More

    ವರುಣನ ಆರ್ಭಟಕ್ಕೆ ಕಾರವಾರ ತತ್ತರ

    ಕಾರವಾರ: ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಚಂಡ ಮಾರುತ, ಮಳೆಗೆ ಕಾರವಾರ ತತ್ತರಿಸಿದೆ. ಮಂಗಳವಾರ 9 ತಾಸಿನ ಅವಧಿಯಲ್ಲಿ 129.8 ಮಿಲಿ ಮೀಟರ್ ಮಳೆಯಾಗಿದೆ.

    ಸೋಮವಾರ ರಾತ್ರಿ ಅಲ್ಪಸ್ವಲ್ಪ ಮಳೆಯಾಗಿತ್ತು. ಮಂಗಳವಾರ ಬೆಳಗ್ಗೆ 11 ಗಂಟೆಯ ನಂತರ ಶುರುವಾದ ಮಳೆ ಸಂಜೆಯವರೆಗೂ ಎಡೆಬಿಡದೇ ಸುರಿಯಿತು. ಬೆಳಗ್ಗೆ 8.30ರಿಂದ ಸಂಜೆ 5.30ರ ನಡುವಿನ ಅವಧಿಯಲ್ಲಿ 129.8 ಮಿಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆ ಬದಿ ವ್ಯಾಪಾರಸ್ಥರು ಸಾಮಗ್ರಿಗಳನ್ನು ರಕ್ಷಿಸಿಕೊಳ್ಳಲು ಪರದಾಡಿದರು. ಹಣ್ಣು, ತರಕಾರಿ ಮಾರಾಟಗಾರರು ವ್ಯಾಪಾರ ನಡೆಸಲು ಸಾಧ್ಯವಾಗದೇ ಮನೆಗೆ ತೆರಳಿದರು.

    ಕಾರವಾರದ ಸೇಂಟ್ ಜೋಸೆಫ್ ಶಾಲೆಯ ಎದುರಿನ ಕ್ರೀಡಾಂಗಣದಲ್ಲಿ ನೀರು ತುಂಬಿ ಜಲಾಶಯದಂತಾಗಿತ್ತು. ಭದ್ರಾ ಹೋಟೆಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸರ್ವೀಸ್ ರಸ್ತೆಯ ತುಂಬ ನೀರು ನಿಂತು ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ನಗರದ ಶಿವಾಜಿ ಆಟೋ ರಿಕ್ಷಾ ನಿಲ್ದಾಣದ ಸಮೀಪದ ಚರಂಡಿಯಲ್ಲಿ ಕೊಳಚೆ ನೀರು ಸಮರ್ಪಕವಾಗಿ ಹರಿಯದೇ ತೊಂದರೆ ಉಂಟಾಯಿತು. ಕೆಎಚ್​ಬಿಯಲ್ಲಿ ವಿವಿಧ ರಸ್ತೆಗಳಲ್ಲಿ ನೀರು ತುಂಬಿತು.

    ಭಾರಿ ಗಾಳಿ: ಗಂಟೆಗೆ 50 ರಿಂದ 85 ಕಿ.ಮೀ. ವೇಗದಲ್ಲಿ ಅರಬ್ಬಿ ಸಮುದ್ರದ ಕಡೆಯಿಂದ ಗಾಳಿ ಬೀಸುತ್ತಿದ್ದುದರಿಂದ ವಿವಿಧೆಡೆ ಹಾನಿ ಸಂಭವಿಸಿದೆ. ಸಮುದ್ರದಲ್ಲಿ ಅಬ್ಬರದ ಅಲೆಗಳು ಏಳುತ್ತಿದ್ದು, ಮಲ್ಪೆ ಭಾಗದ ಬೋಟ್​ಗಳು ಕಾರವಾರ ಬೈತಖೋಲ್ ಬಂದರಿನ ಸಮೀಪ ಬಂದು ರಕ್ಷಣೆ ಪಡೆದಿವೆ. ಕಾರವಾರದ ಯಾವುದೇ ಬೋಟ್​ಗಳು ಕಡಲಿಗೆ ಇಳಿದಿಲ್ಲ. ಕೋಸ್ಟ್ ಗಾರ್ಡ್ ಅಧಿಕಾರಿಗಳು ತಮ್ಮ ಸ್ಪೀಡ್ ಬೋಟ್ ಮೂಲಕ ಆಳ ಸಮುದ್ರಕ್ಕೆ ತೆರಳಿ ಅಲ್ಲಿದ್ದ ಮೀನುಗಾರರನ್ನು ಎಚ್ಚರಿಸಿ, ದಡಕ್ಕೆ ಕಳಿಸಿದರು.

    ಕಾರವಾರದ ನಗರಸಭೆ ಮಹಾತ್ಮಾಗಾಂಧಿ ಉದ್ಯಾನದ ಆವರಣದಲ್ಲಿದ್ದ ಮರವೊಂದು ಕಾಂಪೌಂಡ್ ಮೇಲೆ ಬಿದ್ದು, ಪಕ್ಕದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಕೋರ್ಟ್ ಆವರಣದಲ್ಲಿ ಸಣ್ಣ ಮರ ಬಿದ್ದಿದೆ. ಸದಾಶಿವಗಡದಲ್ಲಿ ಜಹಾಂಗಿರ್ ಹುಮಾಯುನ್ ಶೇಖ್ ಅವರ ಮನೆಯ ಮೇಲೆ ಮಾವಿನ ಮರ ಬಿದ್ದು ಸಾವಿರಾರು ರೂ. ಹಾನಿ ಸಂಭವಿಸಿದೆ.

    ವಿದ್ಯುತ್ ವ್ಯತ್ಯಯ: ನಗರದ ಕೆನರಾ ಬ್ಯಾಂಕ್ ಹಾಗೂ ಸೇಂಟ್ ಮೈಕಲ್ ಸಮೀಪ 11 ಕೆವಿ ವಿದ್ಯುತ್ ಲೈನ್ ಮೇಲೆ ಮರ ಮುರಿದು ಬಿದ್ದ ಕಾರಣ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಅಲ್ಲದೆ, ಗಾಳಿಯಿಂದ ಓಲಾಡಿ ಮೂರ್ನಾಲ್ಕು ಮೀಟರ್ ಆಚೆಯ ಮರಗಳೂ ವಿದ್ಯುತ್ ತಂತಿಗೆ ತಾಗುತ್ತಿರುವುದರಿಂದ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ರಿಪೇರಿಗೆ ಹರಸಾಹಸ ಪಡಬೇಕಾಯಿತು.

    ಇತರೆಡೆ ಕಡಿಮೆ: ಅಚ್ಚರಿಯ ಸಂಗತಿ ಎಂದರೆ ಕಾರವಾರ ತಾಲೂಕಿನಲ್ಲಿ ಮಾತ್ರ ಭಾರಿ ಮಳೆಯಾಗಿದೆ. ಪಕ್ಕದ ಅಂಕೋಲಾ ಸೇರಿ ಜಿಲ್ಲೆಯ ಬೇರೆ ಯಾವುದೇ ತಾಲೂಕಿನಲ್ಲಿ ಅಷ್ಟೊಂದು ಮಳೆಯಾಗಿಲ್ಲ. ಮಂಗಳವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 7 ಮಿಮೀ, ಭಟ್ಕಳದಲ್ಲಿ 7.2, ಹಳಿಯಾಳದಲ್ಲಿ 3.9, ಹೊನ್ನಾವರದಲ್ಲಿ 4.1, ಕುಮಟಾದಲ್ಲಿ 7.2, ಮುಂಡಗೋಡಿನಲ್ಲಿ 24.6, ಸಿದ್ದಾಪುರದಲ್ಲಿ 5.2, ಶಿರಸಿಯಲ್ಲಿ 0.5, ಜೊಯಿಡಾದಲ್ಲಿ 21.8, ಯಲ್ಲಾಪುರದಲ್ಲಿ 22.2 ಮಿಮೀ ಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts