More

    ವರ್ಷ ಕಳೆದರೂ ದುರಸ್ತಿಯಾಗದ ಸೇತುವೆ

    ಮುಂಡರಗಿ: ತಾಲೂಕಿನ ಹಮ್ಮಿಗಿ-ಗುಮ್ಮಗೋಳ ಮಧ್ಯದ ಹಳ್ಳಕ್ಕೆ ಅಡ್ಡಲಾಗಿ ನಿರ್ವಿುಸಲಾದ ಕಿರು ಸೇತುವೆಯ ತಡೆಗೋಡೆ ಕುಸಿದು ವರ್ಷ ಕಳೆದರೂ ದುರಸ್ತಿಯಾಗಿಲ್ಲ.

    ಸಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜ್ ಬಳಿ ಹಮ್ಮಿಗಿ-ಗುಮ್ಮಗೋಳ ಮಧ್ಯದ ಕಿರು ಸೇತುವೆಯು 2019ರ ಆಗಸ್ಟ್​ನಲ್ಲಿ ಸುರಿದ ಭಾರಿ ಮಳೆ ಹಾಗೂ ಬ್ಯಾರೇಜ್ ಹಿನ್ನೀರಿನ ರಭಸಕ್ಕೆ ಸೇತುವೆಯ ತಡೆಗೋಡೆ ಕುಸಿದಿದೆ. ಈ ಸೇತುವೆ ಬಳಿಯೇ ಬ್ಯಾರೇಜ್​ನ ಹಿನ್ನೀರು ಹೆಚ್ಚಾಗಿ ಸಂಗ್ರಹವಾಗಿರುತ್ತದೆ. ತಡೆಗೋಡೆ ಕುಸಿದಿದ್ದರಿಂದ ಕ್ರಮೇಣ ಸೇತುವೆಯೂ ಕಿರಿದಾಗುತ್ತಿದ್ದು ವಾಹನ ಸವಾರರಲ್ಲಿ ಆತಂಕ ಹೆಚ್ಚಿಸಿದೆ. ಹೀಗಾಗಿ ಬೃಹತ್ ವಾಹನಗಳನ್ನು ಹೊರತುಪಡಿಸಿ ಸಣ್ಣ ವಾಹನಗಳು ಮಾತ್ರ ಸಂಚರಿಸುತ್ತಿವೆ. ಸೇತುವೆಯ ಪಕ್ಕದಲ್ಲಿ 10 ರಿಂದ 12 ಅಡಿ ಆಳ ನೀರು ನಿಂತಿರುವುದರಿಂದ ಯಾವ ಸಂದರ್ಭದಲ್ಲಾದರೂ ಇಡೀ ಸೇತುವೆ ಮುಳುಗುವ ಭೀತಿ ಉಂಟಾಗಿದೆ.

    ಮುಂಡರಗಿಯಿಂದ ಹಮ್ಮಿಗಿ ಮಾರ್ಗವಾಗಿ ನೇರವಾಗಿ ಗುಮ್ಮಗೋಳಕ್ಕೆ ಹೋಗುತ್ತಿದ್ದ ಸರ್ಕಾರಿ ಬಸ್ ಒಂದು ವರ್ಷದಿಂದ ಜಾಲವಾಡಗಿ, ಮುಂಡವಾಡ ಮಾರ್ಗವಾಗಿ ಸುಮಾರು 16 ಕಿಲೋ ಮೀಟರ್ ಸುತ್ತಾಕಿ ಗುಮ್ಮಗೋಳಕ್ಕೆ ಹೋಗುತ್ತಿವೆ. ದ್ವಿಚಕ್ರ ವಾಹನಗಳು ಮಾತ್ರ ಸೇತುವೆ ಮಾರ್ಗದಲ್ಲಿ ಸಂಚರಿಸುತ್ತಿವೆ. ಅನಿವಾರ್ಯ ಸಂದರ್ಭದಲ್ಲಿ ಕೆಲವು ಟ್ರ್ಯಾಕ್ಟರ್​ಗಳು ಸಂಚರಿಸುತ್ತವೆ.

    ಗುಮ್ಮಗೋಳ ಗ್ರಾಮಸ್ಥರು ಅನಾರೋಗ್ಯಕ್ಕೀಡಾದರೆ ಹಮ್ಮಿಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುತ್ತಾರೆ. ಸೇತುವೆ ಮಾರ್ಗದಲ್ಲಿ ಹೋದರೆ ಕೇವಲ 4ಕಿ.ಮೀ. ಆದರೆ, ಗುಮ್ಮಗೋಳದಿಂದ ಮುಂಡವಾಡ, ಜಾಲವಾಡಗಿ ಮಾರ್ಗವಾಗಿ ಹಮ್ಮಿಗಿ ಗ್ರಾಮಕ್ಕೆ ತೆರಳಬೇಕಾದರೆ ಸುಮಾರು 20 ಕಿ.ಮೀ. ಸುತ್ತು ಹಾಕಬೇಕಾಗಿದೆ. ಈ ಭಾಗದಿಂದ ಗುಮ್ಮಗೋಳ, ಹಮ್ಮಿಗಿ ರೈತರು ತಮ್ಮ ಜಮೀನುಗಳಿಗೆ ಹೋಗುವುದು ಕಷ್ಟವಾಗಿದೆ.

    ಹಮ್ಮಿಗಿ-ಗುಮ್ಮಗೋಳ ಮಧ್ಯದ ಸೇತುವೆ ದುರಸ್ತಿಗೊಳಿಸುವಂತೆ ಹಲವಾರು ಸಲ ಅಧಿಕಾರಿಗಳಿಗೆ ಒತ್ತಾಯಿಸಲಾಗಿದೆ. ಬ್ಯಾರೇಜ್ ಹಿನ್ನೀರು ನಿಲ್ಲುವುದರಿಂದ ಸೇತುವೆಗೆ ಸಮಸ್ಯೆಯಾಗಿದೆ. ಎತ್ತರದಲ್ಲಿ ಬೃಹತ್ ಸೇತುವೆ ನಿರ್ವಿುಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲಕ ಕಲ್ಪಿಸಬೇಕು.
    | ಬಿ.ಎನ್. ಪಾಟೀಲ, ಗುರುಬಸಯ್ಯ ಹಿರೇಮಠ, ಗುಮ್ಮಗೋಳ ಗ್ರಾಮಸ್ಥರು.

    ಹಮ್ಮಿಗಿ-ಗುಮ್ಮಗೋಳ ಮಧ್ಯದ ಸೇತುವೆ ಬಳಿಯಲ್ಲಿ ಬ್ಯಾರೇಜ್ ಹಿನ್ನೀರು ನಿಲ್ಲುತ್ತದೆ. ಹೀಗಾಗಿ ರಸ್ತೆಯನ್ನು ಎತ್ತರಿಸುವುದರ ಜತೆಗೆ ಸೇತುವೆಯನ್ನು ಪುನರ್ ನಿರ್ಮಾಣ ಮಾಡಲು ಪರಿಸ್ಕೃತ ಯೋಜನಾ ವರದಿಯಲ್ಲಿ ಸೇರಿಸಲಾಗಿದೆ. ಸರ್ಕಾರದಿಂದ ಅನುಮೋದನೆ ಪಡೆದು ಕಾಮಗಾರಿ ಕೈಗೊಳ್ಳಲಾಗುತ್ತದೆ.
    | ವಿನಯಕುಮಾರ ಬಿ.ಎಂ, ಸಿಂಗಟಾಲೂರ ಏತ ನೀರಾವರಿ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts