ ಮದಗುಣಕಿ, ಈರಣ್ಣ ಕೊಣ್ಣೂರ, ಮಲ್ಲಪ್ಪ ತೇರಳದಾಳ, ಚನ್ನಪ್ಪ ಅಥಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts