More

    ವರ್ಷವಾದರೂ ಶುರುವಾಗಿಲ್ಲ ಡಿಸ್ಪೆನ್ಸರಿ

    ಸುಭಾಸ ಧೂಪದಹೊಂಡ ಕಾರವಾರ

    ಕಾರ್ವಿುಕ ಸಚಿವರ ತವರಿನಲ್ಲೇ ಕಾರ್ವಿುಕರು ಆರೋಗ್ಯ ಸೌಲಭ್ಯಕ್ಕಾಗಿ ಪರದಾಡಬೇಕಿದೆ.

    ನಗರದಲ್ಲಿ ನೌಕರರ ರಾಜ್ಯ ವಿಮಾ ನಿಗಮದ (ಇಎಸ್​ಐ) ಡಿಸ್ಪೆನ್ಸರಿ ಕಳೆದ ವರ್ಷವೇ ಮಂಜೂರಾಗಿದ್ದರೂ, ವೈದ್ಯರಿಲ್ಲದೆ ಸೇವೆ ಪ್ರಾರಂಭವಾಗಿಲ್ಲ. ಶಿರಸಿ ಹಾಗೂ ಕುಮಟಾಕ್ಕೆ ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆಗಳು ಮಂಜೂರಾಗಿದ್ದರೂ ಅವೂ ಬಾಗಿಲು ತೆರೆದಿಲ್ಲ.

    ಕಾರವಾರ ಭಾಗದ ಜನರ ಬಹು ದಿನದ ಬೇಡಿಕೆಯ ಮೇರೆಗೆ 2019 ರ ಸೆಪ್ಟೆಂಬರ್​ನಲ್ಲೇ ಶಾಖಾ ಕಚೇರಿಯನ್ನು ಹಬ್ಬುವಾಡ ರಸ್ತೆಯ ವಿಶ್ವನಾಥ ಕಾಂಪ್ಲೆಕ್ಸ್​ನಲ್ಲಿ ತೆರೆಯಲಾಗಿದೆ. ಕೇಂದ್ರ ಕಾರ್ವಿುಕ ಇಲಾಖೆಯಿಂದ ಪೂರ್ಣ ಪ್ರಮಾಣದ ಡಿಸ್ಪೆನ್ಸರಿ, ಅಲ್ಲಿ ಕಾರ್ಯನಿರ್ವಹಿಸಲು ಒಬ್ಬ ವೈದ್ಯ, ಒಬ್ಬ ನರ್ಸ್ ಹಾಗೂ ಒಬ್ಬ ಫಾರ್ಮಸಿಸ್ಟ್ ಹುದ್ದೆಗಳು ಮಂಜೂರಾಗಿವೆ. ಡಿಸ್ಪೆನ್ಸರಿ ತೆರೆಯಲು ಮಾಸಿಕ ಲಕ್ಷಾಂತರ ರೂ. ಬಾಡಿಗೆ ನೀಡಿ ಬೃಹತ್ ಕಟ್ಟಡವನ್ನು ಪಡೆಯಲಾಗಿದೆ. ಆದರೆ, ವೈದ್ಯರ ಕೊರತೆ ಎಂಬ ಕಾರಣಕ್ಕೆ 9 ತಿಂಗಳು ಕಳೆದರೂ ಇದುವರೆಗೂ ಡಿಸ್ಪೆನ್ಸರಿ ಮಾತ್ರ ಕಾರ್ಯನಿರ್ವಹಿಸುತ್ತಿಲ್ಲ. ಶಾಖಾ ಕಚೇರಿ ಹಾಗೂ ಡಿಸ್ಪೆನ್ಸರಿ ಪ್ರಾರಂಭವಾದ ಬಗ್ಗೆ ದೊಡ್ಡ ಬೋರ್ಡ್ ಕೂಡ ಹಾಕಿಲ್ಲ. ವಾರದಲ್ಲಿ ಎರಡು ದಿನ ದಾಂಡೇಲಿಯಿಂದ ಕ್ಲರಿಕಲ್ ಸಿಬ್ಬಂದಿ ಬಂದು ಈ ಭಾಗದ ಇಎಸ್​ಐ ಖಾತೆದಾರರ ಕ್ಲೈಮುಗಳನ್ನು ನೋಡಿ ಹೋಗುತ್ತಾರೆ.

    ದೂರದೂರಿಗೆ ಹೋಗಬೇಕು: ಜಿಲ್ಲೆಯಲ್ಲಿ ಇಎಸ್​ಐ ಸೌಲಭ್ಯ ಪಡೆಯಲು ಅರ್ಹರಾದ 10 ಸಾವಿರಕ್ಕೂ ಅಧಿಕ ಕಾರ್ವಿುಕರಿದ್ದಾರೆ. ಆದರೆ, ಸದ್ಯ ಜಿಲ್ಲೆಯ ದಾಂಡೇಲಿಯಲ್ಲಿ ಮಾತ್ರ ಪೂರ್ಣ ಪ್ರಮಾಣದ ಇಎಸ್​ಐ ಆಸ್ಪತ್ರೆ ಇದೆ. ಅದರ ಜತೆ 6480 ಕಾರ್ವಿುಕರು ತಮ್ಮ ಹೆಸರು ಜೋಡಿಸಿಕೊಂಡಿದ್ದಾರೆ. ಜಿಲ್ಲೆಯ ಇತರ ತಾಲೂಕುಗಳ ಹಲವು ನೌಕರರು ದಾಂಡೇಲಿಗೆ ತೆರಳಲು ಸೂಕ್ತ ಬಸ್ ಸೌಕರ್ಯವಿಲ್ಲದ ಕಾರಣ ಹೊರ ಜಿಲ್ಲೆಗಳ ಆಸ್ಪತ್ರೆಯೊಂದಿಗೆ ತಮ್ಮ ಹೆಸರು ಜೋಡಿಸಿಕೊಂಡಿದ್ದಾರೆ. ಕಳೆದ ಲಾಕ್​ಡೌನ್ ಅವಧಿಯಲ್ಲಿ ಹೊರ ಜಿಲ್ಲೆಗಳಿಗೆ ತೆರಳಲಾಗದೆ ಸಾಕಷ್ಟು ಕಾರ್ವಿುಕರು ತೊಂದರೆ ಅನುಭವಿಸಬೇಕಾಯಿತು.

    ಹಲ ವರ್ಷಗಳ ಬೇಡಿಕೆ: ಕಾರವಾರದಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರ, ಸೀಬರ್ಡ್ ನೌಕಾ ಯೋಜನೆಯಲ್ಲಿ ಹೊರ ಗುತ್ತಿಗೆ, ಖಾಸಗಿ ಕಂಪನಿಗಳ ಸಾವಿರಾರು ಉದ್ಯೋಗಿಗಳಿದ್ದಾರೆ. ಅಲ್ಲದೆ, ಬಿಣಗಾ ಗ್ರಾಸಿಂ ರಾಸಾಯನಿಕ ಕಾರ್ಖಾನೆ ಸೇರಿ ವಿವಿಧ ಉದ್ಯಮಗಳಿಂದ ಇಎಸ್​ಐ ಸೌಲಭ್ಯ ಪಡೆಯಲು ಅರ್ಹರಾದ ನಾಲ್ಕೈದು ಸಾವಿರಕ್ಕೂ ಅಧಿಕ ಕಾರ್ವಿುಕರಿದ್ದರೂ ಇಲ್ಲಿ ಅವರಿಗಾಗಿ ಆಸ್ಪತ್ರೆ ಇಲ್ಲ. ಉದ್ಯೋಗ ನೀಡುವ ಕಂಪನಿಗಳಿಂದ ಮಾಸಿಕ ವೇತನದಲ್ಲಿ ನೂರಾರು ರೂಪಾಯಿಗಳನ್ನು ಕಡಿತ ಮಾಡಲಾಗುತ್ತದೆ. ಆದರೆ, ಚಿಕಿತ್ಸೆ ಪಡೆಯಲು ಅಥವಾ ಆರೋಗ್ಯ ಸಂಬಂಧಿ ಬಿಲ್​ಗಳನ್ನು ಮರು ಪಾವತಿ ಮಾಡಿಕೊಳ್ಳಲು ಕಾರ್ವಿುಕರು ದಾಂಡೇಲಿ, ಹುಬ್ಬಳ್ಳಿ, ಕುಂದಾಪುರ, ಶಿವಮೊಗ್ಗ ಮುಂತಾದೆಡೆ ತೆರಳಬೇಕಿದೆ.

    ಶಿರಸಿ, ಕುಮಟಾದಲ್ಲೂ ಇಲ್ಲ: 2019ರ ಏಪ್ರಿಲ್​ನಿಂದ ಶಿರಸಿಯ ನ್ಯೂ ಎಪಿಎಂಸಿ ಯಾರ್ಡ್​ನಲ್ಲಿ ವಿಜಯಾ ಬ್ಯಾಂಕ್ ಸಮೀಪ ಪ್ರಾರಂಭವಾದ ಇಎಸ್​ಐ ಆಸ್ಪತ್ರೆ(ಎಂಇಯುಡಿ) ಕೆಲವೇ ದಿನದಲ್ಲಿ ಬಾಗಿಲು ಮುಚ್ಚಿದೆ. ಕುಮಟಾದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆ ತೆರೆಯುವ ಕನಸೂ ಈಡೇರಿಲ್ಲ.

    ಕಾರವಾರದಲ್ಲಿ ಪ್ರಾರಂಭವಾಗಬೇಕಿರುವ ಡಿಸ್ಪೆನ್ಸರಿಗೆ ವೈದ್ಯರ ನೇಮಕ ಮಾಡಿ ಕಾರ್ವಿುಕರಿಗೆ ವ್ಯವಸ್ಥೆ ಕಲ್ಪಿಸುವ ಕುರಿತು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಶೀಘ್ರ ಸಮಸ್ಯೆ ಬಗೆಹರಿಸಲು ವ್ಯವಸ್ಥೆ ಮಾಡಲಾಗುವುದು.

    ರೂಪಾಲಿ ನಾಯ್ಕ, ಶಾಸಕಿ

    ಈ ಸಮಸ್ಯೆಯ ಬಗ್ಗೆ ಅರಿವಿದೆ. ಇನ್ನೆರಡು ದಿನಗಳಲ್ಲಿ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ಕಾರ್ವಿುಕರಿಗೆ ಅನುಕೂಲವಾಗುವ ವ್ಯವಸ್ಥೆ ಕಲ್ಪಿಸಲಾಗುವುದು.

    ಶಿವರಾಮ ಹೆಬ್ಬಾರ, ಕಾರ್ವಿುಕ ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts