More

    ವಸತಿ ಶಾಲೆಗಳಲ್ಲಿ ಸ್ಥಳೀಯರಿಗೆ ಮೀಸಲು

    ರಾಣೆಬೆನ್ನೂರ: ವಸತಿಯುತ ಶಾಲೆಗಳಲ್ಲಿ ಶೇ. 25ರಷ್ಟು ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರವೇಶ ಮೀಸಲಿಡುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಮಾತನಾಡಿ ಶೀಘ್ರದಲ್ಲಿಯೇ ಆದೇಶ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

    ನಗರ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಕಿತ್ತೂರು ರಾಣಿ ಚನ್ನಮ್ಮ, ಮುರಾರ್ಜಿ, ಇಂದಿರಾಗಾಂಧಿ ವಸತಿ ಶಾಲೆಗಳು ಸೇರಿ ಸರ್ಕಾರಿ ವಸತಿ ಶಾಲೆಗಳ ಶಿಕ್ಷಣ ಹಾಗೂ ಸೇವೆಯಿಂದ ಆಯಾ ಸ್ಥಳೀಯ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತನಾಡಿ ಶೀಘ್ರದಲ್ಲಿಯೇ ವಸತಿ ಶಾಲೆಗಳಲ್ಲಿ ಆಯಾ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ. 25ರಷ್ಟು ಮೀಸಲಾತಿ ನೀಡುವ ಕುರಿತು ಆದೇಶ ಹೊರಡಿಸಲಾಗುವುದು ಎಂದರು.

    ರಾಣೆಬೆನ್ನೂರ ಸಂಪೂರ್ಣ ನೀರಾವರಿ: ತುಂಗಾ ಮೇಲ್ದಂಡೆ ಯೋಜನೆಯಿಂದಾಗಿ ರಾಣೆಬೆನ್ನೂರಿನ 50 ಸಾವಿರ ಹೆಕ್ಟೇರ್ ಕೃಷಿ ಪ್ರದೇಶ ಈಗಾಗಲೇ ನೀರಾವರಿ ಹೊಂದಿದೆ. ಶಾಸಕ ಅರುಣಕುಮಾರ ಪೂಜಾರ ಇಡೀ ರಾಣೆಬೆನ್ನೂರ ಕೃಷಿ ಪ್ರದೇಶವನ್ನು ನೀರಾವರಿ ಮಾಡುವ ಕನಸು ಕಂಡಿದ್ದಾರೆ. ಅದರಂತೆ ಮೆಡ್ಲೇರಿ ಹಾಗೂ ಹೊಳೆ ಆನ್ವೇರಿ ಏತ ನೀರಾವರಿ ಯೋಜನೆಗೆ ಈಗಾಗಲೇ ನೀರಾವರಿ ಇಲಾಖೆಯಿಂದ ಅನುಮೋದನೆ ದೊರೆತಿದೆ. ಹಣಕಾಸು ವಿಭಾಗದಿಂದ ಹಣ ಬಿಡುಗಡೆ ಮಾತ್ರ ಬಾಕಿಯಿದ್ದು, ಶೀಘ್ರದಲ್ಲಿಯೇ ಬಿ.ಎಸ್. ಯಡಿಯೂರಪ್ಪ ಅವರನ್ನು ಕರೆತಂದು ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

    ಜಿಲ್ಲೆಯ ಸಂಪೂರ್ಣ ಅಭಿವೃದ್ಧಿ ಕುರಿತ ವಿಜನ್ ಡಾಕ್ಯುಮೆಂಟ್ ಸಿದ್ಧಪಡಿಸಲು ಸೂಚಿಸಿದ್ದೇನೆ. ಅದರಲ್ಲಿ ರಾಣೆಬೆನ್ನೂರಿಗೆ ವಿಶೇಷ ಆದ್ಯತೆ ನೀಡಿ ಆಶ್ರಯ ಮನೆ, ರಸ್ತೆ ನಿರ್ಮಾಣ ಸೇರಿ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲು ಹೇಳಿದ್ದೇನೆ. ನಗರಸಭೆ ಗುತ್ತಿಗೆ ಆಧಾರದ ಪೌರ ಕಾರ್ವಿುಕರು ಸಹ ಆಶ್ರಯ ಮನೆ ನಿರ್ವಿುಸಿಕೊಡಲು ಮನವಿ ಮಾಡಿದ್ದು, ಮುಂದಿನ ದಿನದಲ್ಲಿ ಅವರಿಗೂ ಸೂರು ಕಲ್ಪಿಸಲಾಗುವುದು ಎಂದರು.

    ಗ್ರಾಮೀಣ ಅಭಿವೃದ್ಧಿಯಾದರೆ ಸರ್ಕಾರ ಆರ್ಥಿಕವಾಗಿ ಸದೃಢವಾಗಲಿದೆ. ಆದ್ದರಿಂದ ಗ್ರಾಮೀಣರಿಗೆ ಸುಲಭವಾಗಿ ಸಾಲ ದೊರೆಯುವಂತೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ತರುವುದಿದೆ. ಈ ಕುರಿತು ಸರ್ಕಾರದ ಹಂತದಲ್ಲಿ ಚಿಂತನೆ ನಡೆದಿದೆ ಎಂದರು. ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಕೋಡಿಯಾಲ-ಹೊಸಪೇಟೆ ರಾಜ್ಯ ಹೆದ್ದಾರಿಯನ್ನು ಕಾಂಕ್ರೀಟ್ ಚತುಷ್ಪಥ ರಸ್ತೆಯನ್ನಾಗಿ ಮಾಡುವ ಬಗ್ಗೆ ಉಪ ಚುನಾವಣೆ ಸಮಯದಲ್ಲಿ ಮಾತು ಕೊಟ್ಟಿದ್ದೆ. ಅದರಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು 14 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ವಣಕ್ಕೆ ಅನುದಾನ ನೀಡಿದ್ದಾರೆ. ಮೊದಲ ಹಂತವಾಗಿ 5 ಕೋಟಿ ರೂ. ಬಿಡುಗಡೆ ಮಾಡಿದ್ದು, ಕಾಮಗಾರಿ ಆರಂಭಿಸುವ ಮೂಲಕ ಜನತೆಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಮುಂದಿನ ದಿನದಲ್ಲಿ ನೀರಾವರಿ, ರಸ್ತೆಗಳ ವಿಸ್ತರಣೆ ಸೇರಿ ನಾನಾ ಬಗೆಯ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ ಎಂದರು.

    ವಿಧಾನ ಪರಿಷತ್ ಸದಸ್ಯ ಆರ್. ಶಂಕರ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ, ಜಿಪಂ ಅಧ್ಯಕ್ಷ ಏಕನಾಥ ಭಾನುವಳ್ಳಿ, ಸದಸ್ಯೆ ಮಂಗಳಗೌರಿ ಪೂಜಾರ, ತಾಪಂ ಅಧ್ಯಕ್ಷೆ ಗೀತಾ ಲಮಾಣಿ, ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಪ್ರಮುಖರಾದ ಮಂಜುನಾಥ ಓಲೇಕಾರ, ರಾಘವೇಂದ್ರ ಚಿನ್ನಿಕಟ್ಟಿ, ಪ್ರಕಾಶ ಬುರಡಿಕಟ್ಟಿ ಇತರರು ಪಾಲ್ಗೊಂಡಿದ್ದರು.

    ದೇವರಗುಡ್ಡಕ್ಕೆ ಸೌಕರ್ಯ

    ದೇವರಗುಡ್ಡ ಅಭಿವೃದ್ಧಿ ಪ್ರಾಧಿಕಾರ ರಚನೆ ಏನಾಗಿದೆ ಹಾಗೂ ಯಾವ ಹಂತದಲ್ಲಿದೆ ಎಂಬುದನ್ನು ತಿಳಿದು ಪ್ರಾಧಿಕಾರ ಜಾರಿಗೆ ಪ್ರಯತ್ನ ಮಾಡುತ್ತೇನೆ. ಅದರ ಮೂಲಕ ದೇವರಗುಡ್ಡದಲ್ಲಿ ಶೌಚಗೃಹ, ವಸತಿ ಕಟ್ಟಡ ಹಾಗೂ ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

    ವಿವಿಧ ಕಾಮಗಾರಿಗೆ ಚಾಲನೆ

    ಕೋಡಿಯಾಲ ಗ್ರಾಮದ ರಾಜ್ಯ ಹೆದ್ದಾರಿ ಚತುಷ್ಟಥ ಕಾಂಕ್ರೀಟ್ ರಸ್ತೆ ನಿರ್ವಣ, ನಗರಸಭೆ ಪೌರಕಾರ್ವಿುಕರ ಗೃಹ ಭಾಗ್ಯ ಯೋಜನೆಯ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ, ಡಾ. ಬಾಬು ಜಗಜೀವನರಾಂ ಭವನ ಉದ್ಘಾಟನೆ, ಅಡವಿ ಆಂಜನೇಯ ಬಡಾವಣೆಯಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ವಿವಿಧ ಕಾಮಗಾರಿಗೆ ಚಾಲನೆ, ಸಿದ್ಧಾರೂಢ ನಗರದ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಉದ್ಘಾಟನೆ ಹಾಗೂ ಸಮಾಜದ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಸತಿ ನಿಲಯ ಉದ್ಘಾಟನೆ, ಹುಣಸೆಕಟ್ಟಿ ರಸ್ತೆಯ ಅಲ್ಪಸಂಖ್ಯಾತರ ಬಾಲಕರ ವಸತಿ ನಿಲಯ ಉದ್ಘಾಟನೆ, ತಾಲೂಕಿನ ಹಿರೇಬಿದರಿ ಗ್ರಾಮದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಕಟ್ಟಡ ನಿರ್ವಣಕ್ಕೆ ಶಂಕುಸ್ಥಾಪನೆ, ದೇವರಗುಡ್ಡ ಗ್ರಾಮದಲ್ಲಿ ಇಂದಿರಾಗಾಂಧಿ ವಸತಿ ಶಾಲೆ ನಿರ್ವಣಕ್ಕೆ ಶಂಕುಸ್ಥಾಪನೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ಅರುಣಕುಮಾರ ಪೂಜಾರ ಚಾಲನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts