More

    ವರದಿ ಬರುವ ಮೊದಲೇ ತೀರ್ಮಾನ

    ಹುಬ್ಬಳ್ಳಿ: ಕರೊನಾ ಲಕ್ಷಣಗಳನ್ನು ಹೊಂದಿದ್ದ ಅನಾರೋಗ್ಯ ಪೀಡಿತ ವೃದ್ಧನೊಬ್ಬ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಾಗ ಅದು ಕರೊನಾ ಪ್ರಕರಣ ಎಂದೇ ರ್ತಸಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಿದ ನಂತರ, ವರದಿ ನೆಗೆಟಿವ್ ಎಂದು ಬಂದಿರುವ ಪ್ರಕರಣ ನಡೆದಿದೆ.

    ಹಳೇ ಹುಬ್ಬಳ್ಳಿ ಜನ್ನತ್ ನಗರ ನಿವಾಸಿ ಹಜರತ್ ಸಾಬ್ ಮಹಬೂಬಸಾಬ್ ಪಟ್ಟಣಕಾರಿ (62) ಎಂಬ ವ್ಯಕ್ತಿ ಜೂ. 30ರಂದು ತೀವ್ರ ಜ್ವರದಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ರಕ್ತ ತಪಾಸಣೆ ಮಾಡಿದಾಗ ಪ್ಲೇಟ್​ಲೆಟ್ ಕಡಿಮೆ ಇದೆ ಎಂದು ವೈದ್ಯರು ಚಿಕಿತ್ಸೆ ನಿರಾಕರಿಸಿದ್ದರು. ನೇರವಾಗಿ ಕಿಮ್ಸ್​ಗೆ ದಾಖಲಿಸಿದಾಗ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಇವರಿಗೆ ಕೋವಿಡ್ ಲಕ್ಷಣಗಳಿವೆ ಎಂದು ರೋಗಿಯನ್ನು ನೋಡುತ್ತಿದ್ದ ವೈದ್ಯರು ತಿಳಿಸಿದ್ದರು. ಕೆಲವೇ ಗಂಟೆಗಳಲ್ಲಿ ವೃದ್ಧ ಮೃತಪಟ್ಟನು. ಕೋವಿಡ್ ಪಾಸಿಟಿವ್ ಇದ್ದುದರಿಂದ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತೀರ್ವನಿಸಿದ್ದರು.

    ಸೋಂಕಿತ ವ್ಯಕ್ತಿ ಎಂದು ಘೊಷಣೆಯಾದ ಬಳಿಕ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿಲ್ಲ. ಜಿಲ್ಲಾಡಳಿತದ ನಿರ್ದೇಶನದಂತೆ ಕುಟುಂಬದ ಕೆಲವರನ್ನು ಕರೆಯಿಸಿ ಸುರಕ್ಷತಾ ಕ್ರಮಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿದೆ. ಸೋಂಕಿತರು ಮೃತಪಟ್ಟ ಪಟ್ಟಿಯಲ್ಲಿ ವೃದ್ಧನ ಹೆಸರೂ ದಾಖಲಾಗಿದೆ.

    ಇದೆಲ್ಲ ಮುಗಿದ ಬಳಿಕ, ಗಂಟಲ ದ್ರವ ಮಾದರಿ ಪರೀಕ್ಷೆಯ ವರದಿ ಬಂದಿದ್ದು, ಅದರಲ್ಲಿ ನೆಗೆಟಿವ್ ಎಂದು ಖಾತ್ರಿಯಾಗಿದೆ. ವರದಿ ಬಂದ ಮೇಲೆ ಶವ ಹಸ್ತಾಂತರಿಸಬೇಕೊ ಬೇಡವೊ ಎಂದು ನಿರ್ಧರಿಸಬೇಕಿತ್ತು. ಸ್ವಲ್ಪ ಕಾದಿದ್ದರೆ, ಕುಟುಂಬದವರಿಗೇ ಶವ ಹಸ್ತಾಂತರಿಸಲು ಅವಕಾಶವಿತ್ತು, ಕಿಮ್ಸ್​ನವರು ಅನಗತ್ಯ ಗೊಂದಲ ಮಾಡಿಕೊಂಡಿದ್ದರಿಂದ ಅನ್ಯಾಯವಾಗಿದೆ ಎಂದು ಅಮನ್ ಫೌಂಡೇಷನ್ ಮತ್ತು ಮೃತ ವೃದ್ಧನ ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮೃತದೇಹ ತ್ವರಿತವಾಗಿ ಹಸ್ತಾಂತರಿಸಲು ಒತ್ತಾಯ: ಕೋವಿಡೇತರ ಪ್ರಕರಣಗಳಲ್ಲಿ ಮೃತ ವ್ಯಕ್ತಿಯ ಶವವನ್ನು ಕುಟುಂಬದವರಿಗೆ ತ್ವರಿತವಾಗಿ ಹಸ್ತಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ಹುಬ್ಬಳ್ಳಿ ಅಂಜುಮನ್ ಎ ಇಸ್ಲಾಂ ಸಂಸ್ಥೆ ಆಗ್ರಹಿಸಿದೆ. ಈ ಕುರಿತು ಸಂಸ್ಥೆಯು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ಮನವಿ ಸಲ್ಲಿಸಿದೆ. ಮೃತ ವ್ಯಕ್ತಿಯ ಕೋವಿಡ್ ವರದಿ 6 ಗಂಟೆಯೊಳಗೆ ಒದಗಿಸಬೇಕು ಎಂದು ಕೋರಿದೆ. ಸಂಸ್ಥೆಯ ಅಧ್ಯಕ್ಷ ಎಂ.ಸಿ. ಸವಣೂರ, ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ, ಎಂ.ಎ. ಪಠಾಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts