More

    ವರ್ಷ ಕಳೆದರೂ ಸಿಗದ ಸೂರು!

    ಎಂ.ಎಸ್. ಹಿರೇಮಠ ಸಂಶಿ

    ಕಳೆದ ವರ್ಷ ಸುರಿದ ಧಾರಾಕಾರ ಮಳೆಯಿಂದ ಉಂಟಾದ ನೆರೆಗೆ ಗ್ರಾಮದ ಎಂಟು ಕುಟುಂಬಗಳು ಅಕ್ಷರಶಃ ತತ್ತರಿಸಿ ಹೋಗಿವೆ. ಮನೆ ಕಳೆದುಕೊಂಡು ಒಂದು ವರ್ಷ ಕಳೆಯುತ್ತ ಬಂದರೂ ಸಂತ್ರಸ್ತರ ಗೋಳು ಮಾತ್ರ ಯಾರೂ ಕೇಳುತ್ತಿಲ್ಲ.

    ಎಡೆಬಿಡದೆ ಸುರಿದ ಮಳೆಯಿಂದಾಗಿ 2019ರ ಅಕ್ಟೋಬರ್ 22ರಂದು ಗ್ರಾಮದ ಅಳ್ಳಿಗೆರೆಯಲ್ಲಿ ಸಂಗ್ರಹವಾದ ಭಾರಿ ಪ್ರಮಾಣದ ಮಳೆ ನೀರಿನಿಂದ 8 ಕ್ಕೂ ಹೆಚ್ಚು ಮನೆಗಳು ಜಲಾವೃತ್ತಗೊಂಡಿದ್ದವು. ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿ ಮನೆ ಕಳೆದುಕೊಂಡ ಕುಟುಂಬಗಳು ಹುಬ್ಬಳ್ಳಿ- ಲಕ್ಷೆ್ಮೕಶ್ವರ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ತಡೆದು ದಿಢೀರ್ ಪ್ರತಿಭಟನೆ ಕೈಗೊಂಡಿದ್ದರು. ಆಗ ಸ್ಥಳಕ್ಕೆ ಬಂದ ಅಧಿಕಾರಿಗಳು, ಜನಪ್ರತಿನಿಧಿಗಳು ಇಲ್ಲಿನ ಎಪಿಎಂಸಿ ಮಳಿಗೆಗಳಲ್ಲಿ ಪುನರ್ವಸತಿ ವ್ಯವಸ್ಥೆ ಕಲ್ಪಿಸಿದ್ದರು. ನೆರೆ ಬಂದಾಗ ಶಾಸಕಿ ಕುಸುಮಾವತಿ ಶಿವಳ್ಳಿ ಸೇರಿ ವಿವಿಧ ಜನಪ್ರತಿನಿಧಿಗಳು ಗ್ರಾಮದ ಸಂತ್ರಸ್ತರನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿ, ನಾವು ನಿಮ್ಮೊಂದಿಗಿದ್ದೇವೆ ಎಂದು ಭರವಸೆ ನೀಡಿದ್ದರು. ಆದರೀಗ ಆ ಅಧಿಕಾರಿಗಳು, ಜನಪ್ರತಿನಿಧಿಗಳು ವರ್ಷ ಕಳೆದರೂ ಇತ್ತ ಕಡೆ ನೋಡಿಲ್ಲ. ಮೂಲಸೌಕರ್ಯಗಳ ಕೊರತೆ ಮಧ್ಯೆ ಸಂತ್ರಸ್ತರು ಎಪಿಎಂಸಿ ಮಳಿಗೆಗಳಲ್ಲೇ ದಿನದೂಡುವಂತಾಗಿದೆ.

    ಸಂತ್ರಸ್ತರಿಗೆ ಗ್ರಾಪಂನಿಂದ ಆಶ್ರಯ ವ್ಯವಸ್ಥೆ ಕಲ್ಪಿಸಲಾಗುವುದು, ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗುವುದು, ಹೀಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಭರವಸೆ ನೀಡಿ ಒಂದು ವರ್ಷ ದಿನ ದೂಡಿದರು ಎಂದು ಸಂತ್ರಸ್ತೆ ಪದ್ಮವ್ವ ಕಮಡೊಳ್ಳಿ ಅಸಹಾಯಕತೆ ವ್ಯಕ್ತಪಡಿಸಿದರು.

    ಮಳಿಗೆ ತೆರವಿಗೆ ಎಪಿಎಂಸಿ ಅಧಿಕಾರಿಗಳ ಒತ್ತಡ: ಮಳಿಗೆಗಳನ್ನು ಖಾಲಿ ಮಾಡುವಂತೆ ಇಲ್ಲಿ ವಾಸಿಸುತ್ತಿರುವ ಸಂತ್ರಸ್ತರಿಗೆ ಎಪಿಎಂಸಿ ಅಧಿಕಾರಿಗಳು ಪದೆಪದೇ ಹೇಳುತ್ತಿದ್ದಾರೆ. ಹೀಗಾಗಿ ನಮಗೆ ಏನಾದರೂ ಮಾಡಿ ಸೂರು ಒದಗಿಸಿ ಪುಣ್ಯ ಕಟ್ಕೊಳ್ರೀ ಎಂದು ಸಂತ್ರಸ್ತರು ಅಳಲು ತೊಡಿಕೊಂಡಿದ್ದಾರೆ.

    ಸಂಶಿ ಎಪಿಎಂಸಿಯಲ್ಲಿರುವ ಸಂತ್ರಸ್ತರ ಸಮಸ್ಯೆ ಬಗ್ಗೆ ಈಗಾಗಲೆ ಮಾಹಿತಿ ಪಡೆದಿದ್ದೇನೆ. ಈ ಕುರಿತು ಸೆ. 18ರಂದು ಕುಂದಗೋಳದಲ್ಲಿ ಅಕ್ರಮ- ಸಕ್ರಮ ಕುರಿತು ಸಭೆ ಕರೆಯಲಾಗಿದೆ. ಅಧಿಕಾರಿಗಳ ಜತೆ ರ್ಚಚಿಸಿ ಸೂಕ್ತ ತಿರ್ವನ ಕೈಗೊಂಡು ಸಂತ್ರಸ್ತರಿಗೆ ನಿವೇಶನ ಒದಗಿಸಲಾಗುವುದು. ಸಂತ್ರಸ್ತರಿಗೆ ಇನ್ನಷ್ಟು ದಿನ ಇರಲು ಅವಕಾಶ ನೀಡುವಂತೆ ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
    | ಕುಸುಮಾವತಿ ಶಿವಳ್ಳಿ ಶಾಸಕಿ

    ಎಪಿಎಂಸಿಯಲ್ಲಿರುವ ಸಂತ್ರಸ್ತರಿಗೆ ಸೂರು ಕಲ್ಪಿಸಲು ಗ್ರಾಪಂ ಮಟ್ಟದಲ್ಲಿ ಹಲವಾರು ತೊಡಕುಗಳಿವೆ. ಜತೆಗೊಂದಿಷ್ಟು ತಾಂತ್ರಿಕ ತೊಂದರೆಗಳಿವೆ. ಗ್ರಾಪಂ ಮತ್ತು ತಾಪಂ ಸಹ ಆಸಕ್ತಿ ವಹಿಸಬೇಕು. ಈ ಕುರಿತು ಶಾಸಕರೊಂದಿಗೆ ರ್ಚಚಿಸಲಾಗಿದೆ.
    | ಬಸವರಾಜ ಮೆಳವಂಕಿ ತಹಸೀಲ್ದಾರ್

    ನೆರೆಯಿಂದ ಮನೆ ಕಳೆದುಕೊಂಡು ವರ್ಷ ಗತಿಸಿದೆ. ಸಂತ್ರಸ್ತರಿಗೆ ಈವರೆಗೆ ಜಾಗ ಅಥವಾ ಸೂರು ಒದಗಿಸಿಲ್ಲ. ಇಂದಿಗೂ ಎಪಿಎಂಸಿ ಮಳಿಗೆಗಳಲ್ಲೇ ಸಂತ್ರಸ್ತರು ದಿನ ಕಳೆಯುವಂತಾಗಿದೆ. ಶಾಸಕರು, ಜಿ.ಪಂ ಸದಸ್ಯರು ಹಾಗೂ ಅಧಿಕಾರಿಗಳು ಮುತುವರ್ಜಿ ವಹಿಸಿ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಒದಗಿಸಬೇಕು.
    | ಆರ್.ಎನ್. ಪಾಟೀಲ ಜಿಪಂ ಮಾಜಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts